Advertisement

ಭತ್ತ ಕಟಾವಿಗೆ ಮಳೆ ಅಡ್ಡಿ: ರೈತರ ಆತಂಕ

03:45 PM Oct 30, 2017 | |

ಕಿನ್ನಿಗೋಳಿ: ಜೂನ್‌ ತಿಂಗಳಲ್ಲಿ ಬಿತ್ತನೆಗೆ ಮಳೆಯ ಕೊರತೆ ಎದುರಾಗಿತ್ತು. ಆದರೆ, ಕಟಾವಿನ ವೇಳೆಗೆ ಸರಿಯಾಗಿ
ಮಳೆರಾಯ ಅಡ್ಡಿಯಾಗಿದ್ದು, ಬೆಳೆಸಿದ ಭತ್ತ ಮನೆಗೆ ತರಲಾಗದ ಸ್ಥಿತಿಯಲ್ಲಿರುವ ರೈತರು ಆತಂಕ ಎದುರಿಸುತ್ತಿದ್ದಾರೆ.

Advertisement

ಕಿನ್ನಿಗೋಳಿ ಸುತ್ತಮುತ್ತ ನೂರಾರು ಎಕರೆ ಕೃಷಿ ಭೂಮಿ ಇದ್ದು, ರೈತರು ಹೆಚ್ಚಾಗಿ ಭತ್ತ, ತೆಂಗು, ಅಡಿಕೆ, ಕಾಳು ಮೆಣಸು
ಬೆಳೆಯುತ್ತಾರೆ. ಭತ್ತ ಬೆಳೆದವರೀಗ ಕಟಾವು ಪ್ರಾರಂಭಿಸಿದ್ದಾರೆ. ಆದರೆ ಮಳೆರಾಯನ ಅಡ್ಡಿಯಿಂದ ಕಟಾವು ಮಾಡಿದ ಭತ್ತದ ಪೈರು ಗದ್ದೆಯಲ್ಲಿ ನೆನೆಯುತ್ತಿದೆ. ಕಟಾವು ಮಾಡಿದ ಬೈಹುಲ್ಲು ಕೊಳೆತು ಹಾಳಾಗಿದೆ. ಮೇವಿನ ಕೊರತೆಯಿಂದಾಗಿ ಬೈಹುಲ್ಲಿಗೂ ಸಾಕಷ್ಟು ಬೇಡಿಕೆ ಇರುವುದರಿಂದ ರೈತರು ಸಾವಿರಾರು ರೂಪಾಯಿ ನಷ್ಟ
ಅನುಭವಿಸುವಂತಾಗಿದೆ.

ಇದನ್ನು ನೋಡಿದ ಇನ್ನೂ ಕೆಲವು ರೈತರು ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ. ಹಸಿರು ಹುಲ್ಲಿನ ಕೊರತೆ ಇರುವವರು ಬೈಹುಲ್ಲನ್ನೇ ನೆಚ್ಚಿಕೊಂಡಿದ್ದರಂದ ಹೈನುಗಾರಿಕೆಗೂ ಈ ಬಾರಿ ಹೊಡೆತ ಬೀಳುವ ಸಾಧ್ಯತೆ ಎದುರಾಗಿದೆ.

ಕೂಲಿಯಾಳುಗಳ ಸಮಸ್ಯೆ
ಭತ್ತ ಬಿತ್ತನೆ ಹಾಗೂ ಕಟಾವಿಗೆ ಅಗತ್ಯ ಸಂಖ್ಯೆಯಲ್ಲಿ ಕೂಲಿಯಾಳುಗಳು ಸಿಗದೆ ಎರಡು ವರ್ಷಗಳ ಹಿಂದೆಯೇ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ, ಈ ಬಾರಿ ಮಳೆಯ ಕಾರಣದಿಂದ ಯಂತ್ರವೂ ಗದ್ದೆಗೆ ಇಳಿಯದ ಸ್ಥಿತಿಯಿದೆ. ಗದ್ದೆಯಲ್ಲಿ ಸಾಕಷ್ಟು ನೀರು ನಿಂತಿದ್ದು, ಕಟಾವು ಕಷ್ಟಸಾಧ್ಯವಾಗಿದೆ.

ಉಪ ಬೆಳೆಗೆ ಕುತ್ತು
ಭತ್ತದ ಅನಂತರ ಮಿಶ್ರ ಬೆಳೆಯಾಗಿ ಉದ್ದು, ಹೆಸರು, ಹುರುಳಿ ಮತ್ತಿತರ ಧಾನ್ಯಗಳನ್ನು ರೈತರು ಬೆಳೆಯುತ್ತಾರೆ. ಭತ್ತದ ಕಟಾವು ಆದ ಮೇಲೆ ಇವುಗಳನ್ನು ಬಿತ್ತಲಾಗುತ್ತದೆ. ಇದರಿಂದ ರೈತರಿಗೆ ಒಂದಿಷ್ಟು ಆದಾಯ ಬರುತ್ತಿತ್ತು. ಆದರೆ ಮಳೆ ಬಂದರೆ ಬಿತ್ತಿದ ಬೀಜಗಳು ಕೊಳೆತು ಹೋಗುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ.

Advertisement

ಕಟಾವಿಗೆ ಹಿನ್ನಡೆ
ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ಭತ್ತದ ಕೃಷಿಗೆ ಉತ್ತಮವಾಗಿದೆ. ಕೊನೆಯ ಹೊತ್ತಿನಲ್ಲಿ ಉತ್ತಮ ಮಳೆ
ಬಂದಿರುವುದರಿಂದ ಒಳ್ಳೆಯ ಫಸಲು ಬಂದಿದೆ. ಆದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಸಂಜೆಯ
ಹೊತ್ತು ಮಳೆ ಆರಂಭವಾಗುತ್ತಿದ್ದು, ಕಟಾವಿಗೆ ತುಂಬ ಹಿನ್ನಡೆಯಾಗಿದೆ. ಗದ್ದೆಗಳಲ್ಲಿ ನೀರು ತುಂಬಿರುವುದರಿಂದ
ಕಟಾವು ಯಂತ್ರಗಳನ್ನೂ ಗದ್ದೆಗೆ ಇಳಿಸದಂತಹ ಸ್ಥಿತಿ ಇದೆ.
ಸತೀಶ್‌ ಶೆಟ್ಟಿ , ಬೈಲಗುತ್ತು ಪಂಜ 

ರಘುನಾಥ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next