ಬೀದರ: ವೈಜ್ಞಾನಿಕವಾಗಿ ಅಣಬೆ ಬೇಸಾಯ ಅಳವಡಿಸಕೊಂಡಲ್ಲಿ ತಮ್ಮ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿಯಲ್ಲಿ
ಕಲಿತ ತಾಂತ್ರಿಕತೆಗಳನ್ನು ಯುವ ರೈತ ಹಾಗೂ ರೈತ ಮಹಿಳೆಯರಿಗೆ ಅಣುಬೆ ಬೇಸಾಯ ಉತ್ತಮ ಉದ್ಯೋಗವಾಗಿ ಹೊರಹೊಮ್ಮಲಿ ಎಂದು ನಬಾರ್ಡ್ ವ್ಯವಸ್ಥಾಪಕ ರಾಮರಾವ್ ಹೇಳಿದರು.
ತಾಲೂಕಿನ ಜನವಾಡಾ ಕೆವಿಕೆಯಲ್ಲಿ ಅಣಬೆ ಬೇಸಾಯ ಮತ್ತು ಅದರ ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹಾಗು ಗ್ರಾಮೀಣ ಯುವ ವೃಂದಕ್ಕೆ ನರ್ಬಾಡ್ ಬ್ಯಾಂಕ್ ಸಹಕಾರಿಯಾಗಿದೆ. ಬ್ಯಾಂಕ್ ಆಯೋಜಿಸಿದ ಉದ್ಯೋಗ ಮೇಳಗಳಲ್ಲಿ ಯುವಕರಿಗೆ ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ಎಲ್ಲಾ ಸೌಲಭ್ಯಗಳೊಂದಿಗೆ ಅವಕಾಶವಿದೆ ಎಂದು ತಿಳಿಸಿದರು.
ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್.ಎಂ ಅಧ್ಯಕ್ಷತೆ ವಹಿಸಿ, ರೈತರು-ಯುವಕರು ಅಣುಬೆ ಬೇಸಾಯ ಅಳವಡಿಸಿಕೊಂಡಿದ್ದಲ್ಲಿ ವೃತ್ತಿಪರತೆ ಸಾಧಿ ಸಬಹುದು ಹಾಗೂ ಗುಣಮಟ್ಟದ ಕೃಷಿ ಉತ್ಪಾದನೆ ಸಾಕಾರವಾಗುವುದು. ಈ ನಿಟ್ಟಿನಲ್ಲಿ ಕೆವಿಕೆ ಹಲವಾರು ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳ ಸದುಪಯೋಗಕ್ಕೆ ಮುಂದಾಗಬೇಕು ಎಂದು ಕೋರಿದರು.
ತರಬೇತಿಯ ಸಂಯೋಜಕರಾದ ಗೃಹ ವಿಜ್ಞಾನಿ ಡಾ| ರಾಜೇಶ್ವರಿ ಆರ್. ಮಾತನಾಡಿ, ಕೃಷಿ ಭೂಮಿ ಇಲ್ಲದಿದ್ದರೂ ಅಣುಬೆ ಬೇಸಾಯ ಮಾಡಿ ಸಂಪಾದನೆ ಮಾಡಬಹುದು. ಅಣುಬೆಯು ಆರೋಗ್ಯದ ದೃಷ್ಟಿಯಲ್ಲಿ ಅತಿ ಮಹತ್ವದ ಪಾತ್ರ ವಹಿಸಲಿದೆ ಎಂದರು. ತಜ್ಞ ವಿಜ್ಞಾನಿ, ಅನುಭವಿ ರೈತರು ಅಣಬೆ ಕೃಷಿಯ ಮಹತ್ವ, ಅಣಬೆ ಉತ್ಪಾದನೆಗಿರುವ ಅವಕಾಶಗಳು ಮತ್ತು ಕೃಷಿ ವ್ಯವಹಾರ ಚಟುವಟಿಕೆ, ಪ್ರಾಯೋಗಿಕವಾಗಿ ಆಯಸ್ಟರ್ ಮತ್ತು ಹಾಲು ಅಣಬೆ ಬೇಸಾಯ ವಿಧಾನ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಡಾ| ಅಕ್ಷಯಕುಮಾರ ಸ್ವಾಗತಿಸಿದರು. ಡಾ| ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು. ಸಿದ್ದು ಮಣಿಗೆ ವಂದಿಸಿದರು.