ಪ್ರತಿಯೊಬ್ಬರು ತಮ್ಮ ತಮ್ಮ ಬಾಲ್ಯ ಜೀವನದಲ್ಲಿ ಮಳೆಗಾಲದೊಂದಿಗೆ ಸಂತೋಷದ ದಿನಗಳನ್ನು ಕಳೆದಿರುತ್ತಾರೆ. ಮಳೆ ನೀರಿನೊಂದಿಗೆ ಆಟ ಆಡುತ್ತ ಒಬ್ಬರ ಮೇಲೊಬ್ಬರು ನೀರೇರೆಚಿಕೊಳ್ಳುತ್ತ ತುಂಬ ಸಂತೋಷದಿಂದ ಬಾಲ್ಯವನ್ನು ಕಳೆದಿದ್ದೇವೆ.
ಇದರೊಂದಿಗೆ ಮಳೆಗಾಲದಲ್ಲಿ ಸಿಗುವಂತ ಕೆಲವೊಂದು ಆಹಾರ ಪದಾರ್ಥಗಳು ಸಹ ತುಂಬ ವಿಶೇಷವಾಗಿ ಇರುತ್ತದೆ. ಮಳೆಗಾಲ ಎಂದರೆ ಕೆಲವರಿಗೆ ಎಲ್ಲಿಲ್ಲದ ಖುಷಿ. ಜಿಟಿ ಜಿಟ ಹನಿ ಮಳೆ ಬೀಳುತ್ತಲಿ ಅದನ್ನು ನೋಡುತ್ತಾ ಬಿಸಿ ಕಾಫಿ ಹೀರಿ, ಬಿಸಿ ಬಿಸಿ ತಿಂಡಿ ತಿನ್ನುವುದು ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು. ಮಳೆಗಾಲದಲ್ಲಿ ಆಹಾರದ ಬಯಕೆ ಕೂಡ ಹೆಚ್ಚಾಗೆ ಆಗಲಿದೆ.
ಈ ಆಹಾರ ಪದಾರ್ಥಗಳನ್ನು ನಮಗೆ ಪ್ರಕೃತಿ ದೇವತೆ ನೀಡುತ್ತಾಳೆ. ಮಳೆಗಾಲದಲ್ಲಿ ಮಾತ್ರ ಸಿಗುವಂತಹ ವಿಶೇಷವಾದ ಆಹಾರ ಪದಾರ್ಥ ಎಂದರೆ ಅದು ಅಣಬೆ. ಅಣಬೆಗಳಲ್ಲಿ ನಾಯಿಕೊಡೆ ಮತ್ತು ಕಲ್ಲಣಬೆ ಎಂಬ ಎರಡು ರೀತಿಯ ಅಣಬೆಗಳನ್ನು ಕಾಣಬಹುದು. ಇದರಲ್ಲಿ ಕೆಲವೊಂದು ಅಣಬೆಗಳು ವಿಷಪೂರಿತ ಅಣಬೆಗಳಗಿರುತ್ತವೆ. ನಾವು ಸರಿಯಾಗಿ ಅವುಗಳನ್ನು ಗಮನಿಸದೆ ಪದಾರ್ಥಗಳಿಗೆ ಬಳಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಅಣಬೆಗಳು ಹೆಚ್ಚಾಗಿ ಹಳ್ಳಿಪ್ರದೇಶಗಳಲ್ಲಿ ಕಂಡು ಬರುತ್ತದೆ. ಮಾರುಕಟ್ಟೆಗಳಲ್ಲಿ ಇದನ್ನು ಮಾರಾಟ ಮಾಡುತ್ತಾರೆ ಮತ್ತು ಇದಕ್ಕೆ ಹೆಚ್ಚಿನ ಬೇಡಿಕೆ ಸಹ ಇದೆ. ಅಣಬೆಗಳು ನಮಗೆ ಮಳೆಗಾಲದಲ್ಲಿ ಮಾತ್ರ ಸಿಗುತ್ತದೆ. ಆದರೆ ಕೆಲವರು ಅಣಬೆ ಕೃಷಿ ಮಾಡುವವರು ಎಲ್ಲ ಕಾಲಕ್ಕೂ ಕೂಡ ನೀಡುತ್ತಾರೆ, ಆದರೆ ಪ್ರಾಕೃತಿಕವಾಗಿ ಅಣಬೆಯೂ ಮಳೆಗಾಲಕ್ಕೆ ಸಿಗುವ ಒಂದು ಆಹಾರ ಪದಾರ್ಥ ಎನ್ನಬಹುದು.
ಮಳೆಗಾಲದಲ್ಲಿ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದೇ ಒಂದು ರೀತಿಯ ಸಂತೋಷ. ಅಲ್ಲದೇ ಇವು ಈ ಸಮಯದಲ್ಲಿ ನಾಲಗೆಗೆ ಒಳ್ಳೆಯ ರುಚಿಯನ್ನು ನೀಡುವಂತಹ ಒಂದು ಆಹಾರ ಪದಾರ್ಥವಾಗಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಉಪಯೋಗ ಆಗಬೇಕು ಎಂಬ ಉದ್ದೇಶಕ್ಕೆ ಬೇಸಿಗೆ ಕಾಲಕ್ಕೆ ಹಲಸಿನ ಕಾಯಿ ತುಂಡರಿಸಿ ಉಪ್ಪಿಗೆ ಹಾಕಿ ಅದನ್ನು ಮಳೆಗಾಲದಲ್ಲಿ ಬಳಸುವುದನ್ನು ನಾವು ಕಾಣಬಹುದು. ಹೀಗೆ ಮಳೆಗಾಲದಲ್ಲಿ ಬೇಕಾಗುತ್ತದೆ ಎಂದು ಬೇಸಿಗೆ ಕಾಲಕ್ಕೆ ಅಕ್ಕಿ ಹಪ್ಪಳ, ಸಂಡಿಗೆ ಇತ್ಯಾದಿ ಮಾಡಿರುತ್ತಾರೆ ಇವುಗಳು ಮಳೆಗಾಲಕ್ಕೆ ರುಚಿಯಾದ ಆಹಾರಗಳಾಗಿ ನಮ್ಮ ಬಾಯ್‌ರುಚಿಯ ಬಯಕೆಯನ್ನು ತಣಿಸುತ್ತವೆ.
– ಚೈತನ್ಯ ಕೋಟ್ಯಾನ್
ಎಂ.ಪಿ.ಎಂ, ಕಾರ್ಕಳ