ಬೀದರ: ಕಳೆದೆರಡು ವರ್ಷಗಳಿಂದ ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮೂರು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಕಾರಂಜಾ ಜಲಾಶಯದಲ್ಲಿ ಕೂಡ ನೀರಿನ ಪ್ರಮಾಣ ಕಡಿಮೆಯಾಗಿದೆ.
ಭಾಲ್ಕಿ ತಾಲೂಕಿನ ಕಾರಂಜಾ ಜಲಾಶಯ 2016ರಲ್ಲಿ ಭರ್ತಿಯಾಗಿತ್ತು. ನಂತರದ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 7.691 ಟಿಎಂಸಿಯಾಗಿದ್ದು, ಜಲಾಶಯದಲ್ಲಿ ಸದ್ಯ 1.671 ಟಿಎಂಸಿಯಷ್ಟು ಮಾತ್ರ ನೀರಿದೆ. ಈ ಪೈಕಿ, 1.296 ಟಿಎಂಸಿ ನೀರು ಮಾತ್ರ ಬಳಸಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
2018ರ ಮೇ ತಿಂಗಳಲ್ಲಿ ಜಲಾಶಯದಲ್ಲಿ 582 ಮೀಟರ್ ನೀರಿನ ಸಂಗ್ರಹ ಇತ್ತು. (4.458 ಟಿಎಂಸಿ). ಸದ್ಯ 1.671 ಟಿಎಂಸಿಯಷ್ಟು ನೀರಿದೆ. ಒಂದು ವರ್ಷದಲ್ಲಿ ಸರಾಸರಿ 2.787 ಟಿಎಂಸಿ ನೀರು ಖಾಲಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ಬಾರದಿದ್ದರೆ ಹನಿ ನೀರಿಗೂ ಜನ, ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಕಾರಂಜಾ ಜಲಾಶಯದಿಂದ ಜಿಲ್ಲೆಯ ಹುಮನಾಬಾದ ಪಟ್ಟಣ ಹಾಗೂ ಚಿಟಗುಪ್ಪ ಪಟ್ಟಣಕ್ಕೆ ಪ್ರತಿ ವರ್ಷ 0.300 ಟಿಎಂಸಿ ನೀರು ಬಿಡಲಾಗುತ್ತಿದೆ. ಭಾಲ್ಕಿ ಪಟ್ಟಣಕ್ಕೆ 0.300 ಟಿಎಂಸಿ, ಬೀದರ ನಗರಕ್ಕೆ 0.387 ಟಿಎಂಸಿ, ಇತರ ಗ್ರಾಮಗಳಿಗೆ 0.0183 ಟಿಎಂಸಿ ನೀರನ್ನು ಪೂರೈಸಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಕನಿಷ್ಟ 1.005 ಟಿಎಂಸಿಯಷ್ಟು ನೀರು ಪೂರೈಕೆಯಾಗುತ್ತದೆ.
ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ), ಬೀದರ ನಗರ, ಭಾಲ್ಕಿ ಪಟ್ಟಣ, ಇತರ ಗ್ರಾಮಗಳಿಗೆ ಜಲಾಶಯದ ನೀರನ್ನು ಮೂರು ದಿನಕ್ಕೆ ಒಂದು ಬಾರಿ ಪೂರೈಸಲಾಗುತ್ತಿದೆ. ಈ ಮಧ್ಯೆ, ಔರಾದ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕಾರಂಜಾ ಜಲಾಶಯದ ನೀರನ್ನು ಔರಾದ ತಾಲೂಕಿಗೆ ಹರಿಸುವಂತೆ ಅಲ್ಲಿನ ಜನ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಸದ್ಯ ಜಲಾಶಯದಲ್ಲಿ 1.296 ಟಿಎಂಸಿ ನೀರಿದೆ. ಔರಾದ ತಾಲೂಕಿಗೆ ಹರಿಸಿದರೆ ಬಹುತೇಕ ನೀರು ಖಾಲಿಯಾಗುತ್ತದೆ. ಅಲ್ಲದೆ, ಜಲಾಶಯದ ನೀರು ಪೂರ್ತಿ ಖಾಲಿಯಾದರೂ ಔರಾದ ತಾಲೂಕಿಗೆ ನೀರು ತಲುಪುವುದು ಕಷ್ಟ. ಜಲಾಶಯದ ನೀರು ಖಾಲಿಯಾದರೆ ಮೂರು ತಾಲೂಕಿನ ಜನ ತೀವ್ರ ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತದೆ.
-ಆನಂದಕುಮಾರ, ಕಾರಂಜಾ ಜಲಾಶಯದ ಅಧಿಕಾರಿ.
* ದುರ್ಯೋಧನ ಹೂಗಾರ