Advertisement

ಮಳೆ ಹಿಡಿದಿಟ್ಟ ನೆನಪುಗಳ ಸರಣಿ…

03:33 PM Jun 08, 2021 | Team Udayavani |

ಪ್ರಕೃತಿ ತುಂಬಾ ಸುಂದರ. ಈ ಸುಂದರತೆಯಲ್ಲಿ ಬರುವ ಮೂರು ಕಾಲಗಳು ಪ್ರಕೃತಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಕಾಲ, ಆಕಾಶದಲ್ಲಿ ಮೋಡ ಕವಿದು ಜಗತ್ತಿನಲ್ಲಿ ಸಂತೋಷದ ಗಾಳಿ ಬೀಸುವ ಕಾಲ ಅದುವೇ ಮಳೆಗಾಲ.

Advertisement

ಮಳೆಗಾಲವೆಂದರೆ ನನಗೆ ನೆನಪಾಗುವುದು ನನ್ನ ಬಾಲ್ಯ. ಅಣ್ಣ ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದೆವು. ಆದರೆ ಅದೇಕೋ ಗೊತ್ತಿಲ್ಲ ಒಟ್ಟಿಗೆ ಮಾತ್ರ ಹೋಗುತ್ತಿರಲಿಲ್ಲ. ಆ ಕಾರಣದಿಂದಾಗಿ ಮಳೆಗಾಲದಲ್ಲಿ ಕೊಡೆಗಾಗಿ ಜಗಳವಾಡುತ್ತಿದ್ದೆವು. ಹೀಗೆ ಒಂದು ದಿನ ಶಾಲೆಗೆ ಹೋಗುವ ಮುನ್ನ ಕೊಡೆಗಾಗಿ ಜಗಳವಾಡುತ್ತಿದ್ದಾಗ, ಆ ಕೊಡೆಯಿಂದ ಅವನಿಗೆ ಹೊಡೆದು ಬಿಟ್ಟೆ. ನೋಡುನೋಡುತ್ತಿದ್ದಂತೆ ಕೊಡೆ ಮುರಿದುಹೋಗಿತ್ತು. ನನಗೆ ಅವನು ಮತ್ತೆ ಹೊಡೆಯುತ್ತಾನೆ ಎಂಬ ಭಯಕ್ಕಿಂತ ಕೊಡೆ ತಂದು ಇನ್ನು ಮೂರು ದಿನವೂ ಆಗಿರಲಿಲ್ಲ ಅದನ್ನು ಅಮ್ಮ ನೋಡಿದರೆ ಏನು ಮಾಡುತ್ತಾಳೆ ಎಂಬ ಭಯ ಹೆಚ್ಚಿತ್ತು. ಅದನ್ನು ಮನೆಯಲ್ಲಿ ಅಮ್ಮನಿಗೆ ಕಾಣದ ಹಾಗೆ ಮೆಲ್ಲಗೆ ತಂದು ಬಚ್ಚಿಟ್ಟೆ. ಆ ದಿನ ನನ್ನ ಮನಸ್ಸು ಕೊಡೆ ಮುರಿದದ್ದನ್ನು ನೆನೆದು ಚಡಪಡಿಸುತ್ತಿತ್ತು.

ಬಾನಂಚಿನಲಿ ಚಂದಿರ ಮುಳುಗಿ ಸೂರ್ಯನ ಉದಯವಾಯಿತು. ದಿನವು ಶಾಲೆಗೆ ಪ್ರಾರ್ಥನಾ ಗೀತೆ ಮುಗಿದ ಅನಂತರ ಹೋಗುತ್ತಿದ್ದ ನಾನು, ಅಂದು ಮಾತ್ರ ಅರ್ಧ ಗಂಟೆ ಮುಂಚಿತವಾಗಿ ಕೊಡೆಯನ್ನು ಬಿಟ್ಟು ಸುರಿಯುತ್ತಿದ್ದ ಮಳೆಯಲ್ಲಿ ಶಾಲೆಗೆ ಓಡಿದೆ. ಹೇಗೋ ಅಮ್ಮನಿಗೆ ಗೊತ್ತಾಗುವ ಮುಂಚೆ ಶಾಲೆಗೆ ಬಂದೆ. ಆದರೆ ನೋಡುನೋಡುತ್ತಿದ್ದಂತೆ ಹೊತ್ತು ಕಳೆದು ಸಂಜೆ ಹೊತ್ತಾಯ್ತು ಶಾಲೆ ಬೆಲ್‌ ಢಣ್‌ ಢ‌ಣ್‌ ಎಂದು ಬಾರಿಸಿಯೇ ಬಿಟ್ಟಿತು. ಪ್ರತೀ ದಿನ ಬೆಲ್‌ ಶಬ್ದಕಾಗಿ ಕಾಯುತ್ತಿದ್ದ ನಾನು, ಅಂದು ಮಾತ್ರ ಈ ಬೆಲ್‌ ಯಾಕಾದರೂ ಹೊಡೆಯಿತು. ಈಗ ಮನೆಗೆ ಹೋಗಬೇಕಲ್ಲ. ಇಷ್ಟು ಹೊತ್ತಿಗಾಗಲೇ ಅಮ್ಮ ಕೊಡೆಯನ್ನು ನೋಡಿದರೆ ಏನಪ್ಪಾ ನನ್ನ ಗತಿ ಎಂದು ಭಯದಿಂದಲೇ ಮನೆಯತ್ತ ಹೆಜ್ಜೆ ಹಾಕಿದೆ.

ಯಾವತ್ತೂ ನನ್ನ ಒಟ್ಟಿಗೆ ಬರದ ಅಣ್ಣ ಅಂದು ನನ್ನ ಜತೆ ಮನೆಗೆ ಬಂದ. ದಾರಿಯುದ್ದಕ್ಕೂ ರೇಗಿಸುತ್ತಲೇ ಬರುತಿದ್ದ ಆತ ನನ್ನ ಕೋಪವನ್ನು ನೆತ್ತಿಗೇರಿಸಿದ್ದ. ಆದರೆ ಅಮ್ಮ ಮತ್ತೆಲ್ಲಿ ಹೊಡೆಯುವಳು ಎಂಬ ಭಯ ಇದ್ದೇ ಇತ್ತು. ಆದರೆ ಮನೆಗೆ ಬಂದು ನೋಡಿದರೆ ಕೊಡೆ ಸರಿಯಾಗಿತ್ತು. ಆಗ ಅಣ್ಣ ನನ್ನನ್ನು ನೋಡಿ, ತಲೆಗೆ ಒಂದು ಪೆಟ್ಟು ಕೊಟ್ಟು, ಕೊಡೆ ಸರಿಮಾಡಿಸಿದ್ದೀನಿ, ಅಂಜಬೇಡ, ಅಮ್ಮ ಏನು ಅನ್ನಲ್ಲ ಎಂದ. ಆ ಕ್ಷಣಕ್ಕೆ ನಿರಾಳನಾದೆ.

ನನಗೆ ಈಗಲೂ ಮಳೆಗಾಲದಲ್ಲಿ ಕೊಡೆ ಹಿಡಿದಾಗಲೆಲ್ಲ ಆ ನೆನಪುಗಳು ಮರುಕಳಿಸುತ್ತವೆ. ಪ್ರಾಥಮಿಕ ಶಾಲೆಯನ್ನು ಅಣ್ಣನೊಟ್ಟಿಗೆ ಕಳೆದ ಕ್ಷಣಗಳು ನಿಜಕ್ಕೂ ಸ್ಮರಣೀಯ.

Advertisement

 

ಜ್ಯೋತಿ ಪಾಟೀಲ್‌

ಎಸ್‌ಜೆಎಂವಿಎಸ್‌ ಮಹಿಳಾ ಕಾಲೇಜು, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next