ಮೈಸೂರು: ಸಾಧನೆಗಳ ಮೂಲಕವೇ ಗಿನ್ನಿಸ್ ದಾಖಲೆ ಬರೆದಿರುವ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡುಗಳಲ್ಲಿ ಹಲ್ಲಿನಿಂದ 2 ತೆಂಗಿನಕಾಯಿ ಸುಲಿದು, 54 ಕೆ.ಜಿ. ತೂಕದ ವ್ಯಕ್ತಿಯನ್ನೂ ಹಲ್ಲಿನಿಂದ ಎತ್ತಿ ಮತ್ತೂಂದು ಸಾಧನೆ ಮಾಡುವ ಪ್ರಯತ್ನ ನಡೆಸಿದರು.
ಈ ಸಾಹಸಮಯ ಪ್ರದರ್ಶನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ವೇದಿಕೆಯಾಯಿತು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಪಿ.ಜೆ.ಗೌತಮ್‌ವರ್ಮ ತಮ್ಮ ಸಾಧನೆ ಮೂಲಕ ಅಚ್ಚರಿ ಮೂಡಿಸಿದರು. ಕೇವಲ 29 ಸೆಕೆಂಡ್‌ನಲ್ಲಿ 2 ತೆಂಗಿನಕಾಯಿ ಸುಲಿದ ಗೌತಮ್, ಹೊಸ ದಾಖಲೆಯತ್ತ ಹೆಜ್ಜೆ ಹಾಕಿದರು.
ಇದಾದ ಬಳಿಕ 54 ಕೆಜಿ ತೂಕದ ವ್ಯಕ್ತಿಯನ್ನು ಹಲ್ಲಿನಿಂದ ಎತ್ತಿ, ನೂತನ ದಾಖಲೆ ಬರೆಯುವ ಪ್ರಯತ್ನ ಮಾಡಿದರು. ಇದಕ್ಕಾಗಿ 1 ವರ್ಷದಿಂದ ತಯಾರಿ ನಡೆಸಿದ್ದ ಇವರು, ತಮ್ಮ ಪ್ರದರ್ಶನದ ಕುರಿತ ದೃಶ್ಯಾವಳಿಗಳನ್ನು ಲಿಮ್ಕಾ ಬುಕ್ ಆಪ್ ರೆಕಾರ್ಡ್‌ಗೆ ಕಳುಹಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಹಿಂದಿನ ಸಾಧನೆ: ಸಾಧನೆ ಮಾಡುವ ಹವ್ಯಾಸ ಹೊಂದಿರುವ ಗೌತಮ್, ಈಗಾಗಲೇ ಕೇವಲ 42 ಸೆಕೆಂಡ್‌ಗಳಲ್ಲಿ ಹಲ್ಲಿನಿಂದ 3 ತೆಂಗಿನಕಾಯಿ ಸುಲಿದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಇಲ್ಲದೆ ಕಿವಿಯಿಂದ ಕಾರನ್ನು ಎಳೆದು ಲಿಮ್ಕಾ ದಾಖಲೆ, ಸೈಕಲ್‌ನ್ನು ಬಾಯಿಯಲ್ಲಿ ಕಚ್ಚಿಕೊಂಡು 40 ಅಡಿ ಎತ್ತರದ ತೆಂಗಿನ ಮರ ಹತ್ತಿರುವುದು,
38 ನಿಮಿಷದಲ್ಲಿ 51 ತೆಂಗಿನಕಾಯಿ ಸುಲಿದು ವಿಶ್ವದಾಖಲೆ ನಿರ್ಮಿಸಿದ್ದಾರೆ. 300 ಸ್ಟ್ರಾಗಳನ್ನು 5 ನಿಮಿಷಗಳ ಕಾಲ ಬಾಯಲ್ಲಿ ಇಟ್ಟುಕೊಂಡು ವಿಶ್ವದಾಖಲೆ ಮಾಡುವ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆಗೆ ಈವರೆಗೂ ಒಟ್ಟು 69 ಪ್ರಶಸ್ತಿಗಳು ಬಂದಿವೆ.
ಕರ್ನಾಟಕ ಬುಕ್ಸ್ ಆಫ್ ರೆಕಾರ್ಡ್: ರಾಜ್ಯದ ಹಲವು ಸಾಧಕರ ಸಾಧನೆಗಳನ್ನು ಗುರುತಿಸಲು ಯಾವುದೇ ದಾಖಲೆ ಪುಸ್ತಕಗಳಿಲ್ಲ. ಹೀಗಾಗಿ ಗೌತಮ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕರ್ನಾಟಕ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ಪುಸ್ತಕ ಆರಂಭಿಸಲಾಗುತ್ತಿದೆ.
ಈ ಮೂಲಕ ರಾಜ್ಯದ ಸಾಧಕರನ್ನು ಪ್ರೋತ್ಸಾಹಿಸಿ ವಿಶೇಷ ಸಾಧಕರಿಗೆ ಟ್ರಸ್ಟ್‌ನಿಂದ ಸನ್ಮಾನ ಹಾಗೂ 5 ಸಾವಿರ ನಗದು ಗೌರವಧನ ನೀಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಪಿ.ಜೆ.ಗೌತಮ್ ವರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಂಸಿಸಿ ಗುತ್ತಿಗೆದಾರ ವೆಂಕಟೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಕೋದಂಡರಾಮ, ಹರಿಹರನ್ ಇದ್ದರು.