Advertisement

‘ಭವಿಷ್ಯದ ನೀರಿನ ಬವಣೆಗೆ ವರ್ತಮಾನದ ಪರಿಹಾರ ಮಳೆಕೊಯ್ಲು’

12:15 AM Aug 01, 2019 | Team Udayavani |

ಬೆಂದೂರ್‌: ಭವಿಷ್ಯದಲ್ಲಿ ನೀರಿನ ಅಭಾವದಿಂದ ಸಮಸ್ಯೆ ಅನುಭವಿಸುವ ಬದಲು ಇಂದೇ ನೀರು ಉಳಿತಾಯಕ್ಕೆ ಮುಂದಡಿ ಇಡಬೇಕು. ಅದಕ್ಕಾಗಿ ಮಳೆಕೊಯ್ಲು, ಜಲ ಮರುಪೂರಣವನ್ನು ಕೈಗೊಳ್ಳಬೇಕು ಎಂದು ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು.

Advertisement

ನಗರದ ಬೆಂದೂರ್‌ವೆಲ್ ಸೈಂಟ್ ಆ್ಯಗ್ನೆಸ್‌ ಪ.ಪೂ. ಕಾಲೇಜಿನಲ್ಲಿ ‘ಉದಯವಾಣಿ’ ಸಹಯೋಗದೊಂದಿಗೆ ನಡೆದ ಮಳೆಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಾರ್ಷಿಕ 3,500 ಮಿ. ಲೀಟರ್‌ನಿಂದ 4,000 ಮಿ. ಲೀಟರ್‌ವರೆಗೆ ಮಳೆ ಬೀಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ನೀರಿಗಾಗಿ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ. ಇರುವ ನೀರನ್ನು ಉಳಿಸಲು ಸೂಕ್ತವಾದ ಮಾರ್ಗವನ್ನು ಆಯ್ದುಕೊಳ್ಳಬೇಕು.

ಜೀವಜಲ ಉಳಿತಾಯ ಮಾಡುವ ನಿಟ್ಟಿನಲ್ಲಿ ಜನರನ್ನು ಪ್ರೇರೇಪಿಸಲು ‘ಉದಯವಾಣಿ’ ಪತ್ರಿಕೆಯು ಮಳೆಕೊಯ್ಲು ಅಭಿಯಾನ ಮಾಡಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದೆ. ಪತ್ರಿಕೆಯ ಸಾಮಾಜಿಕ ಜವಾಬ್ದಾರಿ ಶ್ಲಾಘನೀಯ. ಈ ಅಭಿಯಾನದ ಪ್ರೇರಣೆಯಿಂದ ಹಲವರು ತಮ್ಮ ಮನೆಗಳಲ್ಲಿ ಈಗಾಗಲೇ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳೂ ಈ ವಿಚಾರವನ್ನು ಮನೆಗಳಲ್ಲಿ ಪ್ರಸ್ತಾವಿಸಿ ಮಳೆಕೊಯ್ಲು ಅಳವಡಿಸಲು ಹೆತ್ತವರಿಗೆ ಹೇಳಬೇಕು ಎಂದವರು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ‘ಉದಯವಾಣಿ’ ಮಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಮಾತನಾಡಿ, ಮಳೆ ಕೊಯ್ಲು ಅಳವಡಿಸಿಕೊಂಡು ಭವಿಷ್ಯಕ್ಕಾಗಿ ನೀರು ಸಂಗ್ರಹಿಸಲು ಪ್ರತಿಯೊಬ್ಬರೂ ಯೋಜನೆ ರೂಪಿಸಬೇಕು.

Advertisement

ವಿದ್ಯಾರ್ಥಿಗಳು ಈ ಅತ್ಯುತ್ತಮ ಕೆಲಸದ ರಾಯಭಾರಿಗಳಾಗಬೇಕು ಎಂದರು.

ಕಾಲೇಜು ಪ್ರಾಂಶುಪಾಲೆ ಸಿ| ನೋರಿನ್‌ ಡಿ’ಸೋಜಾ, ಉಪ ಪ್ರಾಂಶುಪಾಲೆ ಜಾನೆಟ್ ಸಿಕ್ವೇರ, ಉಪನ್ಯಾಸಕ ಅಶ್ವಿ‌ನ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೇರಣದಾಯಿಯಾದ ಅಭಿಯಾನ
ವೆಲೆನ್ಸಿಯಾ ನೆಹರೂ ರಸ್ತೆಯಲ್ಲಿರುವ ಹರ್ಬರ್ಟ್‌ ಮೊಂತೆರೋ ಅವರ ಮನೆಯ ಬಾವಿಗೆ ಹದಿನೈದು ದಿನಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ‘ಉದಯವಾಣಿ’ ಸಹಯೋಗದಲ್ಲಿ ನಡೆದ ಮಳೆಕೊಯ್ಲು ಕಾರ್ಯಾ ಗಾರದಲ್ಲಿ ಭಾಗವಹಿಸಿ ಅಲ್ಲಿ ಸಿಕ್ಕ ಮಾಹಿತಿ ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ನೋಡಿ ಕೊಂಡು ಅವರು ಮಳೆಕೊಯ್ಲು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಮನೆಯ ಛಾವಣಿ ನೀರನ್ನು ಒಂದೆಡೆ ಹಿಡಿದಿಟ್ಟು ಪೈಪ್‌ ಮುಖಾಂತರ ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಕಸಕಡ್ಡಿ ಮಿಶ್ರಣಗೊಳ್ಳದೆ ಶುದ್ಧ ನೀರು ಬಾವಿಗೆ ಹೋಗುವಂತೆ ಫಿಲ್ಟರ್‌ ಅಳವಡಿಸಲಾಗಿದೆ.’ಉದಯವಾಣಿ’ ಅಭಿಯಾನದಿಂದ ಹಲವರು ಸ್ಫೂರ್ತಿ ಪಡೆದಿದ್ದಾರೆ. ನಾನೂ ಇದೇ ಪ್ರೇರಣೆಯಿಂದ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ ಹರ್ಬರ್ಟ್‌ ಮೊಂತೆರೋ.

ಬರಿದಾದ ಬಾವಿಗೆ ಮಳೆಕೊಯ್ಲು ನೀರು
ಮಾಡೂರು ಶಾರದಾನಗರದ ಕೆ.ಪಿ. ಲಕ್ಷ್ಮೀ ಹದಿನೈದು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮನೆಯ ಸುತ್ತಮುತ್ತ ಅನೇಕ ಬೋರ್‌ವೆಲ್ ಕೊರೆದ ಪರಿಣಾಮ ಅವರ ಮನೆಯ ಬಾವಿ ಬರಿದಾಗುತ್ತಿತ್ತು. ‘ಉದಯವಾಣಿ’ಯಲ್ಲಿ ಮಾಹಿತಿಯುಕ್ತ ಬರೆಹಗಳನ್ನು ನೋಡಿ ಪ್ರೇರಣೆಗೊಂಡರಲ್ಲದೆ, ಕುಂಪಲದಲ್ಲಿ ನಡೆದ ಮಳೆಕೊಯ್ಲು ಕಾರ್ಯಾಗಾರದಲ್ಲಿ ಭಾಗವ ಹಿಸಿದ್ದರು. ಅಲ್ಲಿ ಸಿಕ್ಕಿದ ಮಾಹಿತಿ-ಮಾರ್ಗದರ್ಶನದೊಂದಿಗೆ ಮರುದಿನವೇ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿದ್ದಾರೆ.

ಮನೆಯ ಛಾವಣಿ ನೀರನ್ನು ಪೈಪ್‌ ಮೂಲಕ ಬಾವಿಗೆ ಬಿಡಲಾಗಿದೆ. ಫಿಲ್ಟರ್‌ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ನಮ್ಮ ಮನೆ ದೊಡ್ಡ ಮನೆಯಾಗಿರುವುದರಿಂದ ಸುಮಾರು 12 ಸಾವಿರ ರೂ. ಖರ್ಚು ತಗಲಿದೆ ಎನ್ನುತ್ತಾರೆ ಕೆ.ಪಿ. ಲಕ್ಷ್ಮೀ ಅವರು.

Advertisement

Udayavani is now on Telegram. Click here to join our channel and stay updated with the latest news.

Next