Advertisement
ಏಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ಸೆಖೆಗೆ ಒದ್ದಾಡುತ್ತಿರುವ ಹೊತ್ತಲ್ಲಿ, ಗೃಹಿಣಿಯರಿಗೆ ಹಪ್ಪಳ ಸಂಡಿಗೆ ಮಾಡಿ, ಅಟ್ಟದಲ್ಲಿ ಕಟ್ಟಿಡುವಷ್ಟು ಪುರುಸೊತ್ತು ಕೊಟ್ಟು, ಈಗಷ್ಟೇ ಪರೀಕ್ಷೆ ಬರೆದು ನಿರಾಳವಾದ ಮಕ್ಕಳಿಗೆ ನೆಂಟರ ಮನೆಗೆ ಹೋಗಲು, ಆಚೀಚೆ ತಿರುಗಲು, ಹೊಳೆಗೆ ಬಿದ್ದು ಈಜು ಕಲಿಯಲು ಅನುವು ಮಾಡಿಕೊಟ್ಟು, ಎಲ್ಲರೂ ಉಸ್ಸಪ್ಪಾ! ಸಾಕು ಈ ಸೆಖೆಯ ಸಾವಾಸ ಅಂತ ಉಸುರು ಬಿಡುವ ಹೊತ್ತಲ್ಲಿ ಅಚಾನಕ್ ಗಾಳಿ ಬೀಸಿ, ಪಳಾರನೇ ಮಿಂಚಿ ಒಂದೆರಡು ಮಳೆ ಹೊಯ್ದು ತಂಪಾಗಿಸುತ್ತದೆ. “ಉಳಿದಿರುವ ಕೆಲಸಗಳನ್ನೆಲ್ಲಾ ಬೇಗ ಬೇಗ ಮುಗಿಸಿಕೊಳ್ಳಿ. ನಾ ಹೊಯ್ಯಲು ಶುರುಮಾಡಿದೆನೆಂದರೆ ಮತ್ತೆ 3-4 ತಿಂಗಳು ನಿಮ್ಮ ಬಿಟ್ಟು ಕದಲುವುದಿಲ್ಲ ಎಂಬುದನ್ನು ನೆನಪಿಸಲೋಸುಗ, ಮಳೆ ಹಾಜರಿ ಹಾಕಿ ಹೋಗುತ್ತದೆ.
Related Articles
Advertisement
ಎಳವೆಯಲ್ಲಿ ಹೊರಗೆ ಪಡಸಾಲೆಯಲ್ಲಿ ಕಂಬಕ್ಕೊರಗಿ ಓದಲು ಕುಳಿತುಕೊಳ್ಳುತ್ತಿದ್ದೆ. ಓದು ನೆಪ. ಹೊರಗೆ ಕುಳಿತರೆ ಇಡೀ ಗದ್ದೆ ಬಯಲು ಮಳೆಗೆ ನೆನೆಯುತ್ತಾ ಸುಖೀಸುವುದನ್ನ ಕಾಣಬಹುದಿತ್ತು. ಗದ್ದೆ ಬದಿಯಲ್ಲಿ ಹರಿದು ಹೋಗುವ ನದಿ ಕಣ್ಣಿಗೆ ಕಾಣುತ್ತಿತ್ತು. ಬೇಸಿಗೆಯಲ್ಲಿ ಸಣ್ಣಗಾಗಿ ಉಸಿರು ಬಿಗಿಹಿಡಿದುಕೊಂಡು ತೆವಳುತ್ತಿದ್ದ ಈ ನದಿಯ ಆರ್ಭಟ, ಗದ್ದೆ ಮಟ್ಟ ಹತ್ತಿಕೊಂಡು ಬಿಡುಬೀಸಾಗಿ ಸಾಗುವ ಅದರ ವಯ್ನಾರ ವರ್ಣನೆಗೆ ನಿಲುಕದ್ದು. ನದಿ ಕಡಲಾಗುವ ಸಂಭ್ರಮವದು. ಒಂದೊಮ್ಮೆ ಉಕ್ಕಿ ಹರಿದ ನದಿ ಆಗಷ್ಟೇ ನಾಟಿ ಮಾಡಿದ ಗದ್ದೆಯನ್ನೆಲ್ಲಾ ಮುಳುಗಿಸಿ ಸಸಿಗಳನ್ನೆಲ್ಲಾ ಬೇರು ಸಮೇತ ಕಿತ್ತುಕೊಂಡು ಹೋಗಿತ್ತು. ಪ್ರತೀ ಸರ್ತಿ ಮಳೆ ಬಂದಾಗಲೂ ನನ್ನಜ್ಜಿ ಪಡಸಾಲೆಯಲ್ಲಿ ಕುಳಿತುಕೊಂಡು, “ರಾಮಸಿವನೇ! ಇಂತಹ ಮಳೆಗಾಲ ಯಾವೊತ್ತೂ ಬರಲಿಲ್ಲಪ್ಪ’ ಅಂತ ಹೇಳುವುದು ವಾಡಿಕೆ. ಪ್ರತೀ ಮಳೆಯೂ ಅನುಭವಗಳ ತೊಟ್ಟಿಯೊಳಗೆ ಹೊಸ ಬಗೆಯಲ್ಲಿ ತುಂಬಿಕೊಂಡು ಸುರಿಯುತ್ತಿತ್ತು ಅನ್ನುವುದಕ್ಕೆ ನನ್ನಜ್ಜಿಯ ಪ್ರತೀ ಸಲದ ಉವಾಚ ಇಂಬು ಕೊಡುತ್ತಿತ್ತು.
ಗುಡುಗಿನ ಜೊತೆ ಅಣಬೆ!
ಒಂದೆರಡು ಗುಡುಗು ಬಂದ ಮಾರನೆ ದಿನ ಬೆಳಗೆ ಅಜ್ಜಿ ನಮ್ಮನ್ನು ಲಗುಬಗೆಯಲ್ಲಿ ಏಳಿಸಿ ಬೇಗ ಬೇಗ ಮೂಲೆ ಗದ್ದೆಗೆ ಹೋಗಿ ನೋಡಿಕೊಂಡು ಬನ್ನಿ ಅಂತ ಕಳಿಸುತ್ತಿದ್ದಳು. ನಾವು ಚಳಿಯನ್ನು ಲೆಕ್ಕಿಸದೆ ಕೊಡೆ ಹಿಡಿದು, ಓಡಿಕೊಂಡೇ ಹೋಗಿ ನೋಡಿದರೆ, ಮಣ್ಣಿನಿಂದ ಮೊಗ್ಗೊಡೆದ, ಥೇಟ್ ಕೊಡೆಯಂತೆ ಅರಳಿಕೊಂಡ ದೊಡ್ಡ ದೊಡ್ಡ ಗಾತ್ರದ ಅಣಬೆಗಳು! ಅವನ್ನು ಅವಸರಕ್ಕೆ ಆಯಲು ಆಗುವುದಿಲ್ಲ. ಅದಕ್ಕೊಂದು ತಲ್ಲೀನತೆ ಬೇಕು. ಆಯ್ದಷ್ಟೂ ಮುಗಿಯದ ಅಣಬೆಗಳ ಕಿತ್ತು ಕಿತ್ತು ಹೆಡಗೆಗೆ ತುಂಬಿಸುವಾಗ ಆಯಾಸದ ಮಾತೇ ಇಲ್ಲ. ಕಿತ್ತ ಅಣಬೆಗಳನ್ನ ಶುಚಿಗೊಳಿಸುವುದು ಕೂಡ ಒಂದು ಧ್ಯಾನಸ್ಥ ಕಲೆ. ಅದು ನಾಳೆಯವರೆಗೆ ಉಳಿಯುವುದಿಲ್ಲ. ನಮಗೆ ಬೇಕಾದಷ್ಟು ಇಟ್ಟುಕೊಂಡು, ನನ್ನಜ್ಜಿ ನಾಕು ನಾಕು ಅಣಬೆ ಕಾಲುಗಳನ್ನ ತೊಟ್ಟೆಗೆ ಹಾಕಿ ಅಕ್ಕಪಕ್ಕದವರಿಗೆ ಕಳಿಸುತ್ತಿದ್ದಳು. ಅಹಾ! ಹೆಗ್ಲ್ ಅಣಬೆ ಸಿಕ್ಕಿತಾ! ಅಂತ ಖುಷಿಯಲ್ಲಿ ತೆಗೆದುಕೊಂಡು ಒಳಹೋಗುವ ಅವರ ನಡಿಗೆ ಈಗಲೂ ಮಳೆಯಂತೆಯೇ ಕಣ್ಣಿಗೆ ಕಟ್ಟುತ್ತಿದೆ. ಅಣಬೆಗಳು ಹಾಗೆ ಎಲ್ಲ ಜಾಗೆಯಲ್ಲಿ ಏಳುವುದಿಲ್ಲ. ಸಾಮಾನ್ಯವಾಗಿ ನಿಶ್ಚಿತ ಜಾಗದಲ್ಲಿ ಒಂದೆರಡು ಗುಡುಗು ಗುಡುಗಿದಾಗ ಬೆದರಿದಂತೆ, ಗಟ್ಟಿ ಮಣ್ಣ ಸೀಳಿ ಬೆರಗುಗಣ್ಣಿನಿಂದ ಯಾರೀತ ಹೆದರಿಸಿದವನು? ಅಂತ ತುಸುವೇ ತಲೆ ಹೊರಗೆ ಹಾಕಿ ಇಣುಕುತ್ತವೆ. ಮತ್ತೆ ಕುತೂಹಲಕ್ಕೆ ಉದ್ದ ಕತ್ತು ಎತ್ತಿ ನೋಡುವ ಅವು ನನಗೆ ಕವಿತೆಯಂತೆಯೇ ಗೋಚರಿಸುತ್ತವೆ. ಅವುಗಳನ್ನು ತುಸು ಬಲವಾಗಿ ಮುಟ್ಟಿದರೆ ಮುರಿದೇ ಹೋಗುವಷ್ಟು ಮೃದು. ನಾಜೂಕಾಗಿ ತಂದು ಅಕ್ಕಪಕ್ಕದವರಿಗೆ ಹಂಚಿ ತಿಂದರೇ ಗಮ್ಮತ್ತು
ಹಲಸು ಇದ್ದ ದಿನ ಹಬ್ಬ!
ನಾವು ಅಣಬೆ ಕೊಟ್ಟರೆ, ಪಕ್ಕದ ಮನೆಯಿಂದ ಕಣಿಲೆ ಬರುತ್ತಿತ್ತು. ಮತ್ತೂಂದು ಮನೆಯಿಂದ ಗ¨ªೆಗೆ ಹತ್ತಿದ ಮೀನು, ಏಡಿ ಬರುತ್ತಿತ್ತು. ಆಚೆ ಮನೆಯಿಂದ ಪತ್ರೊಡೆ ಸೊಪ್ಪು, ಕೆಸುವಿನ ದಂಟು, ಹಲಸಿನ ಹಣ್ಣು ಬರುತ್ತಿತ್ತು. ಹಲಸು ಸಿಕ್ಕ ದಿನ ಕೇಳಬೇಕೇ? ದೊಡ್ಡ ಮೆಟ್ಟುಕತ್ತಿಯಲ್ಲಿ ಅದನ್ನ ಅರ್ಧ ಸೀಳಿ ಸಣ್ಣ ಸಣ್ಣ ಚಾಂಡೆ ಮಾಡಿ ತೋಳೆ ಬಿಡಿಸುತ್ತಾ ಅರ್ಧಕ್ಕರ್ಧ ಗುಳುಂ ಎಂದು ಹೊಟ್ಟೆ ಸೇರುತ್ತಿತ್ತು. ಆ ದಿನ ಮನೆಯ ಜನಗಳಿಗೂ, ಹಟ್ಟಿಯ ದನಗಳಿಗೂ ಹಬ್ಬವೇ. ಇಲ್ಲಿ ಹಲಸಿನ ಹಣ್ಣಿಗೆ ಕತ್ತಿ ತಾಗಿಸಿದರೆ ಸಾಕು, ಹಟ್ಟಿ ಎಷ್ಟೇ ದೂರವಿರಲಿ; ಹಣ್ಣಿನ ಪರಿಮಳ ಮೂಗಿಗೆ ಬಡಿಯುತ್ತಿತ್ತು. ಎಲ್ಲಾ ಕೆಲಸ ಮುಗಿಸಿ ದನಗಳಿಗೆ ಹಾಕಿ ಬಂದ ಮೇಲೆಯೇ ಸಮಾಧಾನ. ಕೈಗೆ ಮೆತ್ತಿಕೊಳ್ಳುವ ಹಣ್ಣಿನ ಅಂಟೊಂದು ರಗಳೆ ಬಿಟ್ಟರೆ ಉಳಿದೆಲ್ಲವೂ ಉಪಯುಕ್ತವೇ.
ಈ ಕಡೆ ಸಂತಸ, ಆ ಕಡೆ ಸಂಕಟ
ಇಲ್ಲಿ ಮೊದಲ ಮಳೆ ಹನಿದ ಖುಷಿಗೆ ವಾಟ್ಸಪ್ ಸ್ಟೇಟಸ್ ಹಂಚಿಕೊಂಡರೆ, ಬಯಲು ಸೀಮೆಯ ಆತ್ಮೀಯರು, “ಆಹಾ! ನೀವು ಪುಣ್ಯವಂತರು ಕಣ್ರೀ..ನಮ್ಮ ಕಡೆಗೂ ಮಳೆಯನ್ನು ತುಸು ಕಳಿಸಿ…’ ಅಂತ ಸಪ್ಪೆ ಇಮೋಜಿ ಕಳಿಸುವಾಗ ನಿಜಕ್ಕೂ ಮನಸು ಮುದುಡುತ್ತದೆ. ಇಲ್ಲಿ ನದಿ ತೋಡುಗಳಲ್ಲಿ ನೀರು ಉಕ್ಕಿ ಹರಿಯುವಾಗ ಅಲ್ಲಿ ಖಾಲಿ ಹೊಲದ ಮುಂದೆ ಆಕಾಶ ನೋಡುತ್ತಾ ಕಾಯುವ ಅವರುಗಳ ಚಿತ್ರ ಕಣ್ಣಿಗೆ ಕಟ್ಟಿ ಎದೆ ಭಾರವಾಗುತ್ತದೆ. ಇಲ್ಲಿ ಮಳೆ, ಅಲ್ಲಿ ಬವಣೆ! ಇದೆಂಥಾ ಚೋದ್ಯ? ದೇಶ ಭಾಷೆಗಳ ಗಡಿ ದಾಟಿ ಒಂದೇ ಸಮಯಕ್ಕೆ ಎಲ್ಲರ ಅಂಗಳವೂ ಮಳೆಯಿಂದ ತೋಯ್ದಿದ್ದರೆ..! ಅಥವಾ ಇಲ್ಲಿಯ ಮಳೆಯನ್ನು ಅಲ್ಲಿಗೆ ಕಳಿಸುವ ಹಾಗಿದ್ದರೆ..? ಮನಸು ಚಿಂತಿಸುತ್ತದೆ. ನೆತ್ತಿ ತೋಯುವಷ್ಟಾದರೂ ಹನಿ ಉದುರಿಸಿದ್ದರೆ… ಅಂತ ಅವರುಗಳು ಹಲುಬುವಾಗ ಜೀವಜಾಲಗಳ ಬದುಕಿಸುವ ಮಳೆಯೆಂಬ ವಿಸ್ಮಯಕೆ ತಲೆಬಾಗುತ್ತೇನೆ.
ಮತ್ತೆ ಮಳೆ ಹುಯ್ಯುತಿದೆ…
ಎಲ್ಲ ಮರೆತಂತೆ ಮತ್ತೆ ಇಲ್ಲಿ ತುಸು ತಡವಾಗಿಯಾದರೂ ಮಳೆ ಹೊಯ್ಯುತ್ತಿದೆ. ಅಂಗಡಿಯಿಂದ ತಂದ ಕಸಿ ಮಾವು ಟೇಬಲ್‌ನಲ್ಲಿ ವಿರಾಜಮಾನವಾಗಿದೆ. ಪಕ್ಕದ ಮನೆಯವರೊಬ್ಬರು ಇದು ಸ್ವಲ್ಪ ಸಪ್ಪೆ , ಶುಗರ್‌ನವರಿಗೆ ಹೇಳಿ ಮಾಡಿಸಿದಂತಿದೆ ಅಂತ ಒಂದಷ್ಟು ಹಲಸಿನ ತೋಳೆ ತಂದುಕೊಟ್ಟಿದ್ದಾರೆ. ಸಣ್ಣಕೆ ಮಳೆ ಹನಿಗಳು ಉದುರುತ್ತಿವೆ. ಅಂಗಳದ ಮೂಲೆಯಲ್ಲಿ ಮಳೆಹಾತೆಗಳು ನೆಲದೊಡಲಿಂದ ಪೈಪೋಟಿಗೆ ಬಿದ್ದಂತೆ ಹಾರುತ್ತಿವೆ. ಜೋರಾಗಿ ಮಳೆ ಬರುವ ಸಂಕೇತವಿದು. ಮಳೆಗಾಲದ ನೆನಪಿಗೆ ಕೊಂಡಿ ಕೂಡಿಸಲು ಇಷ್ಟಾದರೂ ಇವೆಯಲ್ಲಾ ಅಂತ ತುಸು ಹಾಯೆನ್ನಿಸುತ್ತದೆ. ಅವರು ತಂದುಕೊಟ್ಟ ಸಪ್ಪೆ ಹಲಸಿನ ತೋಳೆ ಅತಿ ಸವಿಯೆನ್ನಿಸುತ್ತದೆ. ಬೀಜ ತೊಳೆದು ನಾಳೆಯ ಸೌತೆ ಸಾರಿಗೆ ಸೇರಿಸಲು ಇಟ್ಟಿರುವೆ. ಮಳೆ ಸೂರಿನಡಿಯಲ್ಲಿ ಏಕಪ್ರಕಾರವಾಗಿ ಸುರಿಯುತ್ತಿದೆ. ಮಕ್ಕಳ ಎದೆಗೂ ಮಳೆ ರಾಗಗಳ ದಾಟಿಸುವ ಬಗೆಯೆಂತು? ಯೋಚಿಸುತ್ತಿರುವೆ.
ಜೀವ ಕಾದಿದೆ, ಜೀವ ತೆಗೆದಿದೆ!:
ಎಷ್ಟೋ ಮಳೆಗಾಲವ ದಾಟಿ ಬಂದಿರುವೆ. ಜೀವ ಕಾಯುವ ಮಳೆ, ಜೀವ ತೆಗೆದ ಕ್ಷಣಗಳಿಗೂ ಸಾಕ್ಷಿಯಾಗಿದ್ದೇನೆ. ಹದವರಿತು ಸುರಿದರೆ ಮಾತ್ರ ಬದುಕು ಹಸನು ಅನ್ನುವ ಅನುಭವ ದಕ್ಕಿದೆ. ಹಿಂದೆಲ್ಲಾ ಅದೆಷ್ಟು ಮಳೆ ಸುರಿದರೂ ಹಳ್ಳ ಕೊಳ್ಳ ತುಂಬಿ ಹರಿದರೂ ಆಗೆಲ್ಲಾ ಒಂದಷ್ಟು ಮತ್ತೆ ತುಂಬಿಕೊಳ್ಳಬಹುದಾದ ನಷ್ಟ ಸಂಭವಿಸುತ್ತಿತ್ತು ಬಿಟ್ಟರೆ ಅಂತಹಾ ಅನಾಹುತಗಳೇನೂ ಆಗುತ್ತಿರಲಿಲ್ಲ. ಜೂನ್ ಎಂದರೆ ಮಳೆಗಾಲ ಅನ್ನುವಷ್ಟು ಕರಾರುವಕ್ಕಾಗಿ ಹೊಡೆಯುತ್ತಿದ್ದ ಮಳೆಗೆ ಇತ್ತೀಚೆಗೆ ಆದಲ್ಲಾದರೂ ಏನು? ಕಾದು ಕಾದು ಯಾವತ್ತೋ ಹೊಡೆಯುವ ಮಳೆ ಕಾಟಾಚಾರಕ್ಕೆ ಲೆಕ್ಕ ಒಪ್ಪಿಸುವಂತಿದೆ. ಇತ್ತೀಚಿನ ಮೂರು ವರ್ಷ ನಮ್ಮ ಕೊಡಗಿನಲ್ಲಿ ಕಂಡು ಕೇಳರಿಯದ ಮಳೆ ಬಂದು ಊರಿಗೆ ಊರೇ ಕಣ್ಮರೆಯಾದದ್ದು ಕಣ್ಣಾರೆ ಕಂಡ ಮೇಲೆ ಕಣ್ಣೊಳಗೊಂದು ದಿಗಿಲು ಹಣಕಿ ಹಾಕುವಂತಾಗಿದೆ.
-ಸ್ಮಿತಾ ಅಮೃತರಾಜ್,ಸಂಪಾಜೆ