Advertisement
ಮೂಡನಿಡಂಬೂರು, ನಿಟ್ಟೂರು, ಗುಂಡಿಬೈಲು ಮತ್ತು ಮಠದಬೆಟ್ಟಿನ ತಗ್ಗು ಪ್ರದೇಶಗಳು ಶನಿವಾರವೂ ಜಲಾವೃತವಾದವು. ಉಡುಪಿ ನಗರದ ಜೋಡುಕಟ್ಟೆಯಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಮಳೆನೀರು ರಸ್ತೆಯಲ್ಲಿಯೇ ಹರಿಯಿತು. ಹಳೆಯ ತಾಲೂಕು ಕಚೇರಿ ಆವರಣದಲ್ಲಿ ನೀರು ನಿಂತು ಇಲ್ಲಿ ಇತ್ತೀಚೆಗೆ ನಿರ್ಮಾಣವಾದ ಇಂದಿರಾ ಕ್ಯಾಂಟೀನ್‌ಗೆ ತೆರಳುವವರು ಪರದಾಡುವಂತಾಯಿತು. ಹೆದ್ದಾರಿ ಗುಂಡಿ
ಕರಾವಳಿ ಬೈಪಾಸ್ ಶಾರದಾ ಹೊಟೇಲ್ ಬಲ ಬದಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡಗಳು ಬಿದ್ದಿವೆ. ಇತ್ತ ಕರಾವಳಿ ಜಂಕ್ಷನ್‌ನಲ್ಲಿ ಉಡುಪಿ ನಗರದಿಂದ ಹೆದ್ದಾರಿ ಸಂಪರ್ಕಿಸುವಲ್ಲಿಯೂ ಹೊಂಡಗಳು ಬೀಳಲಾರಂಭಿಸಿವೆ. ಮುಖ್ಯವಾಗಿ ಇಲ್ಲಿ ಮಳೆನೀರು ಚರಂಡಿಯಲ್ಲಿ ಮೊನ್ನೆಯ ಮಳೆಗೆ ಬ್ಲಾಕ್ ಆದಾಗ ಅದನ್ನು ಸರಿಪಡಿಸಲು ತೋಡಿದ ಗುಂಡಿ ಅಪಾಯ ಆಹ್ವಾನಿಸುತ್ತಿದೆ.
ಅಂಬಾಗಿಲು ಮೀನುಮಾರುಕಟ್ಟೆ ಪರಿಸರದಲ್ಲಿ ಅಂಬಾ ಹೊಟೇಲ್ ಎದುರು ಕಳೆದೊಂದು ತಿಂಗಳಿನಿಂದ ಒಳಚರಂಡಿಯ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ಹೊರಗೆ ಚಿಮ್ಮುತ್ತಿದೆ. ಪೆರಂಪಳ್ಳಿವರೆಗೂ ಇದರ ನೀರು ಹರಿಯುತ್ತಿದೆ. ನಗರಸಭೆ ಸಿಬಂದಿ ಹಲವು ಬಾರಿ ಇದನ್ನು ದುರಸ್ತಿ ಮಾಡಿದರೂ ಪ್ರಯೋಜನವಾಗಿಲ್ಲ. ಶನಿವಾರ ಮಳೆಗೆ ಕೊಳಚೆ ನೀರು ಪ್ರವಾಹ ರೀತಿ ಹರಿಯಿತು. ನರ್ಮ್ ಬಸ್ ನಿಲ್ದಾಣ ಕೆಸರುಮಯ
ನರ್ಮ್ ಬಸ್‌ಗಳು ನಿಲುಗಡೆಯಾಗುವ ಉಡುಪಿ ಸಿಟಿ ಬಸ್‌ನಿಲ್ದಾಣ ಸಮೀಪದ ಸ್ಥಳ ಬೇಸಗೆಗೆ ಧೂಳಿನಿಂದ ಆವೃತವಾಗಿತ್ತು. ಈಗ ಮಳೆಗೆ ಕೆಸರುಮಯವಾಗಿದೆ. ಶನಿವಾರ ಬಸ್‌ಗಳನ್ನು ಹತ್ತಲು, ಬಸ್‌ನಿಂದ ಇಳಿದು ಬರಲು ಪ್ರಯಾಣಿಕರು ಪ್ರಯಾಸಪಟ್ಟರು.
ಬನ್ನಂಜೆ ಒಳರಸ್ತೆಯಲ್ಲಿ ಮರ ಬಿದ್ದುದನ್ನು ಅಗ್ನಿಶಾಮಕ ಸಿಬಂದಿ ತೆರವುಗೊಳಿಸಿದರು. ಅಂಬಲಪಾಡಿ ಸೇರಿದಂತೆ ವಿವಿಧೆಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಯಿತು. ಮಣಿಪಾಲ ಎಂಐಟಿ ಬಳಿ ಹಾಗೂ ಹೆರ್ಗ ಅಚ್ಯುತನಗರ ಪರಿಸರದಲ್ಲಿ ವಿದ್ಯುತ್ ಲೈನ್‌ಗಳು ಸ್ಪಾರ್ಕ್ ಆಗಿ ವಿದ್ಯುತ್ ಸಂಪರ್ಕ ಕಡಿತವಾಯಿತು.