ಮಳೆ ಎಂಬುದೇ ಒಂದು ರೋಮಾಂಚನ ಅನುಭವ. ಮಳೆಯಿಂದಲೇ ಇಳೆ, ಇಳೆಯಿಂದಲೇ ಜೀವಿಗಳು. ಮಳೆ ಇಲ್ಲದೇ ಬಸವಳಿದಿದ್ದ ಭುವಿಗೆ ಮೊದಲ ಮಳೆ ಕೊಡುವ ಹರ್ಷಕ್ಕೆ ಪಾರವೇ ಇಲ್ಲ. ಮೊದಲ ಮಳೆಗೆ ಭೂಮಿಯಿಂದ ಬರುವ ಪರಿಮಳ ಆಘ್ರಾಣಿಸುವುದೇ ಒಂದು ಚೇತೋಹಾರಿ ಕಂಪನ. ಭುವಿ -ಭಾನು ಒಂದಾಗಿ ಬೀಳುವ ಕುಂಭದ್ರೋಣದ ಮಳೆಯ ಜತೆಗೆ, ಗುಡುಗು ಸಿಡಿಲುಗಳಿಂದ ಆರ್ಭಟಿಸುವ ಹಾಗೂ ಎಲ್ಲವನ್ನೂ ಸ್ಥಾನಪಲ್ಲಟಗೊಳಿಸುವ ವಾಯುವಿನ ವೇಗವು ನಿಜಕ್ಕೂ ಮೈ ನಡುಕ ಹುಟ್ಟಿಸುವ ಸಂಗತಿ. ಹಿತವಾದ ತಂಗಾಳಿಯ ಜತೆಗೆ ಮಿತವಾಗಿ ಬೀಳುವ ಮಳೆ ನಿಜಕ್ಕೂ ಮೈ ನವಿರೇಳಿಸುವಂತದ್ದು.
ಭೋರ್ಗರೆವ ಆರ್ಭಟದ ಮಳೆಯಿಂದ ನಮ್ಮೂರಿನ ಕೆರೆ ತುಂಬಿ ಕೋಡಿ ಹರಿದಾಗ ಎಲ್ಲೆಲ್ಲೂ ನೀರು ತುಂಬಿ ರಸ್ತೆಯಲ್ಲೇ ಈಜಾಡಿದ ಸಂಗತಿ ಇನ್ನೂ ನಮ್ಮ ಮನದಲ್ಲೇ ಜೀವಂತವಾಗಿದೆ. ಪ್ರತೀ ಮಳೆಯಿಂದಾಗಿ ಅದರ ಸವಿನೆನಪು ಮರುಕಳಿಸುವಂತಿರುತ್ತದೆ. ಇಳೆಗೆ ಸುರಿವ ಮಳೆ ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ಮಳೆಗಳ ನಾಡು ಎಂದೆನಿಸಿರುವ ಮಲೆನಾಡು, ಕರಾವಳಿ ತೀರಾ ಪ್ರದೇಶ, ಉತ್ತರಕನ್ನಡ, ದಕ್ಷಿಣ ಕನ್ನಡ, ಕರ್ನಾಟಕದ ಕಾಶ್ಮೀರ ಎಂದೆನಿಸಿರುವ ಕೊಡಗು ಇಲ್ಲೆಲ್ಲಾ ಮಳೆ ಬೀಳುವ ಸಂದರ್ಭದಲ್ಲಿ ನಿಸರ್ಗ ರಮಣೀಯವಾದ ವಾತಾವರಣ ನೋಡಲು ತುಂಬಾ ಸೊಗಸಾಗಿರುತ್ತದೆ.
ಚುಮು ಚುಮು ಎನಿಸುವ ಮಳೆ, ಹಿತವಾದ ತಂಗಾಳಿ, ಬಿಸಿ ಬಿಸಿಯಾದ, ರುಚಿ ರುಚಿಯಾದ ಆಹಾರವನ್ನು ಮೆಲ್ಲುವುದೇ ಮಹದಾನಂದ. ಇಂತಹ ಸಮಯದಲ್ಲಿ ಸ್ನೇಹಿತರೊಂದಿಗೆ ಚಾರಣ ಮಾಡುವುದೇ ಒಂದು ಬೃಹತ್ ಸಾಹಸ. ಪ್ರಕೃತಿಯೂ ಒಂದು ಉತ್ತಮ ಮಾರ್ಗದರ್ಶಿ ಎನ್ನುವಂತೆ ನಿಜಕ್ಕೂ ನಿಸರ್ಗದಲ್ಲಿ ಕೌತುಕ, ಕುತೂಹಲ ಸಂಗತಿಯನ್ನು ಅರಿಯುವುದೇ ಒಂದು ದೈವದತ್ತ ಕೊಡುಗೆ. ಮಲೆನಾಡ ಪ್ರದೇಶದಲ್ಲಿ ಬೇಸಗೆಯಲ್ಲಿ ಆಹಾರ ಮತ್ತು ಊರುವಲುಗಳನ್ನು, ದನಗಳ ಮೇವುಗಳನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಜೀವನ ನಿರ್ವಹಿಸುವ ಪರಿಯೇ ಚೆಂದ. ಮಾಯಾದಂತ ಮಳೆಗೆ ಖುಷಿ ಪಡದ ಜನರಿಲ್ಲ. ಮಳೆಯು ಬೆಂದಿರುವ ಭೂಮಿಯನ್ನು ಸ್ವತ್ಛ ಮಾಡುವುದರ ಜತೆಗೆ ಬೇಸತ್ತ ಮನಸ್ಸಿಗೂ ಶಾಂತಿ ನೀಡುತ್ತದೆ.
ಹರಿನಾಥ್ ವಿ.ಎ.
ಎಸ್.ಡಿ.ಎಂ ಕಾಲೇಜು,ಉಜಿರೆ