ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳ, ಶಾಲೆಗಳ ಆವರಣ, ಗ್ರಾಪಂ ಹಾಗೂ ಸಾರ್ವಜನಿಕ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಚಾರ ಫಲಕಗಳನ್ನು ಹಾಗೂ ಗೋಡೆ ಬರಹಗಳನ್ನು ಬರೆಸಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಆವರಣದಲ್ಲಿ ಗುರುವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ವಿಶೇಷವಾಗಿ ಹೆಣ್ಣು ಮಕ್ಕಳನ್ನು ರಕ್ಷಿಸಲು ಮುಂದಾಗಬೇಕು ಎಂದರು.
ಅರಿವು ಮೂಡಿಸಬೇಕು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ನಂತರ ಹೆಣ್ಣು ಮಕ್ಕಳಿಗೆ 16ನೇ ವರ್ಷದಲ್ಲಿಯೇ ಬಾಲ್ಯ ವಿವಾಹ ಮಾಡುತ್ತಿರುವುದು ಕೆಲವೆಡೆ ನಡೆಯುತ್ತಿದ್ದು, ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಂಡ ಗಳಲ್ಲಿ ನಡೆಯುತ್ತಿದೆ. ಈ ಪ್ರದೇಶಗಳ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹ ದಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ವಿಶೇಷವಾಗಿ ಬಾಲ್ಯವಿವಾಹಕ್ಕೆ ಪ್ರೋತ್ಸಾಹಿ ಸುವ ಪೋಷಕರಿಗೆ ಆಗುವ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕೆಂದರು.
ಸಹಾಯವಾಣಿ, ಪಾಲನಾ ಕೇಂದ್ರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಲಕ್ಷ್ಮೀ ದೇವಮ್ಮ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಸಂಕಷ್ಟ ಪರಿಸ್ಥಿತಿಯಲ್ಲಿರುವ ಅನಾಥ, ನಿರ್ಗತಿಕ, ದೌರ್ಜನ್ಯಕ್ಕೀಡಾದ ದುರುಪಯೋಗ ಮಾಡುತ್ತಿರುವ ಪೋಷಕ ಕುಟುಂಬಗಳಲ್ಲಿರುವ ಮಕ್ಕಳಿಗೆ, ಬಾಲ ಕಾರ್ಮಿಕರಿಗೆ ಕಾನೂನು ಸಂಘರ್ಷಕ್ಕೊಳಪಟ್ಟ ಮಕ್ಕಳಿಗೆ ಹಾಗೂ ಇತರೆ ಎಲ್ಲಾ ತರಹದ ಸಮಸ್ಯೆಗೊಳಪಟ್ಟ ಮಕ್ಕಳಿಗೆ ಪಾಲನೆ, ಪೋಷಣೆ, ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತದೆ. ಘಟಕದಿಂದ ಸರ್ಕಾರಿ ಬಾಲಕಿಯರ ಬಾಲ ಮಂದಿರ, ತೆರೆದ ತಂಗುದಾಣ, ವಿಶೇಷ ದತ್ತು ಕೇಂದ್ರ, ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಮಕ್ಕಳ ಸಹಾಯವಾಣಿ (1098) ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ನೋಮೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಹರಿಪ್ರಸಾದ್, ಸುಧಾಕರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.