ಭುವಿಯನ್ನು ಸೋಕಲು ಮಳೆಯು ಹರುಷದಿ, ಕುಣಿದು ಕುಪ್ಪಳಿಸಿತು ಪ್ರಕೃತಿ, ಘಮ್ಮೆಂದು ಹರಡಿತು ಮಣ್ಣಿನ ಸುವಾಸನೆ…. ತೇಲಾಡಿತು ಮನ ಹರುಷದಿ…ಮಳೆ ಯಾರಿಗೆ ಬೇಡ ಹೇಳಿ? ಈಗ ತಾನೆ ಮೊಳಕೆಯೊಡೆದು ಎಲೆ ಬಿಡುವ ಚಿಗುರಿನಿಂದ ಹಿಡಿದು ಹಣ್ಣೆಲೆಯವರೆಗೂ ಅದೇ ರೀತಿ ಪುಟಾಣಿ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಮಳೆ ಅಚ್ಚುಮೆಚ್ಚು. ಮಳೆಯನ್ನು ದೇವರ ಆಶೀರ್ವಾದವೆಂದೇ ಹೇಳಬಹುದು.
ಆಗಸದಲ್ಲಿ ಮೋಡ ಮುಸುಕಿದ್ದನ್ನು ಕಂಡ ಕೂಡಲೇ ನೆಂಟರು ಬರುವ ರೀತಿ ಮಳೆಯನ್ನು ಕಾದು ಕುಳಿತುಕೊಳ್ಳುವ ಜನರೇ ಹೆಚ್ಚು. ಒಂದು ಬಾರಿ ಮಳೆ ಬಂದೊಡನೆ ಮಳೆಯ ನೀರು ಮಣ್ಣನ್ನು ತಬ್ಬಿ ಹಿಡಿದುಕೊಂಡಾಗ ಮೂಗಿಗೆ ನಾಟುವ ಮಣ್ಣಿನ ಸುವಾಸನೆ ಯಾವುದೇ ಬ್ರಾಂಡೆಡ್ ಸುಗಂಧ ದ್ರವ್ಯದಿಂದಲೂ ಸಿಗದ ಪರಿಮಳ ಮಳೆಯದ್ದು. ಕಪ್ಪು ಕವಿದ ಕಾರ್ಮೋಡದ ನಡುವೆ ಜಿಟಿ ಜಿಟಿ ಬೀಳುವ ಹನಿಗಳ ಜತೆಗೆ ಒಂದು ಕಪ್ ಬಿಸಿ ಕಾಫಿ ಸವಿ ಯುವ ಖುಷಿಯೇ ಬೇರೆ.
ಮಕ್ಕಳಿಗೂ ಮಳೆಗೂ ಅದೇನೋ ಅವಿನಾಭಾವ ಸಂಬಂಧ ಇನ್ನೇನು ಶಾಲೆಗೆ ಹೊರಡಬೇಕು ಅನ್ನುವಷ್ಟರಲ್ಲಿ ನಿಮ್ಮ ಜತೆ ಬರುತ್ತೇನೆ ಎಂಬಂತೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾನೆ ಮಳೆರಾಯ. ಚಿಕ್ಕ ಮಕ್ಕಳಂತೂ ಹೇಳುವುದೇ ಬೇಡ ರಸ್ತೆಯಲ್ಲಿ ಈಜುಕೊಳದಂತಿರುವ ನೀರು ತುಂಬಿರುವ ಹೊಂಡದಲ್ಲಿ ಕಾಲು ಜಾರದಿದ್ದರೆ ಸಮಾಧಾನ ಇಲ್ಲ ಎಂಬಂತೆ ಜಿಗಿದುಕೊಂಡು ಕೆಸರೆರಚಿಕೊಂಡು ಮುಂಜಾನೆ ಶಾಲೆಗೆ ಹೋಗುವುದನ್ನು ನೋಡುವುದೇ ಒಂದು ಖುಷಿ.
ಮಳೆ ಕೆಲವರಿಗೆ ಖುಷಿಯ ವಿಚಾರವಾದರೆ ಇನ್ನೂ ಕೆಲವರಿಗೆ ಚಿಂತೆ. ಬೀಳುವಂತಿರುವ ಹಳೆ ಮನೆ ಇರುವವರಿಗೆ ಮೋಡ ಮುಸುಕಿತೆಂದಾಗಲೇ ಮನದಲ್ಲಿ ಮನೆ ಕುಸಿದು ಬೀಳುತ್ತದೆ ಎಂಬ ಭಯ ಕಾಡುತ್ತದೆ. ರಾತ್ರಿ ಇಡೀ ಮಳೆ ಜೋರಾಗಿ ಬಂದಿತೆಂದರೆ ನಿದ್ದೆ ಬಿಟ್ಟು ಮನೆಯ ಮೂಲೆ ಮೂಲೆಯಲ್ಲಿ ಕುಳಿತುಕೊಂಡು ಮಳೆಯ ರಭಸಕ್ಕೆ ಹೆಂಚಿನ ಸಂದಿಯಿಂದ ಮನೆಯ ಒಳಗೆ ಬೀಳುವ ನೀರ ಹನಿಗೆ ಪಾತ್ರೆ ಇಡುವುದರೊಳಗೆ ಬೆಳಕು ಬಂದಿಳಿದಿರುತ್ತದೆ. ಯಾವಾಗ ಮಳೆಗಾಲ ಮುಗಿಯುತ್ತದೋ ಎಂಬ ಚಿಂತೆಗೆ ಒಳಗಾಗಿರುತ್ತಾರೆ. ವ್ಯವಸಾಯವೇ ಜೀವನವೆಂದು ನಂಬಿರುವ ರೈತರಿಗೆ ಮಳೆ ಬಂದರೆ ಸಾಕು ಮೋಡ ಮುಸುಕಿತೋ ಇಲ್ಲವೋ ಎಂದು ಆಕಾಶದ ಕಡೆ ಕಣ್ಣುಹಾಯಿಸುವುದೇ ಎಲ್ಲಿಲ್ಲದ ಖುಷಿ.
ಅಶ್ವಿತಾ ಗಟ್ಟಿ
ಮಂಗಳೂರು ವಿ.ವಿ.