Advertisement

ಅದಮಾರು ಮಠದ ಒಳಾಂಗಣದಲ್ಲಿ ಮಳೆ ನೀರ ಕೊಯ್ಲು

11:09 PM Dec 09, 2019 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಬಾರಿ ಪರ್ಯಾಯ ಪೂಜೆಯನ್ನು ನಿರ್ವಹಿಸಲಿರುವ ಅದಮಾರು ಮಠದ ಸ್ವಾಮೀಜಿಯವರು ತಮ್ಮ ಮಠದಲ್ಲಿ ಮಳೆ ನೀರು ಕೊಯ್ಲು ನಡೆಸಲು ಬೇಕಾದ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

Advertisement

ಮಠದ ಗರ್ಭಗುಡಿ ಸುತ್ತಲೂ ಇರುವ ಪೌಳಿಯ ನಡುವೆ ನಾಲ್ಕೂ ಕಡೆಗಳಿಂದ ಮಾಡಿನ ನೀರು ಕೆಳಗೆ ಬೀಳುವ ಅಂಗಣವಿದೆ. ಇದಕ್ಕೆ ಈ ಹಿಂದೆ ಎಲ್ಲ ಕಡೆ ಇರುವಂತೆ ಸಿಮೆಂಟ್‌ ಹಾಕಿದ ಕಾರಣ ನೀರು ಇಂಗದೆ ಹೊರಗೆ ಹೋಗುತ್ತಿತ್ತು. ಈಗ ಈ ಸಿಮೆಂಟ್‌ ನೆಲವನ್ನು ತೆಗೆದು ಎರಡೂವರೆ ಅಡಿ ಆಳದಲ್ಲಿ ಹೊಯಿಗೆ, ಜಲ್ಲಿಯನ್ನು ಹಾಕಿ, ಅದರ ಮೇಲೆ ಸುಮಾರು ಎರಡು ಇಂಚಿನ ಮೂರು ರಂಧ್ರಗಳಿರುವ ಇಟ್ಟಿಗೆಗಳನ್ನು ಕೂರಿಸಲಾಗುತ್ತಿದೆ.

ಆಳದಲ್ಲಿ ಅರ್ಧ ಅಡಿ ಮರಳು ಹಾಕಿ ಅದರ ಮೇಲೆ ಒಂದು ಅಡಿ ಜಲ್ಲಿಯನ್ನು ಹಾಕಿದ್ದಾರೆ. ಮರಳಿನೊಂದಿಗೆ ಶೇ.2ರಷ್ಟು ಸುಣ್ಣವನ್ನು ಬೆರೆಸಲಾಗಿದೆ. ಜಲ್ಲಿಯ ಮೇಲೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸುತ್ತಾರೆ. ಮಳೆಗಾಲದಲ್ಲಿ ನೀರು ಇಟ್ಟಿಗೆ ಮೇಲೆ ಬಿದ್ದು ಅದು ಭೂಮಿಯಲ್ಲಿ ಇಂಗುತ್ತದೆ. ಒಟ್ಟು ಸುಮಾರು 800 ಚದರಡಿ ಪ್ರದೇಶದಲ್ಲಿ ನೀರು ಇಂಗಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಮನೆಮನೆಗಳಲ್ಲೂ ಪ್ರಯತ್ನ ಅಗತ್ಯ
ಎಲ್ಲರ ಮನೆಗಳ ಮುಂದಿನ/ಹಿಂದಿನ ಅಂಗಣ ಹಿಂದೆ ಮಣ್ಣಿನಿಂದ ಕೂಡಿರುತ್ತಿತ್ತು. ಒಂದೆರಡು ದಶಕಗಳ ಹಿಂದೆ ನೀರನ್ನು ಇಂಗಿಸುವ, ಪರಿಸರಪೂರಕ ಮಣ್ಣಿನ ಅಂಗಣ ಅಮಾನ್ಯವಾಗಿ ನೀರನ್ನು ಇಂಗಿಸದ, ಪರಿಸರನಾಶಕವಾದ ಸಿಮೆಂಟ್‌ ಅಂಗಣ ಮಾನ್ಯವಾಯಿತು. ಇತ್ತೀಚೆಗೆ ನೀರಿನ ಕೊರತೆ ಎದುರಾದಾಗ ಪರಿಸರಪೂರಕ ಮಣ್ಣಿನ ಅಂಗಣವನ್ನು ಅಮಾನ್ಯಗೊಳಿಸಿದ್ದು ತಪ್ಪು ಎಂಬ ಭಾವನೆ ಕ್ರಮೇಣ ತಿಳಿಯುತ್ತಿದೆ. ಹೀಗಾಗಿ ಮತ್ತೆ ಮಣ್ಣಿನ ಅಂಗಣಕ್ಕೆ ಮಾನ್ಯತೆ ಬರುತ್ತಿದೆ. ಈಗಿನಿಂದ ಮುಂದಿನ ಬೇಸಗೆಯೊಳಗೆ ತಮ್ಮ ತಮ್ಮ ಮನೆ ಪರಿಸರಕ್ಕೆ ಸರಿಹೊಂದುವ ಮಳೆ ನೀರು ಕೊಯ್ಲು ಕಾಮಗಾರಿಯನ್ನು ನಡೆಸಿದರೆ ಮುಂದಿನ ಮಳೆಗಾಲದ ನೀರಿನ ಕೊಯ್ಲು ಮಾಡಿ ಅದರ ಮುಂದಿನ ಬೇಸಗೆಯ ಪರದಾಟವನ್ನು ತಪ್ಪಿಸಬಹುದು.

ಈ ಹಿಂದೆ ಮಾಡಿನ ಮೂಲಕ ಬಂದ ಮಳೆ ನೀರು ಇಂಗದೆ ನೇರವಾಗಿ ತೋಡು ಸೇರುತ್ತಿತ್ತು. ಮಠದ ಗರ್ಭಗುಡಿ ಹೊರಗಿನ ಈ ಕಾಮಗಾರಿ ನಡೆಯುವ ಸುತ್ತಿನಲ್ಲಿಯೇ ಒಂದು ಬಾವಿ ಇದೆ. ಇದಲ್ಲದೆ ಇನ್ನೆರಡು ಬಾವಿಗಳು ಮಠದ ಆವರಣದಲ್ಲಿ ಇವೆ. ಮಳೆ ನೀರು ಇಂಗಿ ಯಾವುದಾದರೂ ಬಾವಿಗೆ ಹೋಗು ವಂತಾಗಿ ಜಲಸಮೃದ್ಧಿಯಾಗಲಿ ಎಂಬ ಮುಂದಾ ಲೋಚನೆಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ.
– ರಾಘವೇಂದ್ರ ರಾವ್‌, ವ್ಯವಸ್ಥಾಪಕರು, ಅದಮಾರು ಮಠ, ಉಡುಪಿ

Advertisement

ಅದಮಾರು ಮಠದ ಗರ್ಭಗುಡಿ ಹೊರಗಿನ ಪ್ರದೇಶದಲ್ಲಿ ಮೊದಲು ಮರಳು ಹಾಕಿ ಅದರ ಮೇಲೆ ಜಲ್ಲಿಯನ್ನು ಹಾಕಲಾಗಿದೆ. ಇನ್ನು ಮುಂದೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next