ನಮ್ಮ ಇಡೀ ಜೀವನದ ಮುಕ್ಕಾಲು ಭಾಗದಷ್ಟು ನೆನಪು, ಸಂತೋಷವನ್ನು ಶಾಲೆ ದಿನಗಳಲ್ಲಿ ಕಳೆದಿರುತ್ತೇವೆ. ಈ ಜೀವನಕ್ಕೆ ಮತ್ತಷ್ಟು ಮೆರುಗು ತಂದದ್ದೇ ಮಳೆಗಾಲ. ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತವೆ. ನಮ್ಮ ಹಾಸ್ಟೆಲ್ ಜೀವನದ ಮಳೆಗಾಲವನ್ನು ಮರೆಯುವ ಹಾಗಿಲ್ಲ. ಹಾಸ್ಟೆಲ್‌ನಲ್ಲಿ ನಮ್ಮನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಹೊರಗೆ ಬಟ್ಟೆಯಿವೆ ಎಂಬ ನೆಪ ಹೇಳಿ ಮಳೆಯಲ್ಲಿ ನೆನೆದು ಹೋಗುತ್ತಿದ್ದೆವು.
ನಮ್ಮ ನರ್ಸ್ ಮಿಸ್ ಮಳೆ ಬಂದರೆ ಸಾಕು ಸ್ವೆಟರ್ ಹಾಕಿಕೊಳ್ಳಿ ಇಲ್ಲವಾದರೆ ಶೀತವಾಗುವುದು ಎಂದು ನಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನಮ್ಮದು ಹಾಸ್ಟೆಲ್ ಮೇಲ್ಛಾವಣಿಯ ಕಟ್ಟಡ. ಮೇಲ್ಛಾವಣಿಯೆಲ್ಲ ರಂದ್ರಗಳಾಗಿದ್ದವು. ಮಳೆಗಾಲ ಬಂದರೆ ಸಾಕು ಮುಗಿಯಿತು ನಮ್ಮ ಕಥೆ. ಮೋಡಗಳ ಯುದ್ಧದಲ್ಲಿ ಆಕಾಶದಿಂದ ಜೋರಾಗಿ ಸುರಿಯುವ ಮಳೆ ಬಂದರೆ ನಮ್ಮ ಛಾವಣಿಯೆಲ್ಲ ಸೋರಲಾರಂಭಿಸುವುದು. ಕೊನೆಗೆ ನೀರಿನಿಂದ ತುಂಬಿ ಹೋಗುತ್ತಿತ್ತು. ನಮ್ಮ ಪುಸ್ತಕ, ಬಟ್ಟೆ, ಬ್ಯಾಗ್ ಎಲ್ಲ ಒದ್ದೆಯಾಗಿರುತ್ತಿದ್ದವು. ನಮಗೆ ನೆಲ ಸ್ವತ್ಛ ಮಾಡುವುದೇ ಅಂದಿನ ಕೆಲಸವಾಗಿರುತ್ತಿತ್ತು.
ಹಾಸ್ಟೆಲ್‌ನಲ್ಲಿ ಸ್ಥಳ ಅಭಾವವಿರುವ ಕಾರಣ ಮಲಗಲು ಜಾಗವಿಲ್ಲದೆ ಟ್ರಂಕ್ ಮೇಲೆ ಮಲಗುತ್ತಿದ್ದೆವು. ಅದೇ ನಮ್ಮ ಪಾಲಿನ ಬೆಡ್. ಮಳೆ ನೀರಿನಲ್ಲೇ ನೆನೆಯುತ್ತಾ ಚಳಿಗೆ ನಡುಗಿ ಇಡೀ ರಾತ್ರಿ ಕಳೆಯುತ್ತಿದ್ದೆವು. ಮಳೆ ಬಂದಾಗ ರಾತ್ರಿ ಕರೆಂಟ್ ತೆಗೆದರೆ ಸಾಕು ನಾವೆಲ್ಲ ಹೆದರಿ ಒಂದು ಮೂಲೆ ಸೇರುತ್ತಿದ್ದೆವು. ತರಗತಿಯ ಸಮಯದಲ್ಲಿ ಮಳೆ ಬಂದರೆ ಛಾವಣಿಯ ಮೇಲೆ ಮಳೆ ಹನಿಯ ರಭಸಕ್ಕೆ ಶಿಕ್ಷಕರು ಪಾಠ ಮಾಡುವುದೇ ಕೇಳುತ್ತಿರಲಿಲ್ಲ. ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿಬಿಟ್ಟು ಆಟವಾಡುತ್ತಿದ್ದೆವು. ಮಳೆ ಬಂದಾಗ ಮನೆಯಿಂದ ತಂದ ಚುರುಮುರಿ ಜತೆಗೆ ಹಾಸ್ಟೆಲ್ ಅಲ್ಲಿ ಕೊಟ್ಟ ಚಾ ಸವಿಯುತ್ತಾ ಕಾಲ ಕಳಿದಿದ್ದೆ ಮಧುರ. ಈ ಕ್ಷಣಗಳು ಬರಿ ನಮಗೆ ನೆನಪುಗಳಷ್ಟೇ. ಆದರೆ ಬುದ್ದಿ ಬೆಳೆದಂತೆ ಮಳೆಗಾಲದ ಕಷ್ಟ ಅರಿವಾಗುತ್ತ ಹೋಯಿತು. ಕಳೆದ ವರ್ಷ ಮಳೆಯಿಂದ ಹೊಳೆಯ ಪ್ರವಾಹ ಬಂದು ಅದೆಷ್ಟು ಮನೆಗಳು ಬಿದ್ದು ಎಷ್ಟೋ ಕುಟುಂಬವು ಬೀದಿಗೆ ಬಂದಿದ್ದವು. ಕಳೆದ ವರ್ಷದ ಕರಾಳ ಮರೆಯಲಾಗದು.
–ಭೂಮಿಕಾ ದಾಸರಡ್ಡಿ, ಬಿದರಿ, ಕಂಠಿ ಕಾಲೇಜು, ಮುಧೋಳ