ಮಂಡ್ಯ: ಜಾನುವಾರುಗಳಿಗೆ ಕಿವಿಯೋಲೆ ತೊಡಿಸುವ ಅಭಿಯಾನ ಈ ತಿಂಗಳೊಳಗೆ ಪೂರ್ಣ, ಮಳೆ ಕೊರತೆಯಿಂದ ಬಿತ್ತನೆ ಕುಂಠಿತ, ತೆಂಗಿನ ಸಸಿಗಳನ್ನು ಪಡೆಯಲು ಮುಂದಾಗದ ರೈತ, ರೇಷ್ಮೆ ಹುಳುಮನೆಗೆ ಬೇಡಿಕೆ ಇದ್ದರೂ ಅನುದಾನವಿಲ್ಲ..
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ಕುಮಾರ್ ಮಾತನಾಡಿ, ಜಾನುವಾರುಗಳಿಗೆ ಕಿವಿಯೋಲೆ ತೊಡಿಸುವ ಅಭಿಯಾನ ಆರು ತಿಂಗಳಿಂದ ನಡೆಯುತ್ತಿದೆ. ಈ ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಮಂಡ್ಯ ತಾಲೂಕಿನಲ್ಲಿ ಈವರೆಗೆ ಹಾಲು ನೀಡುವ 28 ಸಾವಿರ ರಾಸುಗಳಿಗೆ ಕಿವಿಯೋಲೆ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವರಣೆಗೆ ಕಿವಿಯೋಲೆ: ರಾಸುಗಳಿಗೆ ಕಿವಿಯೋಲೆ ತೊಡಿಸುವ ಕಾರ್ಯದಲ್ಲಿ 44 ಪಶು ವೈದ್ಯಕೀಯ ಸಂಸ್ಥೆಗಳು ತೊಡಗಿವೆ. ಕಿವಿಯೋಲೆ ತೊಡಿಸುವುದರಿಂದ ಅದು ಯಾವ ತಳಿ, ಮಾಲೀಕರು ಯಾರು, ಅದರ ವಯಸ್ಸು ಎಷ್ಟು, ಎಷ್ಟು ಪ್ರಮಾಣದ ಹಾಲು ನೀಡುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಕಳ್ಳತನ ನಡೆಯದಂತೆ ಹಾಗೂ ರಾಸು ಸತ್ತ ಸಮಯದಲ್ಲಿ ಮಾಹಿತಿ ಸಂಗ್ರಹಿಸುವುದಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.
ಮನವೊಲಿಸಿ ಕಿವಿಯೋಲೆ ಅಳವಡಿಸಿ: ಪ್ರತಿ ಮನೆಗೂ ತೆರಳಿ ಜಾನುವಾರುಗಳಿಗೆ ಕಿವಿಯೋಲೆ ತೊಡಿಸಲಾಗುತ್ತಿದ್ದು, ಶೇ.90ರಷ್ಟು ರೈತರು ಇದಕ್ಕೆ ಸಹಕರಿಸುತ್ತಿದ್ದಾರೆ. ಕೆಲವರು ರಾಸುಗಳಿಗೆ ಗಾಯವಾಗಲಿದೆ ಎಂಬ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೃತಕ ಗರ್ಭಧಾರಣೆಗೆ ಬಂದ ಸಮಯದಲ್ಲಿ ಅವರ ಮನವೊಲಿಸಿ ಕಿವಿಯೋಲೆ ಅಳವಡಿಸಲಾಗುವುದು. 341 ಪ.ಜಾತಿ, ವರ್ಗದ ರಾಸುಗಳಿಗೆ ಉಚಿತ ಜಾನುವಾರು ವಿಮೆ ಮಾಡಿಸಲಾಗುತ್ತಿದೆ. ಅದಕ್ಕಾಗಿ ಸುಮಾರು 5 ಲಕ್ಷ ರೂ. ಹಣವನ್ನು ವಿಮಾ ಕಂಪನಿಗೆ ಇಲಾಖೆಯಿಂದಲೇ ಪಾವತಿಸಲಾಗುವುದು ಎಂದು ತಿಳಿಸಿದರು.
Advertisement
ಇವು ಸೋಮವಾರ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಬಂದ ಪ್ರಮುಖ ಅಂಶಗಳು.
Related Articles
Advertisement
ಬೇಡಿಕೆ ಇದ್ದರೂ ಅನುದಾನವಿಲ್ಲ: ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರಿದ್ದಾರೆ. ಇದರಲ್ಲಿ 800 ರೇಷ್ಮೆ ಹುಳು ಮನೆಗೆ ಬೇಡಿಕೆ ಇದೆ. ಆದರೆ, ಅನುದಾನದ ಕೊರತೆ ಇದೆ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ವಿವರಿಸಿದರು.
20×30 ಅಡಿ ಅಳತೆಯ ಹುಳು ಮನೆಗೆ 2 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ 3.70 ಲಕ್ಷ ರೂ. ನೀಡಲಾಗುತ್ತಿದೆ. ರೇಷ್ಮೆ ಸಾಕಣೆದಾರರು ಮರಗಡ್ಡಿ ಪದ್ಧತಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ಒಂದೇ ಬಾರಿಗೆ ಹಿಪ್ಪು ನೇರಳೆ ಬೆಳೆದರೆ ಬೆಳೆಗಳಿಗೆ ರೋಗ ಬಾಧೆ ಇರುವುದಿಲ್ಲ. ಇಲ್ಲದಿದ್ದರೆ ರೋಗ ಹರಡುವುದರ ಜೊತೆಗೆ ರೋಗ ನಿವಾರಣೆಗೆ ಕ್ರಮ ವಹಿಸುವುದಕ್ಕೂ ಆಗುವುದಿಲ್ಲ ಎಂದು ಹೇಳಿದರು.
ಈಗಾಗಲೇ ತರಕಾರಿ ಬೆಳೆ ಆಶ್ರಯಿಸಿದ್ದ ಊರಮಾರ ಕಸಲಗೆರೆಯ ಹಲವು ರೈತರು ದಿಢೀರನೆ ರೇಷ್ಮೆ ಬೆಳೆಯಲು ಮುಂದಾಗಿದ್ದರ ಪರಿಣಾಮ ಭೂಮಿಯೊಳಗಿನ ರಾಸಾಯನಿಕ ಎಲೆಗಳ ಮೂಲಕ ಹರಡಿ ಹುಳುಗಳು ಅದನ್ನು ತಿಂದು ಸಾವನ್ನಪ್ಪಿ ರೈತರಿಗೆ ನಷ್ಟವಾಗಿದೆ. ಹಸಿರೆಲೆಗೊಬ್ಬರ, ಸಾವಯವ ಗೊಬ್ಬರದ ನಡುವೆ ಹಿಪ್ಪುನೇರಳೆ ಬೆಳೆಯುವುದು ಸೂಕ್ತ ಎಂದು ರೈತರಿಗೆ ತಿಳಿವಳಿಕೆ ಮೂಡಿಸಲಾಗುವುದು ಎಂದು ಹೇಳಿದರು.
ತೆಂಗಿನ ಸಸಿ ಕೊಳ್ಳುವವರಿಲ್ಲ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ ಮಾತನಾಡಿ, ರೈತರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಈಗಾಗಲೇ 100 ರೈತರಿಗೆ ಒಬ್ಬರಿಗೆ 16 ಗಿಡದಂತೆ 1600 ಗಿಡಗಳನ್ನು ನೀಡಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯ ರೈತರು ತೆಂಗಿನ ಸಸಿಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ನೀರಿನ ಕೊರತೆ ಕಾರಣದಿಂದ ನಿರ್ವಹಣೆ ಕಷ್ಟವಾಗಲಿದೆ ಎಂಬ ಮನೋಭಾವ ಅವರಲ್ಲಿದೆ ಎಂದು ಹೇಳಿದರು.
ತೆಂಗು ಪುನಶ್ಚೇತನ ಕಾರ್ಯಕ್ರಮದಡಿ 15 ವರ್ಷ ಹಳೆಯದಾದ ಫಲ ಕೊಡದ ತೆಂಗಿನ ಮರಗಳನ್ನು ತೆಗೆದು ಆ ಜಾಗದಲ್ಲಿ ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ಅವಕಾಶವಿದೆ. ನರೇಗಾ ಯೋಜನೆಯಡಿ ಇದನ್ನು ತೆಗೆದುಕೊಳ್ಳಬಹುದು. ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದು, 1 ಎಕರೆಗೆ 20 ಸಾವಿರ ರೂ.ನಷ್ಟು ಸಹಾಯಧನವೂ ಸಿಗುತ್ತಿದೆ. ಆದರೆ, ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಈ ಕಾರ್ಯಕ್ಕೆ ಅಡ್ಡಿಯಾಗಬಹುದೆಂಬ ಆತಂಕವಿದೆ ಎಂದು ಹೇಳಿದರು.
ಸಭೆಯಲ್ಲಿ ತಾಪಂ ಇಒ ಎಂ.ಗಂಗಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ, ಯೋಜನಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ (ನರೇಗಾ) ಆರ್.ಮಹದೇವ ಮತ್ತಿತರರು ಭಾಗವಹಿಸಿದ್ದರು.
ಅಲ್ಪಾವಧಿ ಬೆಳೆ ಬೆಳೆಯಲು ರೈತರಿಗೆ ಜಾಗೃತಿ: ಪ್ರತಿಭಾ
ಕೃಷಿ ಇಲಾಖೆ ಅಧಿಕಾರಿ ಪ್ರತಿಭಾ ಮಾತನಾಡಿ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಮಳೆ ಎಲ್ಲೆಡೆ ಸಮರ್ಪಕ ಹಂಚಿಕೆಯಾಗಿಲ್ಲ. ಇದರಿಂದ ಎಲ್ಲೆಡೆ ಬಿತ್ತನೆ ಕುಂಠಿತಗೊಂಡಿದೆ. ರಾಗಿ ಬಿತ್ತನೆಗೂ ಹಿನ್ನಡೆಯಾಗಿದ್ದು, ನಾಲೆಗಳಿಗೆ ನೀರು ಹರಿಸದಿರುವುದರಿಂದ ಭತ್ತದ ಬಿತ್ತನೆ ಬೀಜಗಳನ್ನು ವಿತರಿಸಿಲ್ಲ. ಅದಕ್ಕಾಗಿ ಅಲ್ಪಾವಧಿ ಬೆಳೆಗಳನ್ನು ಬೆಳೆಯುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈವರೆಗೆ 16 ಕ್ವಿಂಟಾಲ್ ಬಿತ್ತನೆ ರಾಗಿ ವಿತರಿಸಲಾಗಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನಿದ್ದು, ಮಳೆಯಾಗದಿರುವುದರಿಂದ ಬಿತ್ತನೆಗೆ ಕುಂಠಿತಗೊಂಡಿದೆ. ಈ ಸಾಲಿನ ಕೃಷಿ ಯೋಜನೆಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲ ಎಂದು ತಿಳಿಸಿದರು.