Advertisement
ಉಡುಪಿ:ಈಶ್ವರನಗರ ಹಾಗೂ ಮಣಿಪಾಲ ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವತಯಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಚರಂಡಿ ಹೂಳೆತ್ತುವ, ಒಳಚರಂಡಿ ಸ್ವಚ್ಛತೆ, ಅಪಾಯ ಕಾರಿ ಮರಗಳ ತೆರವು ಮೊದಲಾದ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ.
ಅಪಾಯಕಾರಿ ಮರಗಳು
ಕಳೆದ ವರ್ಷ ಈಶ್ವರನಗರ ವಾರ್ಡ್‌ನ 3 ಕಡೆ ಮರ ಬಿದ್ದು ಕಾಂಪೌಂಡ್ ಸೇರಿದಂತೆ ಮನೆಗೆ ಹಾನಿಯಾಗಿತ್ತು. ಮುನ್ನೆಚ್ಚರಿಕೆಯಾಗಿ ಈ ಬಾರಿ ಕೆಲವು ಕಡೆ ಅಪಾಯಕಾರಿ ಮರಗಳ ರೆಂಬೆಗಳನ್ನು ತೆರವು ಮಾಡುತ್ತಿದ್ದು, ಕೆಲವೆಡೆ ಇನ್ನಷ್ಟೆ ತೆರವು ಕಾರ್ಯ ಆಗಬೇಕಿದೆ. ಇದೇ ಪರಿಸ್ಥಿತಿ ಮಣಿಪಾಲ ವಾರ್ಡ್ ನಲ್ಲಿಯೂ ಇದೆ. ಹಾಗೆಯೇ ಈಶ್ವರನಗರ ವಾರ್ಡ್‌ನ ಕೆಲವು ಭಾಗಕ್ಕೆ ಹೊಸ ಪೈಪ್ ಲೈನ್ ಜೋಡಣೆ ಕೆಲಸಕ್ಕೆ ಕಾರ್ಮಿಕರ ಕೊರತೆಯಿಂದ ತಡೆಯಾಗಿದೆ. ಇನ್ನು ಈ ಭಾಗದ ಎತ್ತರ ಪ್ರದೇಶದಲ್ಲಿ ಇರುವ 150 ಮನೆಗಳಿಗೆ ರಾತ್ರಿ 12ರಿಂದ ಮುಂಜಾವ 3ರ ವರೆಗೆ ನೀರು ಸರಬರಾಜಾಗುವುದರಿಂದ ಸಂಗ್ರಹಣೆಗೆ ಕಷ್ಟಪಡಬೇಕಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಮಣಿಪಾಲ ವಾರ್ಡ್‌ನ ಮಣ್ಣಪಳ್ಳ ಕೆರೆಯ ಒಳಹರಿವಿನ ಕಿಂಡಿ ಮುಚ್ಚಿದರೆ ಮಳೆ ನೀರು ಮೇಲೆ ಬಂದು ಹತ್ತಿರದ ಎಎಲ್‌ಎನ್ ಲೇಔಟ್, ಅನಂತನಗರದ 2ನೇ ಸ್ಟೇಜ್‌ಗಳ ಮನೆಗಳಿಗೆ ನುಗ್ಗುತ್ತದೆ. ಜತೆಗೆ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ. ಕಳೆದ ವರ್ಷ ಇದೇ ರೀತಿಯ ಸಮಸ್ಯೆ ಎದುರಾಗಿ ಬಳಿಕ ತಡವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಈ ತೊಂದರೆ ನಿವಾರಿಸಲು ಒಳಚರಂಡಿ ನಿರ್ಮಾಣಕ್ಕೆ 3-4 ಬಾರಿ ಸರ್ವೆ ನಡೆಸಲಾಗಿತ್ತು. ಆದರೆ ಇಲ್ಲಿಯವರೆಗೆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಹೂಳು ತೆರವು ಬಾಕಿ
ಹುಡ್ಕೋ ಕಾಲನಿ, ಅನಂತನಗರ 1, 2 ಸ್ಟೇಜ್, ಎಎಲ್‌ಎನ್ ಲೇಔಟ್, ಬಾಳಿಗ ಸರ್ಕಲ್, ವೇಣು ಗೋಪಾಲ ದೇವಸ್ಥಾನ, ಎಂಜೆಸಿ ಕಾಲೇಜ್, ಪೋಸ್ಟ್ ಆಫೀಸ್ ಮೊದಲಾದ ಭಾಗಗಳ ಕೆಲವು ಕಡೆ ಇನ್ನಷ್ಟೆ ಚರಂಡಿ ಹೂಳು ತೆರವುಗೊಳಿಸಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಹುಡ್ಕೋ ಕಾಲನಿಯ ಕೆಲವು ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿರುವ ಬಗ್ಗೆ ಹಲವು ಬಾರಿ ಸಾರ್ವಜನಿಕರು, ಸದಸ್ಯರು ನಗರಸಭೆಯ ಗಮನಕ್ಕೆ ತಂದಿದ್ದರಿಂದ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಬಳಿಕ ಯಥಾಪ್ರಕಾರ ಸಮಸ್ಯೆ ಮರುಕಳಿಸಿದೆ ಎಂದು ಸ್ಥಳೀಯರು ದೂರುತ್ತಾರೆ.
Related Articles
ಈ ಬಾರಿ ಕೋವಿಡ್-19ರಿಂದಾಗಿ ಕಾರ್ಮಿಕರ ಕೊರತೆ ಉಂಟಾಗಿದೆ. ಇದರಿಂದ ಹೆಚ್ಚಿನ ಭಾಗಗಳಲ್ಲಿ ಚರಂಡಿಗಳ ಹೂಳೆತ್ತುವ ಕೆಲಸ ನಡೆಯಬೇಕಿದೆ. ವಾರ್ಡ್‌ನ ಮಳೆಯ ಪೂರ್ವತಯಾರಿಯ ಕೆಲಸಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ.
– ಕಲ್ಪನಾ ಸುಧಾಮ, ಮಣಿಪಾಲ ನಗರಸಭೆ 18ನೇ ವಾರ್ಡ್‌ನ ಸದಸ್ಯೆ.
Advertisement
ಪೂರ್ವತಯಾರಿ ಆಗಿದೆಹೆಚ್ಚಿನ ಕಡೆಯಲ್ಲಿ ಮಳೆಗಾಲದ ಪೂರ್ವತಯಾರಿ ಮುಗಿದಿದೆ. ವಾರ್ಡ್‌ನ ಕೆಲವು ಕಡೆ ನೀರಿನ ಸಮಸ್ಯೆ ಇದ್ದು, ಕೋವಿಡ್-19 ದಿಂದ ಕಾರ್ಮಿಕರ ಸಮಸ್ಯೆ ಉಂಟಾಗಿ, ಹೊಸ ಪೈಪ್‌ಲೈನ್ ಕಾಮಗಾರಿಗೆ ತಡೆಯಾಗಿತ್ತು. ತಿಂಗಳ ಕೊನೆಗೆ ಈ ಕೆಲಸ ಪೂರ್ಣವಾಗಲಿದೆ.
– ಮಂಜುನಾಥ ಶೆಟ್ಟಿಗಾರ್, ಈಶ್ವರನಗರ 17ನೇ
ವಾರ್ಡ್ ಸದಸ್ಯ.