Advertisement

ಜೋಗ- ಭೀಮೇಶ್ವರ

11:25 PM Jul 31, 2019 | mahesh |

ಮಳೆ ತನ್ನ ಬಿರುಸನ್ನು ಹೆಚ್ಚು ಮಾಡಿರುವುದರಿಂದ ಜೋಗ ಜಲಪಾತ ಮೈದುಂಬಿರುವ ಮಾಹಿತಿ ತಿಳಿದು, ಮೂಗೂರು ಮಲ್ಲಪ್ಪನವರ ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡಿ… ಇರೋದ್ರೊಳಗೆ ಒಮ್ಮೆ ನೋಡು ಈ ಜೋಗದ ಗುಂಡಿ’ ಹಾಡು ನೆನಪಾಯಿತು. ಹಾಗೇ ಇಂಟರ್‌ನೆಟ್‌ನಲ್ಲಿ ಜಲಪಾತಗಳ ಮಾಹಿತಿ ಹುಡುಕಾಡುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಭೀಮೇಶ್ವರ ಜಲಪಾತ. ವಿಶೇಷ ಎನಿಸಿದ ಆ ಜಲಪಾತದ ಭೇಟಿಗೆ ದಿನ ಪಕ್ಕಾ ಆಗಿತ್ತು.

Advertisement

ಪ್ರತಿದಿನ ಮೋಟರ್‌ ಸೈಕಲ್ನಲ್ಲಿ ಕಚೇರಿ- ಮನೆಗೆ ಮಾತ್ರ ಓಡಾಡುತ್ತಿದ್ದುದು ಯಾಕೋ ಬೇಸರ ತರಿಸಿತ್ತು. ಹೀಗೆ ಯೋಚಿಸುತ್ತಾ ಕುಳಿತಾಗ ವರುಣನ ಕೃಪೆಯಿಂದ ಮತ್ತೆ ಕಿರುನಕ್ಕ ಪ್ರಕೃತಿ ಸೌಂದರ್ಯದ ಆಸ್ವಾದನೆಯ ಅಭಿಯಾನಕ್ಕೆ ರೆಕ್ಕೆ ಪುಕ್ಕ ಮೂಡಿತು. ಮಳೆ ತನ್ನ ಬಿರುಸನ್ನು ಹೆಚ್ಚು ಮಾಡಿರುವುದರಿಂದ ಜೋಗ ತುಂಬಿ ಹರಿಯುವ ಮಾಹಿತಿ ತಿಳಿದು, ಮೂಗೂರು ಮಲ್ಲಪ್ಪನವರ ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡಿ… ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ’ ಹಾಡು ನೆನಪಾಯಿತು. ಹಾಗೇ ಸಾಮಾಜಿಕ ಜಾಲ ತಾಣದಲ್ಲಿ ಜಲಪಾತಗಳ ಮಾಹಿತಿ ಹುಡುಕಾಡುತ್ತಿದ್ದಾಗ, ಮತ್ತಷ್ಟು ಆಕರ್ಷಕ ಜಲಪಾತಗಳ ಬಗ್ಗೆ ಕುತೂಹಲ ಚಿಗುರಿಕೊಂಡವು. ಆ ಪೈಕಿ ವಿಶೇಷ ಅನಿಸಿದ್ದು ಭೀಮೇಶ್ವರ ಜಲಪಾತ.

ಉಡುಪಿ, ಮರವಂತೆ, ಭಟ್ಕಳಕ್ಕೆ. ಅಲ್ಲಿಂದ ಸಾಗರ ಮಾರ್ಗವಾಗಿ ಮೊದಲು ಭೀಮೇಶ್ವರ ಜಲಪಾತ, ಆ ಬಳಿಕ ಜೋಗಕ್ಕೆ ತೆರಳುವ ರೂಟ್ ಮ್ಯಾಪ್‌ ಸಿದ್ಧವಾಯಿತು. ಗೆಳೆಯನೂ ಅಣಿಯಾದ. ಮರುದಿನ ಸ್ವಲ್ಪ ತಡವಾಗಿ ರೂಟ್ ಮ್ಯಾಪ್‌ ಪ್ರಕಾರ ನಮ್ಮ ಬೈಕನ ದಿಕ್ಕು ನಿರ್ಧರಿಸುತ್ತ ಸಾಗಲಾರಂಭಿಸಿದೆವು.

ಆರಂಭದಿಂದಲೇ ರಸ್ತೆ ಕಾಣದಷ್ಟು ಮಳೆ. ಮಳೆಯ ನಡುವೆಯೆ ಭಟ್ಕಳ, ಸಿದ್ದಾಪುರ, ಸೊರಬ ಮಾರ್ಗವಾಗಿ ಸಾಗಿದ ನಮಗೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಿರು ಜಲಪಾತಗಳ ದರ್ಶನವಾಯಿತು. ಸುಮಾರು 11 ಗಂಟೆಗೆ ಗುಡಿಹಿತ್ತಲು ಎಂಬ ಸ್ಥಳ ತಲುಪಿದೆವು. ಅಲ್ಲಿ ಭೀಮೇಶ್ವರ ಕ್ರಾಸ್‌ನಿಂದ ಭೀಮೇಶ್ವರ ದೇವಸ್ಥಾನಕ್ಕೆ 2 ಕಿ.ಮೀ. ದೂರ. ಆಫ್ ರೋಡ್‌ ಜೀಪ್‌ ಅಥವಾ ಬೈಕ್‌ನಂತಹ ವಾಹನಕ್ಕೆ ಮಾತ್ರ ಯೋಗ್ಯವಾದ ಮಣ್ಣಿನ ಇಳಿಜಾರು ರಸ್ತೆ. ಮಳೆಯಿಂದ ಬೈಕ್‌ ಸ್ಕಿಡ್‌ ಆಗಿದ್ದರಿಂದ ಕೈಕಾಲು ಮುರಿದುಕೊಳ್ಳುವ ಭಯದಿಂದ ಮತ್ತೆ ಹೆಚ್ಚು ಸಾಹಸ ಮಾಡಲು ಹೋಗದೆ, ಅಲ್ಲೇ ಗಾಡಿ ನಿಲ್ಲಿಸಿ, ನಡೆದುಕೊಂಡು ಮುಂದೆ ಸಾಗಿದೆವು. ಇಲ್ಲಿಗೆ ಬಸ್‌ಗಿಂತ ಸ್ವಂತ ಅಥವಾ ಖಾಸಗಿ ವಾಹನಗಳಲ್ಲಿ ತೆರಳುವುದೇ ಒಳಿತು.

ಸುತ್ತಮುತ್ತ ಮರಗಳ ನಡುವೆ, ಹೆಜ್ಜೆ ಇಡುತ್ತಿದ್ದರೆ ಪ್ರಕೃತಿಯ ಸುಂದರ ನೋಟ ಕಣ್ತುಂಬಿಸಿಕೊಂಡಷ್ಟು ಸಾಲದು ಎಂಬಂತೆ ಮಳೆಯ ಪುಟ್ಟ ಪುಟ್ಟ ಹನಿಗಳು ಸಾಲಾಗಿ ನಮ್ಮನ್ನು ಸ್ವಾಗತಿಸಿದವು. ಮುಂದೆ ದೇವಸ್ಥಾನದ ಆರ್ಚಕರ ಭೆೇಟಿ ಮಾಡಿ, ದೇವಸ್ಥಾನದತ್ತ ಹೆಜ್ಜೆ ಹಾಕಿದೆವು.

Advertisement

ಪುರಾಣ
ಪುರಾಣ ಕಥೆಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಭೀಮನು ಶಿವಲಿಂಗ ಮತ್ತು ದೇವಸ್ಥಾನವನ್ನು ನಿರ್ಮಿಸಿದ್ದರಿಂದ ಭೀಮೇಶ್ವರ ದೇವಸ್ಥಾನ ಎಂದು ಹೆಸರಾಯಿತು. ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡಿ ಸರಳ ಹೊಳೆಯಿಂದ ಈ ಭೀಮೇಶ್ವರ ಜಲಪಾತ ಹುಟ್ಟಿಕೊಂಡಿತು ಎಂಬ ಕಥೆ ಇದೆ. ದೇವಸ್ಥಾನದ ಪಕ್ಕದಲ್ಲೇ ಈ ಸುಂದರ ಜಲಪಾತ ಹರಿಯುವುದರಿಂದಲೇ ಇದು ಅತ್ಯಾಕರ್ಷವಾಗಿ ಸಹಸ್ರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ವೀಕೆಂಡ್‌ಗೆ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ ಎಂದು ಅರ್ಚಕರು ಮಾಹಿತಿ ನೀಡಿದರು.

ಮುಂಗಾರು ಮಳೆ-2 ಚಿತ್ರದ ‘ಕನಸಲೂ ನೂರು ಬಾರಿ’ ಹಾಡಿನ ದೃಶ್ಯವೊಂದನ್ನು ಇಲ್ಲಿ ಸುಂದರವಾಗಿ ಸೆರೆ ಹಿಡಿದಿರುವುದನ್ನು ನೆನಪಿಸಿಕೊಳ್ಳಿ. ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಜಲಪಾತದ ಸೌಂದರ್ಯಕ್ಕೆ ಬೆರ ಗಾಗಿ ಹೋದೆವು. ಇಲ್ಲಿ ಮತ್ತೂಂದು ಅಚ್ಚರಿ ನಮ್ಮನ್ನು ಎದುರು ಗೊಂಡಿತು. ದೇವಸ್ಥಾನದಲ್ಲಿ ಸರಳ ವಿವಾಹವೊಂದು ನಡೆಯುತ್ತಿತ್ತು. ಮಳೆ ಜಾಸ್ತಿ ಇದ್ದ ಕಾರಣ ಕೆಮರಾಗೆ ಹೆಚ್ಚು ಕೆಲಸ ಕೊಡಲು ಧೈರ್ಯ ಸಾಲಲಿಲ್ಲ. ಸುಂದರ ಪ್ರಕೃತಿಯ ಮಧ್ಯೆ ಸಮಯ ಸರಿದದ್ದೆ ತಿಳಿಯಲಿಲ್ಲ.

ಬಳಿಕ ಅಲ್ಲಿಂದ ಜೋಗಕ್ಕೆ ನಮ್ಮ ಪಯಣ ಮುಂದು ವರಿಯಿತು. ಮಧ್ಯಾಹ್ನ 3 ಗಂಟೆಗೆ ಜೋಗಕ್ಕೆ ತಲುಪಿ ಊಟ ಮುಗಿಸಿ ಜಲಪಾತ ವೀಕ್ಷಣೆಗೆ ತೆರಳಿದೆವು. ಶರಾವತಿ ನದಿಯೂ ರಾಜ, ರಾಣಿ, ರೋರರ್‌ ಹಾಗೂ ರಾಕೆಟ್ ಎಂಬ ನಾಲ್ಕು ಕವಲುಗಳಾಗಿ ವಿಶ್ವವಿಖ್ಯಾತ ಜಲಪಾತದ ರೂಪದಲ್ಲಿ ಧುಮ್ಮಿಕ್ಕುವುದನ್ನು ನೋಡುವುದೇ ಒಂದು ದೈವಿಕ ಅನುಭೂತಿ. ಆಗಾಗಲೇ ಗಡಿಯಾರ 5ರತ್ತ ಮುಖ ಮಾಡಿದರಿಂದ ಹೆಚ್ಚು ಸಮಯ ಇಲ್ಲಿ ಉಳಿಯದೆ ಜೋಗಕ್ಕೆ ವಿದಾಯ ಹೇಳಿ ಮತ್ತೆ ಉಡುಪಿಯತ್ತ ಹೊರಟೆವು.

ಉಡುಪಿಯಿಂದ ಭೀಮೇಶ್ವರಕ್ಕೆ
ಭಟ್ಕಳ-ಸಿದ್ದಾಪುರ-ಸೊರಬ ಮಾರ್ಗವಾಗಿ (122 ಕಿ.ಮೀ)
ಮಂಗಳೂರಿನಿಂದ ಭೀಮೇಶ್ವರಕ್ಕೆ (176ಕಿ.ಮೀ)
ಭೀಮೇಶ್ವರದಿಂದ ಜೋಗಕ್ಕೆ (44 ಕಿ.ಮೀ.)
ಭಟ್ಕಳ ಸಾಗರಕ್ಕೆ ತೆರಳುವ ಬಸ್‌ಗಳು ಲಭ್ಯವಿವೆ.
Advertisement

Udayavani is now on Telegram. Click here to join our channel and stay updated with the latest news.

Next