Advertisement

ಜಲಮಂಡಳಿಗೆ ವರದಾನವಾದ ಮಳೆಕೊಯ್ಲು

12:41 PM Jul 04, 2018 | Team Udayavani |

ಬೆಂಗಳೂರು: ನಾಗರಿಕರು ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ನಿರಾಸಕ್ತಿ ತೋರಿರುವುದು ಬೆಂಗಳೂರು ಜಲಮಂಡಳಿಗೆ ವರದಾನವಾಗಿದ್ದು, ಪ್ರತಿ ತಿಂಗಳು ದಂಡದ ರೂಪದಲ್ಲಿ ಮಂಡಳಿಗೆ ಕೋಟ್ಯಂತರ ರೂ. ದಂಡ ಸಂಗ್ರಹವಾಗುತ್ತಿದೆ. 

Advertisement

ಬೃಹತ್‌ ಕಟ್ಟಡಗಳಿಗೆ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದರೂ, ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆಗೆ ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬಿಲ್‌ ಮೇಲೆ ಇಂತಿಷ್ಟು ಪ್ರಮಾಣದ ದಂಡವನ್ನು ಪ್ರತಿ ತಿಂಗಳು ಹಾಕುತ್ತಿದ್ದು, ತಿಂಗಳಿಗೆ ದಂಡದ ರೂಪದಲ್ಲಿಯೇ ಮಂಡಳಿಗೆ 2 ಕೋಟಿ ರೂ. ಸಂದಾಯವಾಗುತ್ತಿದೆ.

ರಾಜಧಾನಿಯಲ್ಲಿ ಅಂತರ್ಜಲ ಪ್ರಮಾಣ ದಿನೇ ದಿನೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬವಣೆ ಉಂಟಾಗಬಾರದೆಂಬ ಉದ್ದೇಶದಿಂದ ಮಳೆನೀರು ಕೊಯ್ಲು ಪದ್ಧತಿಯ ಕುರಿತು ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ 2009 ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು 30*40 ಚ.ಅಡಿಯಲ್ಲಿ ನಿರ್ಮಾಣವಾಗುವ ಎಲ್ಲಾ ಹೊಸ ಕಟ್ಟಡಗಳು ಹಾಗೂ 60*40 ಚ.ಅಡಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಸುತ್ತಳತೆಯಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಆ ಹಿನ್ನೆಲೆಯಲ್ಲಿ ಜಲಮಂಡಳಿಯು 2009 ರಿಂದಲೂ ಮಳೆನೀರು ಕೊಯ್ಲು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಆನಂತರವೂ ಗ್ರಾಹಕರು ನಿಯಮ ಪಾಲಿಸದಿದ್ದಾಗ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಾಗ, ಕೆಲ ಹಳೆಯ ಕಟ್ಟಡಗಳಿಗೆ ಮಾತ್ರ ವಿನಾಯ್ತಿ ನೀಡಿ ನಿಯಮ ಬದಲಿಸಿತ್ತು. ಅದರ ನಂತರವೂ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಜಲಮಂಡಳಿಯು ದಂಡ ಪ್ರಯೋಗಕ್ಕೆ ಮುಂದಾಗಿದೆ. 

Advertisement

ಹೆದರಿದ ಗ್ರಾಹಕರು: ಕಾಯ್ದೆ ಜಾರಿಗೆ ಬಂದು 9 ವರ್ಷ ಕಳೆದರೂ ಹೆಚ್ಚಿನ ಜನರು ಮಳೆ ನೀರು ಸಂಗ್ರಹಿಸಿ ಬಳಸಲು ಮುಂದಾಗಿರಲಿಲ್ಲ. ಜತೆಗೆ ಮಳೆ ನೀರು ಅಂತರ್ಜಲಕ್ಕೆ ಹೋಗಲು ಇಂಗುಗುಂಡಿಗಳನ್ನು ಸಹ ನಿರ್ಮಿಸಿಲ್ಲ. ಹೀಗಾಗಿ ಜಲಮಂಡಳಿ 2017 ಫೆಬ್ರವರಿಯಲ್ಲಿ ದಂಡ ವಿಧಿಸಲು ಕ್ರಮಕೈಗೊಂಡ ಪರಿಣಾಮ, ದಂಡ ಕಟ್ಟಬೇಕೆಂದು ಹೆದರಿಸದ 56 ಸಾವಿರ ಕಟ್ಟಡ ಮಾಲೀಕರು ಒಂದು ವರ್ಷದಲ್ಲಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆದರೆ, ಇನ್ನೂ 98 ಸಾವಿರ ಕಟ್ಟಡಗಳು ಬಾಕಿಯಿದ್ದು, ಈ ಕಟ್ಟಡಗಳಿಗೆ ಪ್ರತಿ ತಿಂಗಳು ದಂಡ ಹಾಕಲಾಗುತ್ತಿದೆ.

ದಂಡ ಪ್ರಮಾಣ ಹೇಗೆ?: ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳನ್ನು ಪಟ್ಟಿ ಮಾಡಿರುವ ಜಲಮಂಡಳಿಯು ಆ ಕಟ್ಟಡಗಳ ನೀರಿನ ಶುಲ್ಕದ ಜತೆಗೆ ದಂಡವೂ ಸೇರಿ ಬರುವಂತೆ ವ್ಯವಸ್ಥೆ ಮಾಡಿದೆ. ಅದರಂತೆ ಗೃಹಬಳಕೆ ಕಟ್ಟಡಗಳಿಗೆ ಮೊದಲ ಮೂರು ತಿಂಗಳಿಗೆ ಒಟ್ಟಾರೆ ಬಿಲ್‌ನ ಶೇ 25ರಷ್ಟು ದಂಡ ಹಾಕಲಾಗಿದೆ. ಆರು ತಿಂಗಳ ನಂತರ ಶೇ50ರಷ್ಟು ದಂಡ ಹಾಕಲಾಗುತ್ತಿದೆ.

ಇನ್ನು ಗೃಹೇತರ ಕಟ್ಟಡಗಳಿಗೆ ಮೊದಲ ಮೂರು ತಿಂಗಳು ಒಟ್ಟು ಶುಲ್ಕದ ಮೇಲೆ ಶೇ.50 ರಷ್ಟು, ನಂತರದಲ್ಲಿಯೂ ಅಳವಡಿಸಿಕೊಳ್ಳದಿದ್ದರೆ ಕಟ್ಟಡಗಳಿಗೆ ಶೇ 100 ರಷ್ಟು ದಂಡ ಹಾಕಲಾಗುತ್ತಿದೆ. ಉದಾಹರಣೆಗೆ ಗೃಹೇತರ ಕಟ್ಟಡದ ನೀರಿನ ಶುಲ್ಕ 100 ರೂ ಬಂದರೆ ದಂಡ 100 ಸೇರಿ 200 ರೂ ಅನ್ನು ಬಿಲ್‌ ಪ್ರತಿಯೇ ಸೃಜಿಸುತ್ತದೆ. 

29.76 ಕೋಟಿ ರೂ. ದಂಡ ಸಂಗ್ರಹ: ಜಲಮಂಡಳಿಯ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಒಟ್ಟು 9.8 ಕಟ್ಟಡಗಳು ನೀರಿನ ಸಂಪರ್ಕ ಪಡೆದಿದ್ದಾರೆ. ಆ ಪೈಕಿ 1.95 ಲಕ್ಷ ಕಟ್ಟಡಗಳು ಮಳೆನೀರು ಕೊಯ್ಲು ಕಡ್ಡಾಯ ನಿಯಮಕ್ಕೆ ಒಳಪಡುತ್ತವೆ. ಈವರೆಗೆ 97,486 ಕಟ್ಟಡಗಳು ಮಳೆನೀರು ಕೊಯ್ಲು ಅಳವಡಿಸಿಕೊಂಡಿದ್ದು, ಇನ್ನೂ 97,686 ಕಟ್ಟಡಗಳು ಅಳವಡಿಸಿಕೊಳ್ಳದೆ ದಂಡ ಪಾವತಿಸುತ್ತಿವೆ. ಅದರಂತೆ ಒಂದು ವರ್ಷಗಳಲ್ಲಿ ಜಲಮಂಡಳಿಗೆ ದಂಡದ ರೂಪದಲ್ಲಿ 29.76 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಈಗಾಗಲೇ ಹಲವಾರು ಬಾರಿ ಜಾಗೃತಿ ಮೂಡಿಸಲಾಗಿದೆ. ಆ ನಂತರವೂ ನಿಯಮ ಪಾಲಸದ ಕಟ್ಟಡಗಳಿಗೆ ನೀರಿನ ಬಿಲ್‌ ಮೇಲೆ ದಂಡ ವಿಧಿಸಲಾಗುತ್ತಿದೆ. ಗ್ರಾಹಕರು ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡು ಆ ಕುರಿತು ದಾಖಲೆಗಳನ್ನು ಒದಗಿಸಿದ ಕೂಡಲೇ ದಂಡ ಹಾಕುವುದು ಸ್ಥಗಿತಗೊಳಿಸಲಾಗುವುದು.
-ಕೆಂಪರಾಮಯ್ಯ, ಪ್ರಧಾನ ಇಂಜಿನಿಯರ್‌ ಜಲಮಂಡಳಿ

ಜಲಮಂಡಳಿಗೆ ದಂಡದ ರೂಪದಲ್ಲಿ ಸಂಗ್ರಹವಾಗುವ ಆದಾಯ ಮುಖ್ಯವಲ್ಲ. ಬದಲಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಮಳೆನೀರು ಕೊಯ್ಲು ಅಳವಡಿಸಿಕೊಂಡು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಜಲಮಂಡಳಿಗೆ ಸಹಕಾರ ನೀಡಬೇಕಿದೆ.
-ಮಂಜುನಾಥ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಜಲಮಂಡಳಿ

ಅಂಕಿ ಅಂಶ ಬಾಕ್ಸ್‌…
-9.6 ಲಕ್ಷ ನಗರದಲ್ಲಿರುವ ಒಟ್ಟು ಸಂಪರ್ಕಗಳು
-1,450 ಎಂಎಲ್‌ಡಿ ನಿತ್ಯ ಪೂರೈಕೆಯಾಗುವ ನೀರಿನ ಪ್ರಮಾಣ
-97,486 ಮಳೆನೀರು ಕೊಯ್ಲು ಅಳವಡಿಸಿಕೊಂಡ ಕಟ್ಟಡಗಳು
-97,686 ಮಳೆನೀರು ಕೊಯ್ಲು ಅಳವಡಿಸಿಕೊಳ್ಳದೇ ದಂಡ ಪಾವತಿಸುತ್ತಿರುವ ಕಟ್ಟಡಗಳು
-2 ಕೋಟಿ ರೂ. ಪ್ರತಿ ತಿಂಗಳು ದಂಡದ ರೂಪದಲ್ಲಿ ಸಂಗ್ರಹವಾಗುತ್ತಿರುವ ಅಂದಾಜು ಮೊತ್ತ
-29.76 ಕೋಟಿ ರೂ. ಕಳೆದೊಂದು ವರ್ಷಗಳಲ್ಲಿ ಸಂಗ್ರಹವಾದ ದಂಡ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next