Advertisement

ವೇತನ ಸಹಿತ ರಜಾ ದಿನ ಏರಿಕೆ, ಸ್ವಾಗತಾರ್ಹ ಹೆಜ್ಜೆ

01:48 AM Feb 05, 2021 | Team Udayavani |

ಕಾರ್ಮಿಕರ ವೇತನ ಸಹಿತ ರಜೆ ದಿನಗಳನ್ನು 30-45 ದಿನಗಳಿಗೆ ಹೆಚ್ಚಿಸಲು ಹಾಗೂ ಬಳಕೆಯಾಗದ ವೇತನಸಹಿತ ರಜೆ ದಿನಗಳನ್ನು ಮುಂದಿನ ವರ್ಷಕ್ಕೆ ವಿಸ್ತರಿಸಲು ಅವಕಾಶ ಕಲ್ಪಿಸುವಂಥ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಅನ್ಯ ರಾಜ್ಯಗಳಲ್ಲಿ ಕಾರ್ಮಿಕರ ರಜೆ ದಿನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದ ಉದ್ಯೋಗ ವರ್ಗಕ್ಕೂ ಅನುಕೂಲ ಕಲ್ಪಿಸುವುದು ಇದರ ಉದ್ದೇಶ, ಖಾಸಗಿ ಕಂಪೆನಿಗಳ ಮಾಲಕರೊಂದಿಗೂ ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ. ಇದು ನಿಜಕ್ಕೂ ಶ್ಲಾಘನೀಯ ಹಾಗೂ ಉದ್ಯೋಗ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರುವಂಥ ನಡೆ.

Advertisement

ಕೋವಿಡ್‌ ಕಾಲಘಟ್ಟದಲ್ಲಿ ಅನೇಕ ಕಂಪೆನಿಗಳು ವರ್ಕ್‌ಫ್ರಂ ಹೋಂ ವ್ಯವಸ್ಥೆ ಜಾರಿ ಮಾಡಿದ್ದರಿಂದಾಗಿ ಉದ್ಯೋಗಗಳ ವೈಖರಿಯಲ್ಲಿ ಅಪರಿಮಿತ ಬದಲಾವಣೆಯಾಗಿದೆ. ಗಮನಾರ್ಹ ಸಂಗತಿಯೆಂದರೆ ಇದರಿಂದಾಗಿ ಕಂಪೆನಿಗಳ ಉತ್ಪಾದಕತೆಯೂ ಹೆಚ್ಚುತ್ತಿದೆ ಎನ್ನುತ್ತವೆ ಬಹುತೇಕ ಅಧ್ಯಯನ ವರದಿಗಳು. ಆದರೆ ವರ್ಕ್‌ಫ್ರಂ ಹೋಂನಂಥ ವ್ಯವಸ್ಥೆ ಜಾರಿಯಾದ ಮೇಲೂ ಉದ್ಯೋಗಿಗಳ ಮೇಲಿನ ಕೆಲಸದ ಹೊರೆಯೇನೂ ತಗ್ಗುತ್ತಿಲ್ಲ, ಬದಲಾಗಿ ಅಧಿಕವಾಗುತ್ತಲೇ ಸಾಗಿದೆ. ಬೆಳಗ್ಗೆ ಆರಂಭವಾಗುವ ಕೆಲಸ ರಾತ್ರಿಯಾದರೂ ಮುಗಿಯುವುದಿಲ್ಲ ಎನ್ನುವ ನಿಟ್ಟುಸಿರಿನ ಧ್ವನಿಗಳೇ ಕೇಳಿಸುತ್ತವೆ. ಅತ್ತ ಮನೆಯನ್ನು ನಿಭಾಯಿಸಬೇಕಾದ ಒತ್ತಡ, ಇತ್ತ ಕೆಲಸದ ಭಾರ ಅವರನ್ನು ಕುಸಿಯುವಂತೆ ಮಾಡುತ್ತಿದೆ. ಹೀಗಾಗಿ ವೇತನ ಸಹಿತ ರಜೆಯಲ್ಲಿನ ಹೆಚ್ಚಳದಂಥ ಕ್ರಮ ನಿಜಕ್ಕೂ ನೌಕರ ವರ್ಗಕ್ಕೆ ಚೇತೋಹಾರಿಯಾಗಲಿದೆ.

ವರ್ಕ್‌-ಲೈಫ್ ಸಮತೋಲನವೆನ್ನುವುದು ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕ. ಈ ಸಮತೋಲನ ಸಾಧ್ಯವಾಗಲು, ರಜೆಗಳ ಬಳಕೆಯ ಕೊಡುಗೆಯೂ ಅಪಾರವಾಗಿರುತ್ತದೆ. ಉದ್ಯೋಗಿಯೊಬ್ಬನಿಗೆ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಹೆಚ್ಚು ಸಮಯ ದೊರೆತರೆ, ಕೌಟುಂಬಿಕ ಮಾನಸಿಕ ಆರೋಗ್ಯವೂ ಸದೃಢವಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ವೇತನ ಸಹಿತ ಹೆಚ್ಚುವರಿ ರಜಾ ದಿನಗಳು ಸಿಗುವುದರಿಂದ ಉದ್ಯೋಗಿಗಳಲ್ಲಿ ಒತ್ತಡ, ದುಗುಡ, ಖನ್ನತೆಯಂಥ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಅವರ ಸಾಮಾಜಿಕ ಸಂಬಂಧಗಳಲ್ಲೂ ಸುಧಾರಣೆಯಾಗುತ್ತದೆ.

ಆದಾಗ್ಯೂ ರಜೆಗಳು ಉದ್ಯೋಗಿಗಳ ಹಕ್ಕಾಗಿದ್ದರೂ ಭಾರತ, ಜಪಾನ್‌, ಚೀನ ಸೇರಿದಂತೆ ಅನೇಕ ಏಷ್ಯನ್‌ ರಾಷ್ಟ್ರಗಳ ಕಂಪೆನಿಗಳು ಇದು ತಾವು ಉದ್ಯೋಗಿಗಳಿಗೆ ಕೊಡುವ ಬೆನಿಫಿಟ್‌ ಎಂಬ ಧೋರಣೆಯಲ್ಲಿವೆ, ಈ ಸಂಗತಿಯೇ ಅವುಗಳ ಉತ್ಪಾದಕತೆ, ಉದ್ಯೋಗ- ಉದ್ಯೋಗದಾತ ಸಂಸ್ಥೆಯ ನಡುವಿನ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಜರ್ನಲ್‌ ಆಫ್ ಆರ್ಗನೈಸೇಶನಲ್‌ ಬಿಹೇವಿಯರ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿತ್ತು.

ಸಂಸ್ಥೆಗಳು ಇದನ್ನು ಋಣಾತ್ಮಕತೆಯ ದೃಷ್ಟಿಯಿಂದ ನೋಡಲೇ ಬಾರದು. ಏಕೆಂದರೆ ಉದ್ಯೋಗದಾತ ಸಂಸ್ಥೆಗಳಿಗೂ ಕೆಲಸಗಾರರು ಸರಿಯಾಗಿ ವಾರ್ಷಿಕ ರಜೆಗಳನ್ನು ಬಳಸಿಕೊಳ್ಳುವುದರಿಂದ ಸಹಾಯ ವಾಗುತ್ತದೆ. ಉದ್ಯೋಗಿಗಳಿಗೆ ಸಂಸ್ಥೆಯ ಮೇಲೆ ವಿಶ್ವಾಸ ಹೆಚ್ಚುವುದರಿಂದ, ಅವರ ಕಾರ್ಯವೈಖರಿಯಲ್ಲಿ ಗುಣಾತ್ಮಕ ಬದಲಾವಣೆಗಳು ಬರುತ್ತವೆ, ಪರಿಣಾಮವಾಗಿ ಕಂಪೆನಿಯೊಂದರ ಉತ್ಪಾದಕತೆಯೂ ಹೆಚ್ಚುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next