Advertisement

ನೀರಿಲ್ಲದ ಶೌಚಾಲಯಕ್ಕೆ ಮಳೆ ನೀರು ಸದ್ಬಳಕೆ

11:34 PM Jul 14, 2019 | Team Udayavani |

ಕೈಕಂಬ: ಕೈಕಂಬದ ಜಂಕ್ಷನ್‌ನ ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ದುಸ್ಥಿತಿಯಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಮಳೆ ನೀರನ್ನು ಶೇಖರಿಸಿ, ಉಪಯೋಗಿಸುತ್ತಿದ್ದು ಸಮಸ್ಯೆಗೆ ಗ್ರಾ.ಪಂ. ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ.

Advertisement

ನೀರಿನ ಸಮಸ್ಯೆಯಿಂದಾಗಿ ಸ್ವಚ್ಛತೆ ಇಲ್ಲದೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದ ಶೌಚಾಲಯದಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿತ್ತು. ಈ ಸಂದರ್ಭ ಸ್ಥಳೀಯಾಡಳಿತ ಕಟ್ಟಡದ ಛಾವಣಿಯ ಮಳೆಯ ನೀರನ್ನು ಪೈಪುಗಳ ಮೂಲಕ ಟ್ಯಾಂಕ್‌ನಲ್ಲಿ ಶೇಖರಿಸಿ, ಶೌಚಾಲಯಕ್ಕೆ ಉಪಯೋಗವಾಗುವಂತೆ ಮಾಡಿದೆ. ಮಳೆನೀರನ್ನು ಸಂರಕ್ಷಿಸಿ ಅಗತ್ಯದ ಪೂರೈಕೆಯಿಂದಾಗಿ ಸಮಸ್ಯೆ ಪರಿಹಾರವಾಗಿದೆ.

ಸಮಸ್ಯೆ ಪರಿಹಾರಕ್ಕೆ ಶಾಸಕರ ಆಗ್ರಹ
ಶಾಸಕ ಡಾ| ಭರತ್‌ ಶೆಟ್ಟಿ ಅವರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶೌಚಾಲಯದ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ಶಾಸಕರು ಪಡುಪೆರಾರ ಗ್ರಾ.ಪಂ. ಪಿಡಿಒ ಡಾ| ಮನೋಹರ ಗೌಡ ಅವರಿಗೆ 10 ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಶಾಸಕರು ಸೂಚಿಸಿದ್ದರು.

ಎಂಆರ್‌ಪಿಎಲ್ ಟ್ಯಾಂಕ್‌ನ ಬಳಿಯ ಕೊಳವೆ ಬಾವಿಯಿಂದ ಈ ಶೌಚಾಲಯಕ್ಕೆ ನೀರು ಸರಬರಾಜು ಆಗುತಿತ್ತು. ಅದರೆ ಮಾರ್ಚ್‌ನಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ನೀರು ಸರಬರಾಜು ನಿಲ್ಲಿಸಲಾಯಿತು. ಈ ಮಧ್ಯೆ ಕೆಲವು ದಿನಗಳವರೆಗೆ ರಿಕ್ಷಾಚಾಲಕರು ಟ್ಯಾಂಕರ್‌ನ‌ಲ್ಲಿ ನೀರು ತರಿಸಿ, ಶೌಚಾಲಯ ಉಪಯೋಗವಾಗುವಂತೆ ಮಾಡಿದ್ದರು. ಆದರೆ ಮುಂದೆ ಇನ್ನು ನೀರಿನ ಸಮಸ್ಯೆ ತಲೆದೋರಿತು.

ಶೌಚಾಲಯದ ನೀರಿನ ಸಮಸ್ಯೆ ಹೋಗಲಾಡಿಸಲು ಪಡುಪೆರಾರ ಗ್ರಾ.ಪಂ. ಕೈಕಂಬದ ಪಂಚಾಯತ್‌ ಕಟ್ಟಡದ ಛಾವಣಿಗೆ ಪೈಪ್‌ಗ್ಳನ್ನು ಅಳವಡಿಸಿ ಛಾವಣಿಯಲ್ಲಿ ಬಿದ್ದ ಮಳೆ ನೀರನ್ನು ಟ್ಯಾಂಕ್‌ಗೆ ಬೀಳುವಂತೆ ಮಾಡಲಾಯಿತು. ಶೌಚಾಲಯದಲ್ಲಿ 2 ನೀರಿನ ಟ್ಯಾಂಕ್‌ಗಳಿದ್ದು ಒಂದು ಭರ್ತಿಯಾದ ಬಳಿಕ ಇನ್ನೊಂದಕ್ಕೆ ನೀರು ತುಂಬುವಂತೆ ಅದಕ್ಕೆ ಪೈಪ್‌ ಅಳವಡಿಸಲಾಗಿದೆ. ಇದರಿಂದಾಗಿ ನೀರಿನ ತಾತ್ಕಾಲಿಕ ಸಮಸ್ಯೆ ಪರಿಹಾರವಾಯಿತು.

Advertisement

ತಾತ್ಕಾಲಿಕ ಸಮಸ್ಯೆ ಪರಿಹಾರ
ಶೌಚಾಲಯಕ್ಕೆ ತಾತ್ಕಾಲಿಕವಾಗಿ ಛಾವಣಿಗೆ ಬಿದ್ದ ಮಳೆ ನೀರನ್ನು ಟ್ಯಾಂಕ್‌ನಲ್ಲಿ ಶೇಖರಿಸಲು ಪೈಪುಗಳನ್ನು ಅಳವಡಿಸಲಾಗಿದೆ. ಸುಮಾರು 1,500 ರೂಪಾಯಿ ಖರ್ಚು ಆಗಿದೆ. ಈ ಪ್ರದೇಶದಲ್ಲಿ ಇನ್ನೊಂದು ಕೊಳವೆಬಾವಿಗೆ ಪಂಚಾಯತ್‌ ನಿರ್ಣಯ ಮಾಡಲಾಗಿದೆ. ಶೌಚಾಲಯದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಆದರೆ ಸಾರ್ವಜನಿಕರು ನೈರ್ಮಲ್ಯವನ್ನು ಕಾಪಾಡಬೇಕಿದೆ.
– ಡಾ|ಮನೋಹರ ಗೌಡ,ಪಿಡಿಒ.

Advertisement

Udayavani is now on Telegram. Click here to join our channel and stay updated with the latest news.

Next