Advertisement

ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಿ; ಎಂ. ಶ್ರೀಧರ

05:15 PM Jun 30, 2022 | Team Udayavani |

ಚಾಮರಾಜನಗರ: ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ಅರಿವು ಮೂಡಿಸುವುದರ ಜೊತೆಗೆ ಮಕ್ಕಳ ಸಂಬಂಧಿತ ದೂರುಗಳು ಬಂದಲ್ಲಿ ಮಕ್ಕಳ ಸ್ನೇಹಿಯಾಗಿ ಸ್ಪಂದಿಸಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಎಂ. ಶ್ರೀಧರ ಹೇಳಿದರು.

Advertisement

ಬುಧವಾರ, ನಗರದ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್‌ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ವಿಶೇಷ ಮಕ್ಕಳ ಪೊಲೀಸ್‌ ಕಲ್ಯಾಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಸಾಗಾಣಿಕೆಯ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮಕ್ಕಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಹಾಗೂ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಸೇರಿದಂತೆ ಮಕ್ಕಳ ರಕ್ಷಣೆ ಸಂಬಂಧಿತ ಕಾಯ್ದೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸರು ಸಂಪೂರ್ಣ ಮಾಹಿತಿ ಹೊಂದಿರಬೇಕು. ಮಕ್ಕಳ ಮೇಲಿನ ದೌರ್ಜನ್ಯ ಸಂಬಂಧಿತ ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಿ ಮಕ್ಕಳ ಸ್ನೇಹಿಯಾಗಿ ವರ್ತಿಸಬೇಕು. ಪೋಕ್ಸೊ, ಬಾಲ್ಯ ವಿವಾಹ ಅಪರಾಧಗಳಿಗೆ ವಿಧಿಸುವ ಶಿಕ್ಷೆಗಳ ಬಗ್ಗೆ ಸಾರ್ವ ಜನಿಕರಿಗೆ ಮನದಟ್ಟು ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕಲು ಪೊಲೀಸ್‌ ಇಲಾಖೆ ಮುಂಚೂಣಿಯಲ್ಲಿದೆ. ಮಕ್ಕಳಿಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಿ ದೂರು ದಾಖಲಿಸಿ ವಿಚಾರಣೆ ನಡೆಸುವಂತೆ ಠಾಣಾಧಿಕಾರಿ ಗಳಿಗೆ ಸೂಚಿಸಲಾಗಿದೆ. ಪ್ರತಿ ಠಾಣೆಗಳಲ್ಲಿಯೂ ಸಹ ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗೀತಾಲಕ್ಷ್ಮಿ ಮಾತನಾಡಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ದೌರ್ಜನ್ಯ ಸಂಬಂಧಿತ ದೂರುಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಅತಿ ಹೆಚ್ಚು ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬರುವ ಪ್ರದೇಶ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದರು.

Advertisement

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಬಾಲ್ಯ ವಿವಾಹವನ್ನು ತಡೆಗಟ್ಟಲು ಪೊಲೀಸರ ಸಂಪೂರ್ಣ ಸಹಕಾರ ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹದ ವಿರುದ್ಧ ಅರಿವು ಮೂಡಿಸುವುದರ ಜೊತೆಗೆ ಅಪರಾಧದ ಶಿಕ್ಷೆಯ ಪ್ರಮಾಣ ಕುರಿತು ತಿಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋವಿಂದ, ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್‌, ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್‌ ಅಧಿಕಾರಿ ಜಿ.ಎಸ್‌. ಪ್ರಸನ್ನಕುಮಾರ್‌, ಬೆಂಗಳೂರಿನ ಡಿ.ಜಿ.ಪಿ ತರಬೇತಿ ಕಚೇರಿಯ ಪೊಲೀಸ್‌ ತರಬೇತುದಾರ ಸಿ.ಜಿ. ರೋಹಿತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next