Advertisement

ಮಳೆ ಕೊರತೆ: ವಿದ್ಯುತ್‌ ವ್ಯತ್ಯಯ ಭೀತಿ

02:49 AM Jun 19, 2019 | sudhir |

ಬೆಂಗಳೂರು: ಮಳೆ ಶೀಘ್ರ ಚುರುಕುಗೊಳ್ಳದಿದ್ದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಸದ್ಯ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲಿನ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ಮಳೆ ವಿಳಂಬದ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗುತ್ತಿದೆ. ಶೀಘ್ರ ಮಳೆ ತೀವ್ರಗೊಳ್ಳದಿದ್ದಲ್ಲಿ ಜಲ ವಿದ್ಯುತ್‌ನ ಸಮಸ್ಯೆ ಉದ್ಭವಿಸುವ ಭೀತಿ ಸೃಷ್ಟಿಯಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ. ಬೇಸಗೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ತಗ್ಗಿದ್ದು, 11,500 ಮೆಗಾ ವ್ಯಾಟ್‌ನಷ್ಟಿದ್ದ ಬೇಡಿಕೆ ಸದ್ಯ ಸರಾಸರಿ 10,000ದಿಂದ 10,500 ಮೆಗಾವ್ಯಾಟ್‌ಗೆ ಇಳಿಕೆಯಾಗಿದೆ.

ಹಾಗಾಗಿ ಬೇಡಿಕೆಯಷ್ಟು ವಿದ್ಯುತ್‌ ಪೂರೈಕೆಯಾಗುತ್ತಿದೆ. ಆದರೆ ಕೆಲವು ದಿನಗಳಿಂದ ವಿದ್ಯುತ್‌ ಬೇಡಿಕೆ ದಿಢೀರ್‌ ಏರಿಕೆಯಾಗಿದ್ದು, ಇನ್ನೂ ಬೇಡಿಕೆ ಹೆಚ್ಚಾದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಶೇ.10ರಷ್ಟು ಸಂಗ್ರಹ ಕೊರತೆ
ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವುದು ವಾಡಿಕೆ. ಒಂದು ವಾರ ವಿಳಂಬವಾಗಿ ಕರಾವಳಿ ಪ್ರವೇಶಿಸಿದರೂ ಅದು ಇತರೆಡೆಗೆ ವ್ಯಾಪಿಸಿಲ್ಲ. ಉತ್ತಮ ಮಳೆಯಾಗುತ್ತಿದ್ದರೆ ಈ ಹೊತ್ತಿಗೆ ಜಲಾಶಯಗಳಲ್ಲಿ
ಶೇ.10 ರಷ್ಟು ಹೆಚ್ಚುವರಿ ನೀರು ಸಂಗ್ರಹ ವಾಗು ತ್ತಿತ್ತು. ಒಳಹರಿವು ಇಲ್ಲದಿರುವುದು ಒಂದೆಡೆಯಾದರೆ ಮತ್ತೂಂದೆಡೆ ಜಲವಿದ್ಯುತ್‌ ಉತ್ಪಾದನೆಯಿಂದ ನೀರು ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಕರ್ನಾಟಕ ವಿದ್ಯುತ್‌ ನಿಗಮದ ಮೂಲಗಳು ತಿಳಿಸಿವೆ.

ಬೇಡಿಕೆ ಹೆಚ್ಚಾದರೆ ಕಷ್ಟ
ಸೋಮವಾರ 203 ದಶಲಕ್ಷ ಯೂನಿಟ್‌ ವಿದ್ಯುತ್‌ ಹಂಚಿಕೆ ಯಿದ್ದರೆ, ಬಳಕೆ ಪ್ರಮಾಣ 219 ದಶಲಕ್ಷ ಯೂನಿಟ್‌ ದಾಟಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಪಂಪ್‌ಸೆಟ್‌ ಬಳಕೆ ಹೆಚ್ಚಾಗ ಲಿದ್ದು, ಬೇಡಿಕೆ ಏರಿಕೆಯಾಗಲಿದೆ. ಇನ್ನೊಂದೆಡೆ ಸೌರ ವಿದ್ಯುತ್‌ ತಗ್ಗಿದರೆ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಮಾಸಾಂತ್ಯದೊಳಗೆ ಮಳೆ ಚುರುಕಾಗದಿದ್ದರೆ ವಿದ್ಯುತ್‌ ಉತ್ಪಾದನೆ ಯಲ್ಲಿ ವ್ಯತ್ಯಯ ಉಂಟಾಗಬಹುದು. ಜಲವಿದ್ಯುತ್‌ ಉತ್ಪಾದನೆ ಯನ್ನು ಬಯಸಿದಾಗ ಆರಂಭಿಸಲು ಹಾಗೂ ತ್ವರಿತವಾಗಿ ಸ್ಥಗಿತಗೊಳಿಸಲು ಅವಕಾಶವಿರುತ್ತದೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಉಪಯೋಗಿಸಬಹುದು. ಒಂದೊಮ್ಮೆ ನೀರಿನ ಸಂಗ್ರಹ ಕುಸಿದು ಉತ್ಪಾದನೆ ಸಾಧ್ಯವಾಗದಿದ್ದರೆ ವಿದ್ಯುತ್‌ ಉತ್ಪಾದನೆ, ನಿರ್ವಹಣೆ ವ್ಯವಸ್ಥೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಷ್ಟರೊಳಗೆ ಮಳೆ ಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಇಂಧನ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

Advertisement

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next