Advertisement

ಮಳೆಗಾಲವೂ ಬಾಲಲೀಲೆಯೂ

05:29 PM Jul 13, 2019 | mahesh |

ಮೊನ್ನೆ ನಮ್ಮೂರು ಬಳಿಯ ಕತ್ತಲೆಕಾಡಲ್ಲಿ ಚಾರಣ ಮುಗಿಸಿ ಕಾಡಿನ ಪಕ್ಕದಲ್ಲೇ ಇದ್ದ ರಸ್ತೆ ತಲುಪಿದಾಗ ಕಾಡಿನ ತುಂಬೆಲ್ಲ ಮಳೆ, ಭೋರೋ ಭೋರೋ ಎಂದು ಸುರಿದು ಅರೆಕ್ಷಣದಲ್ಲಿ ಸುತ್ತಲಿನ ವಾತಾವರಣವನ್ನೇ ಬದಲು ಮಾಡಿಬಿಟ್ಟಿತ್ತು. ಅಷ್ಟೊತ್ತು ಮಳೆಗಾಲದ ಬಿಸಿಲಿನಲ್ಲಿಯೇ ಬೆಂದು ಹೋಗಿದ್ದ ಕಾಡ ದಾರಿ, ಈಗ ಒಮ್ಮೆಲೇ ಎಷ್ಟು ಮುದ್ದಾಗಿ ಕಂಡಿತೆಂದರೆ ನಾವೆಲ್ಲಾ ಅಲ್ಲೇ ಇದ್ದ ಒಂದು ಮುದಿ ಬಸ್‌ ಸ್ಟಾಪಿನಲ್ಲಿ ನಿಂತು ದೂರದಲ್ಲಿ ಅರ್ಧ ಮಂಜಿನಿಂದ, ಇನ್ನಷ್ಟು ಮಳೆಯ ಬಿಸುಪಿನಿಂದ ತುಂಬಿಕೊಳ್ಳುತ್ತ ಪಶ್ಚಿಮಘಟ್ಟದ ಹಸಿರಿನಿಂದ ಹೊಳೆಯುತ್ತಿದ್ದ ಆ ದೊಡ್ಡ ಬೆಟ್ಟವನ್ನೇ ನೋಡುತ್ತಿದ್ದೆವು.

Advertisement

ಅಷ್ಟು ಹೊತ್ತಿಗೆ ದೂರದ ತಿರುವಿನಿಂದ ಏನೋ ಜೋರಾಗಿ ಬೊಬ್ಬೆ ಹೊಡೆದ ಸದ್ದು ಕೇಳಿ ನಾವೊಮ್ಮೆ ದಂಗಾಗಿ ಹೋದೆವು. ಕಾಡಿನ ಕಾಟಿ, ಕಡವೆ ಏನಾದರೂ ಬಂತಾ? ಎಂದು ದೂರದ ದಾರಿ ನೋಡಿದರೆ, ಅಲ್ಲಿ ಒಂದಷ್ಟು ಮಕ್ಕಳ ಗುಂಪು ಮಳೆಯಲ್ಲಿ ಸೈಕಲ್‌ ಹೊಡೆದುಕೊಂಡು, ಕಿರುಚುತ್ತ ಬರುತ್ತಿದ್ದದನ್ನು ಕಂಡು ನಾವು ಪೆಚ್ಚಾದೆವು. ಆದರೆ ಜಿಟಿ ಜಿಟಿ ಬೀಳುತ್ತಿದ್ದ ಆ ಮಳೆಯಲ್ಲಿ, ಆ ಮಳೆಯ ಹಿನ್ನೆಲೆಯಲ್ಲಿ ಗಾಢ ಹಸಿರಿನಿಂದ ಹೆದರಿಸುವಂತೆ ನಿಂತಿದ್ದ ಗುಡ್ಡದ ಹಸಿರಿನಲ್ಲಿ,ಸೈಕಲ್‌ ಬ್ಯಾಲೆನ್ಸ್‌ ಮಾಡಿಕೊಂಡು ಬರುತ್ತಿದ್ದ ಆ ಹುಡುಗರ ಚೇಷ್ಟೆಗಳನ್ನು ನೋಡಿದ್ದೇ ನಮ್ಮ ಬಾಲ್ಯ ನೆನಪಾಗಿಯೇ ಆಯಿತು.

ಅಲ್ಲೊಬ್ಬ ಹುಡುಗ ಸೈಕಲ್‌ ಕ್ಯಾರಿಯರ್‌ನಲ್ಲಿ ಕೂತು ದೊಂಬರಾಟದ ಹುಡುಗನಂತೆ ನಡೆದು ಹೋಗುತ್ತಿದ್ದವರಿಗೆ ಕೈ ಬೀಸಿದರೆ, ಸೈಕಲ್‌ ಹೊಡೆಯುತ್ತಿದ್ದವನು ರಸ್ತೆಯ ಪುಟ್ಟ ಪುಟ್ಟ ಹೊಂಡಗಳಲ್ಲಿ ನಿಂತಿದ್ದ ಮಳೆ ನೀರಿನ ಮೇಲೆ ಭಾರೀ ಫೋರ್ಸಿನಲ್ಲಿ ಸೈಕಲ್‌ ಓಡಿಸಿ ಆ ಕೆಸರು ಎಲ್ಲೆಲ್ಲೂ ಚಿಮ್ಮಿದಾಗ ಖುಷಿಯಿಂದ ಬೊಬ್ಬೆ ಹೊಡೆಯುತ್ತಿದ್ದ. ಅವನ ಬೊಬ್ಬೆಗೆ ಜುಗಲ್‌ಬಂದಿಯಾಗಿ ಜೈಕಾರ ಹಾಕಲು ಇನ್ನೊಂದಷ್ಟು ಹುಡುಗರು ಅಲ್ಲೇ ಠಿಕಾಣಿ ಹೂಡಿದ್ದರು. ಕೊನೆಗೆ ಅಲ್ಲಿದ್ದ ಒಬ್ಬೊಬ್ಬರೇ ಹುಡುಗರು ನಮಗೂ ಒಂದು ಛಾನ್ಸ್‌ ಬೇಕೆಂದೂ, ನಿಮಗಿಂತ ಜೋರಾಗಿ ನಾವು ನೀರೆಬ್ಬಿಸುತ್ತೇವೆಂದೂ ಪಟ್ಟು ಹಿಡಿದು ಒಂದೊಂದೇ ಪಂಕ್ತಿ ಮಾಡಿ, ಮಳೆಯಲ್ಲಿ ಕೆಸರೆಬ್ಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾವು ಅಲ್ಲೇ ನಿಂತು ಈ ಕಾಲದಲ್ಲಿಯೂ ಮಳೆ ಬಂದರೆ ಹೀಗೆ ಆಟವಾಡುವ ಮಕ್ಕಳೂ ಇದ್ದಾರಲ್ಲ? ಎಂದು ಕಣ್ಣರಳಿಸಿಕೊಂಡು ನೋಡುತ್ತಿದ್ದೆವು.

ಮಳೆ ಎಂಬ ಪುಳಕ
ಮಳೆ ಅಂದರೆ ಮಕ್ಕಳಷ್ಟು, ಅದೂ ಶಾಲೆಯ ಮಕ್ಕಳಷ್ಟು ಸಂಭ್ರಮ ಪಡುವವರು ಯಾರೂ ಇಲ್ಲ ಅನ್ನಿಸುತ್ತದೆ. ಪೇಟೆಗಳಲ್ಲಿ ಮಳೆ ಬಿದ್ದಾಗ ಅಲ್ಲಿನ ಯಾಂತ್ರಿಕ ಜೀವನದಲ್ಲಿ ಮಳೆ ಅನ್ನೋದು ಅಂತಹದ್ದೇನೂ ಸಂಭ್ರಮವನ್ನು ಹುಟ್ಟಿ ಹಾಕೋದು ಕಷ್ಟವೇನೋ. ಮಳೆ ಅನ್ನೋದು ಆ ಪೇಟೆಯ ಮನಸ್ಸುಗಳಿಗೆ ಟ್ರಾಫಿಕ್ಕಿನ ಹೊಗೆಯಂತೆ ಬರುವ ಒಂದು ಪ್ರಕ್ರಿಯೆ ತರ ಅನ್ನಿಸಲಿಕ್ಕೂ ಸಾಕು. ಆದರೆ ನಮ್ಮ ಕಾಡಂಚಿನ ಊರುಗಳಲ್ಲಿ ಮಳೆ ಅಂದರೆ ಮಕ್ಕಳಿಗೆ ಪುಟ್ಟದ್ದೊಂದು ಬೆಕ್ಕಿನ ಮರಿಯನ್ನು ಜೋಪಾನ ಮಾಡಿ ಮುದ್ದಿಸಿದ್ದಷ್ಟು ಪುಳಕಕೊಡುತ್ತದೆ. ಚಂದದ್ದೊಂದು ಮಳೆ ಬಿದ್ದರೆ ನಿರಾಳವಾಗಿ ಆಕಾಶಕ್ಕೆ ಮುಖವೊಡ್ಡುವ, ಮಳೆಯಲ್ಲೇ ಈಗಿನ ಯಾವ ಗೇಮಿಂಗ್‌ ಆ್ಯಪ್‌ ಗಳೂ ಜನ್ಮದಲ್ಲಿ ಕೊಡಲು ಸಾಧ್ಯವಿಲ್ಲದ ಹೊಸ ಹೊಸ ಆಟಗಳನ್ನು ಕಂಡುಹಿಡಿಯುತ್ತ, ಭೂಮಿಯ ಜೊತೆ, ಪರಿಸರದ ಜೊತೆ, ಈ ಮಣ್ಣಿನ ಪರಿಮಳಗಳ ಜೊತೆ ಒಂದಾಗುತ್ತ ಬಾಲ್ಯದ ಬದುಕಿನ ನಿಜವಾದ ಸ್ವಾದವನ್ನು ಅನುಭವಿಸುವ ನಮ್ಮ ಹಳ್ಳಿಯ ಪುಟ್ಟ ಪುಟ್ಟ ಜೀವಗಳು ಮತ್ತೆ ಮತ್ತೆ ನಮಗೆ. ನೆನಪುಗಳ ಮರುಶೋಧನೆ ಮಾಡಲು ಪ್ರೇರಣೆ ಕೊಡುತ್ತಲೇ ಇರುತ್ತದೆ. ಬಾಲ್ಯವಂತೂ ಮತ್ತೆ ಸಿಗಲಾರದು, ಆದರೆ ಕೆಸರಲ್ಲಾಡುವ, ಬೆರಗಿನಿಂದ ಮಳೆ ನೋಡುವ, ಕೈ ಯಲ್ಲಿ ಕೊಡೆ ಇದ್ದರೂ ಮೈ ಮೇಲೆ ಚೂರು ಮಳೆ ಹನಿ ಬೀಳುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತ ಮೈಗೆ ಹನಿ ಬಿದ್ದಾಗ ತಾವೇ ಮೋಡದೊಳಗಿಂದ ಧರೆಗುರುಳಿದಂತೆ ಬೆರಗಾಗುವ ಈ ಪುಟ್ಟ ದೇವರುಗಳಂತಹ ಮಕ್ಕಳಿಂದ ನಮಗೆ ಬಾಲ್ಯ ಮತ್ತೆ ಸಿಕ್ಕಂತಾಗುತ್ತದೆ.

ಆಗ ಮಳೆ ಕೊಂಚ ಬಿಟ್ಟು ದೂರದ ಬೆಟ್ಟ ಮಂಜಿನಿಂದ ತುಂಬಿಕೊಂಡಿತ್ತು, ಅದೇ ಹೊತ್ತಿಗೆ ಪುಟ್ಟ ತಂಗಿ, ಪುಟ್ಟ ಅಣ್ಣ ಕೊಡೆ ಹಿಡಿದುಕೊಂಡು ಕಾಡಿನ ದಾರಿಯಲ್ಲಿ ಪಿರಿ ಪಿರಿ ಮಳೆ ಬರುವಂತೆಯೇ ನಡೆದುಕೊಂಡು ಬರುತ್ತಿದ್ದುದು ಮೋಹಕವಾಗಿ ಕಾಣುತ್ತಿತ್ತು.

Advertisement

ಚಿತ್ರ-ಬರಹ: ಪ್ರಸಾದ್‌ ಶೆಣೈ ಆರ್‌. ಕೆ.

Advertisement

Udayavani is now on Telegram. Click here to join our channel and stay updated with the latest news.

Next