ಉಡುಪಿ: ಉಡುಪಿ ಜಿಲ್ಲೆ ರಕ್ತದಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಸಮುದಾಯದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾಮಾಜಿಕ ಕಳಕಳಿಯ ವಿಷಯ ಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶೋಕ್ ಎಚ್.ಹೇಳಿದರು.
ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ, ಎಚ್.ಡಿ.ಎಫ್.ಸಿ. ಬ್ಯಾಂಕ್, ಯುವ ರೆಡ್‌ಕ್ರಾಸ್, ಎನ್ನೆಸ್ಸೆಸ್, ರೋಟರ್ಯಾಕ್ಟ್ ಕ್ಲಬ್, ಸರಕಾರಿ ಪಾಲಿಟೆಕ್ನಿಕ್ ಉಡುಪಿ, ಲಯನ್ಸ್ ಕ್ಲಬ್ ಪರ್ಕಳ, ಉಡುಪಿ ಮಿಡ್‌ಟೌನ್, ಐಟಿಐ ಉಡುಪಿ, ಅಜ್ಜರಕಾಡು ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಘಟಕ, ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ ಎನ್ನೆಸ್ಸೆಸ್ ಘಟಕ, ರೋಟರಿ ಕ್ಲಬ್ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ನಡೆದ ಬೃಹತ್‌ರಕ್ತದಾನ ಶಿಬಿರ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ದ.ಕ ಮತ್ತು ಉಡುಪಿ ಜಿಲ್ಲೆ ಮೀನು ಮಾರಾಟ ಸಂಘದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಲಯನ್ಸ್ ಜಿಲ್ಲಾ ಗರ್ವನರ್ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಪರ್ಕಳ ಲಯನ್ಸ್‌ಕ್ಲಬ್ ಅಧ್ಯಕ್ಷ ಜಯರಾಮ ಜಿ., ಮಣಿಪಾಲ ಟೌನ್ ರೋಟರಿಕ್ಲಬ್ ಅಧ್ಯಕ್ಷ ಶ್ರೀಧರ, ಉಡುಪಿ ಎಚ್‌ಡಿಎಫ್ಸಿ ಬ್ಯಾಂಕ್ ಪ್ರಬಂಧಕ ಪ್ರಸನ್ನ ಕುಮಾರ್, ಅಜ್ಜರಕಾಡು ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ರಾಜೇಂದ್ರ ಕೆ., ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ|ವೀಣಾಕುಮಾರಿ, ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಬಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್. ಉದಯ್‌ಕುಮಾರ್ ಶೆಟ್ಟಿ, ಜಗದೀಶ್, ಗಣಪತಿ ಉಪಸ್ಥಿತರಿದ್ದರು.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸುಮಾ ಎಸ್., ನಾಗರಾಜ್ ಜಿ.ಎಸ್. ನಿರೂಪಿಸಿದರು. ರಾಜ್ಯ ಪರಿಷತ್ ಸದಸ್ಯ ಕೆ. ಕಿರಣ್ ಹೆಗ್ಡೆ ವಂದಿಸಿದರು.
ಗೌರವ
ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಗೋವಾ ಕ್ವಾಲಿಟಿ ಎಕ್ಸ್‌ಪೋರ್ಟ್ಸ್ನ ಜನಾಬ್ ಎಂ.ಎಂ. ಇಬ್ರಾಹಿಂ ದುಬೈ, ಮುಂಬಯಿ ಪೆನಿನ್ಸುಲ ಗ್ರೂಪ್ ಆಫ್ ಹೊಟೇಲ್‌ನ ಅಧ್ಯಕ್ಷ ಕರುಣಾಕರ್‌ಆರ್. ಶೆಟ್ಟಿ, ದುಬೈ ನಜನಾಬ್ ಎ. ಆರ್. ಬ್ಯಾರಿ, ಜಿಲ್ಲಾ ಮೊಗವೀರ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್ ಕರ್ಕೆರಾ, ಗಂಗೊಳ್ಳಿ ರಕ್ತದಾನಿ ದಿವಾಕರ್ ಎನ್.ಖಾರ್ವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.