ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಕ್ಕೂ ಅನುವು ಮಾಡಿಕೊಡುತ್ತಿಲ್ಲ. ಆದರೂ, ಸೇನೆಯ 60, ನೌಕಾಪಡೆಯ 73 ಯೋಧರು ರಕ್ಷಣಾ ಕೆಲಸದಲ್ಲಿ ತೊಡಗಿದ್ದಾರೆ.
ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ಸರ್ಕಾರದ ಮಾಹಿತಿ ಪ್ರಕಾರವೇ ಕೊಡಗು ಜಿಲ್ಲೆಯೊಂದರಲ್ಲೇ 98 ಕಿ.ಮೀ.ಗಳಷ್ಟು ರಸ್ತೆ, 58 ಸೇತುವೆಗಳು, 243 ಸರ್ಕಾರಿ ಕಟ್ಟಡಗಳು, 3006 ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು ನೆಲಕ್ಕುರುಳಿವೆ. ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದು, 845 ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆಗಳಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಜನರ ಓಡಾಟಕ್ಕೂ ತೊಂದರೆಯಾಗಿರುವ ಬಗ್ಗೆ ವರದಿಯಾಗಿದೆ. ಇದಷ್ಟೇ ಅಲ್ಲ, ಕೆಲವು ಪ್ರದೇಶಗಳಲ್ಲಿ ಮನೆಯೊಳಗಡೆ ಸಿಲುಕಿರುವ ಮಂದಿ ಎರಡು ದಿನಗಳಾದರೂ ಹೊರಗೆ ಬಾರದಿರುವಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಈ ಪ್ರಮಾಣದ ಮಳೆಯಾಗುತ್ತಿರುವುದರಿಂದ ಅಕ್ಷರಶಃ ಕೊಡಗಿನ ಜನ ದಿಕ್ಕೆಟ್ಟಿದ್ದಾರೆ. 600ಕ್ಕೂ ಹೆಚ್ಚು ಮಂದಿ ನೆರವಾಗಾಗಿ ಅಂಗಲಾಚುತ್ತಿದ್ದಾರೆ. ಕೆಲವೆಡೆ ಭೂಮಿಯೇ ಕೊಚ್ಚಿ ಹೋಗಿದ್ದು ಇದರಲ್ಲಿ ಜನರೂ ಸಿಲುಕಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ.
ಕೊಡಗು ಜಿಲ್ಲೆಯ ಮಾಂದಲ್‌ಪಟ್ಟಿ, ಮಕ್ಕಂದೂರು, ಹಾಲೇರಿ, ಗಾಳಿಬೀಡು, ಜೋಡಪಾಲ, ಹಟ್ಟಿಹೊಳೆ, ಮೇಘತ್ತಾಳ್, ತಂತಿಪಾತ, ಮುಕ್ಕೊಟ್ಲು ಬೆಟ್ಟ ಪ್ರದೇಶದಲ್ಲಿರುವ ಜನ ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಮಕ್ಕಂದೂರು ಆಸುಹಾಸಿನ ಗ್ರಾಮಗಳಿಗೆ ಗ್ರಾಮಗಳೇ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸರ್ಕಾರವೂ ಈಗಾಗಲೇ ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿಗೆ ಧಾವಿಸಿರುವುದು ಸಮಾಧಾನದ ಸಂಗತಿ. ಈಗಾಗಲೇ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಇವರು ಅಧಿಕಾರಿಗಳ ಜತೆ ಮಾತುಕತೆಯನ್ನೂ ನಡೆಸಿದ್ದಾರೆ. ಆದರೆ, ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರೇ ತಮ್ಮ ಗ್ರಾಮದ ಜನರ ರಕ್ಷಣೆಗಾಗಿ ಮೊರೆ ಇಟ್ಟಿರುವುದು ಮಳೆಯ ತೀವ್ರತೆಯನ್ನು ತೋರಿಸುತ್ತದೆ.
ಆದರೆ ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಕ್ಕೂ ಅನುವು ಮಾಡಿಕೊಡುತ್ತಿಲ್ಲ. ಆದರೂ, ಸೇನೆಯ 60, ನೌಕಾಪಡೆಯ 73 ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದರಲ್ಲಿ ನೌಕಾಪಡೆಯ 12 ತಜ್ಞ ಡೈವರ್‌ಗಳೂ° ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿಯಂತ್ರಣ ಪ್ರಾಧಿಕಾರದ 31 ಸಿಬ್ಬಂದಿ, ರಾಜ್ಯ ವಿಪತ್ತು ನಿಯಂತ್ರಣ ಪ್ರಾಧಿಕಾರದ 30 ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ನಾಗರಿಕರ ರಕ್ಷಣೆ(ಕ್ಯೂಆರ್‌ಟಿ), ಅಗ್ನಿಶಾಮಕ ದಳದ 200 ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದುವರೆಗಿನ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚೇ ಅನಾಹುತಗಳು ಸಂಭವಿಸಿವೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ 7,500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಇದು 12 ರಿಂದ 15 ಸಾವಿರ ಕೋಟಿ ರೂ.ಗಳಿಗೂ ಹೆಚ್ಚುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಕೇರಳದಲ್ಲಾಗುತ್ತಿರುವ ಮಳೆಯಿಂದಾಗಿ ಮೈಸೂರು ಭಾಗದಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ಇದರಿಂದಲೂ ಹೆಚ್ಚು ನಷ್ಟವುಂಟಾಗಿದೆ. ಆದರೆ ಈ ಭಾಗದಲ್ಲಿ ಎಷ್ಟು ನಷ್ಟವಾಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಈ ಏಳು ಜಿಲ್ಲೆಗಳಲ್ಲಿ ಒಂದೂವರೆ ಸಾವಿರ ಮನೆಗಳಿಗೆ ಹಾನಿಯಾಗಿದ್ದು, ನೂರಾರು ಮನೆಗಳೂ ಸಂಪೂರ್ಣ ಕುಸಿದಿವೆ. ಹೀಗಾಗಿ ನಷ್ಟದ ಪ್ರಮಾಣ 15 ಸಾವಿರ ಕೋಟಿ ರೂ.ಗಳಿಗೆ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರಮಾಣದ ಅನಾಹುತ ಸಂಭವಿಸಿದಾಗ ಸರ್ಕಾರಗಳು ಅತಿ ಬೇಗನೇ ನೆರವಿಗೆ ಧಾವಿಸಬೇಕು. ಈಗಾಗಲೇ ಕೊಡಗು ಸೇರಿದಂತೆ ಉಳಿದ ಭಾಗಗಳ ಮಳೆ ಅನಾಹುತಗಳ ಬಗ್ಗೆ ವರದಿ ಪಡೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಕ್ಷಣಕ್ಕಾಗಿ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದರ ಜತೆಯಲ್ಲಿ ಜಿಲ್ಲೆಗಳ ಕಡೆಯಿಂದ ಮಳೆ ಹಾನಿ ವರದಿಯನ್ನು ತರಿಸಿಕೊಂಡು ಅತಿ ಶೀಘ್ರದಲ್ಲೇ ಮತ್ತಷ್ಟು ಹಣ ನೀಡುವ ಮೂಲಕ ನೆರವಿಗೆ ಧಾವಿಸಬೇಕಾಗಿದೆ.