ಧರೆಗಿಳಿಯಲು ಮುತ್ತಿನ ಮಣಿಗಳಂತೆ ತಯಾರಾದ ಮಳೆ ಹನಿಗಳನ್ನು ತಡೆಯಲು ಸೂರ್ಯನು ಪ್ರಯತ್ನಪಟ್ಟಂತಿತ್ತು ಆ ವಾತಾವರಣ. ಬೆಚ್ಚಗಿನ ಗೂಡಲ್ಲಿ ನೆಚ್ಚಿನ ಊಟ ಸವಿಯಲು ಗೂಡು ಸೇರ ಹೊರಟ ಹಕ್ಕಿಗಳು, ಸಣ್ಣ ಸಣ್ಣ ಇರುವೆಗಳು ಸಾಲುಗಟ್ಟಿ ಶರವೇಗದಲ್ಲಿ ತನ್ನ ಮನೆಯನ್ನು ಸೇರುವ ತವಕ, ಆಗಸ ಒಡೆದು ಭೂಮಿಯ ತಂಪಾಗಿಸುವ ಸೂಚನೆಯನ್ನು ಮಿಂಚು-ಗುಡುಗಿನ ಒಡನಾಟದ ತಾಳಮೇಳಗಳು ಬಡಿದಾಗಲೇ ಕಾಲೇಜಿನ ಬೆಂಚು ಬಿಸಿ ಮಾಡುತ್ತಿದ್ದ ನಾನು ಕೂಡ ನನ್ನ ಮನೆಯೆಡೆಗೆ ಪಾದ ಬೆಳೆಸಲು ತಯಾರಾದೆ.
ಹೆಗಲಿಗೆ ಬ್ಯಾಗ್ ಸಿಕ್ಕಿಸಿಕೊಂಡು ಕಪ್ಪು ಬಿಳುಪು ಚುಕ್ಕಿ ಚಿತ್ತಾರದ ಕೊಡೆಯನ್ನು ಹಿಡಿದು ಮೈದಾನಕ್ಕಿಳಿದಾಗ ಶಾಂತರೂಪದ ಮಳೆ ಮೈ ಮನಸ್ಸು ತಂಪಾಗಿಸಲು ಧರೆಗಿಳಿದೇ ಬಿಟ್ಟಿತು. ಕೊಡೆಯಂಚಿನಲಿ ಸುರಿಯುತ್ತಿದ್ದ ಮಳೆ ಹನಿಯನ್ನು ಕೈಯಲ್ಲಿ ಸೆರೆಹಿಡಿಯುತ್ತಾ ಕಣ್ಣಿನ ರೆಪ್ಪೆಗಳಿಗೆ ಅಲಂಕಾರವಾಗಿ ಮಾಡುತ್ತಾ ನೆಲದ ಕೇಸರಿ ನೀರನ್ನು ಚಪ್ಪಲಿ ಮಹಾಶಯನ ಸಹಾಯದಿಂದ ಸಮವಸ್ತ್ರದಲ್ಲಿ ಚಿತ್ತಾರ ಬಿಡಿಸುತ್ತಾ ಮುಂದೆ ಮುಂದೆ ಸಾಗುತ್ತಿದ್ದಂತೆ….. ಮಳೆ ಕೋಪಗೊಂಡು ಸುರಿದಂತೆ ರಭಸದಿಂದ ಸುರಿಯಲಾರಂಭಿಸಿತು.
ನೋಡ ನೋಡುತ್ತಿದ್ದಂತೆ ವಾಯು ಮಹಾರಾಜನ ಸಹಾಯ ಪಡೆದು ನನ್ನ ಕೊಡೆಯನ್ನು ಬಾವಲಿಯನ್ನಾಗಿಸುವ ಪ್ರಯತ್ನ ಮಾಡಿತು. ಮೈ ನಡುಗಿಸಲು ಚಳಿ ಮಹಾರಾಜನ ಸಹಾಯ ಪಡೆದು ನೀರೆರಚಲು ಪ್ರಾರಂಭ ಮಾಡಿತು.
ಮುಂದೆ ಸಾಗುತಿದ್ದಂತೆ ಎಲ್ಲ ಕಡೆ ಕೊಳಕು ಕೆಂಪು ನೀರನ್ನು ಹರಿಸಿ ಮುಂದೆ ಹೆಜ್ಜೆ ಇಡದಂತೆ ಕಣ್ಣು ಕತ್ತಲಾಗಿಸಿತು. ರಭಸದಲ್ಲಿ ಸಾಗುತ್ತಿದ್ದ ನೀರಿನ ಜತೆ ನಾನೂ ಸಾಗಿ ಮನೆ ತಲುಪಬೇಕು ಎಂದು ಹೋಗುತಿದ್ದಾಗ, ಮಾರುದ್ದ ಬೆಳೆದಿದ್ದ ಮರ ಮಕಾಡೆ ಮಲಗಿಬಿಟ್ಟಿತ್ತು. ಅಲ್ಲಿಗೆ… ಮನೆಗೆ ಹೋಗುವಂತೆಯೂ ಇಲ್ಲ ಮಳೆ ನಿಲ್ಲಿಸುವಂತೆಯೂ ಇಲ್ಲ. ಮಳೆರಾಯನ ಎರಡು ಮುಖಗಳನ್ನು ಒಟ್ಟಿಗೆ ಕಂಡಂತಹ ಆ ದಿನ ಮರ ಸರಿಸಿ ಮನೆ ಸೇರುವ ತನಕ ಯೋಚಿಸುವಂತೆ ಮಾಡಿತು.
- ಸಮೀಕ್ಷಾ ಎಸ್.ಡಿ.ಎಂ. ಕಾಲೇಜು ಉಜಿರೆ