Advertisement

ಮಳೆ ಅವಾಂತರ; ಕೃತಕ ನೆರೆಗೆ ಜನರು ಕಂಗಾಲು 

10:35 AM May 30, 2018 | Team Udayavani |

ಮಹಾನಗರ : ಕಡಲ ನಗರಿ ಮಂಗಳೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಗಳವಾರ ಕುಂಭದ್ರೋಣ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು, ಸಂಕಷ್ಟ ಎದುರಿಸುವಂತಾಯಿತು. ಬೆಳಗ್ಗಿನಿಂದ ಸಂಜೆವರೆಗೆ ನಗರಾದ್ಯಂತ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಎಲ್ಲ ಭಾಗದಲ್ಲೂ ಮನೆ, ಅಂಗಡಿ- ಮುಂಗಟ್ಟು, ಹೊಟೇಲ್‌ಗ‌ಳಿಗೆ ನುಗ್ಗಿದ ಮಳೆ ನೀರು ಮಂಗಳೂರಿನ ಸಮಗ್ರ ಚಿತ್ರಣವನ್ನೇ ಬದಲಿಸಿ ನಗರವಾಸಿಗಳು ಆತಂಕಕ್ಕೆ ಒಳಗಾಗುವ ಸನ್ನಿವೇಶ ನಿರ್ಮಾಣವಾಗಿತ್ತು.

Advertisement

ವಾಹನಗಳು ಓಡಾಡಬೇಕಾದ ರಸ್ತೆಗಳೆಲ್ಲ ತೋಡುಗಳಾಗಿ ಎಲ್ಲೆಡೆಯೂ ಮಳೆ ನೀರೇ ಹರಿದು ನಗರದಲ್ಲಿ ಊಹೆಗೂ ನಿಲುಕದಷ್ಟು ಅವಾಂತರ ಸೃಷ್ಟಿಸಿಯಾಗಿದೆ.

ನಗರದಲ್ಲಿ ಎಲ್ಲಿ ಏನು ಆಗಿದೆ ಎಂಬ ಬಗ್ಗೆ ನಗರವಾಸಿಗಳು ಯೋಚನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಕಾಲ ಬುಡಕ್ಕೆ, ಮನೆಯ ಅಂಗಳಕ್ಕೆ ನುಗ್ಗುತ್ತಿದ್ದ ನೀರನ್ನು ಹೇಗೆ ಖಾಲಿ ಮಾಡುವುದು ಎಂದೇ ಯೋಚಿಸಿ ಕಂಗಾಲಾಗಿ ಹೋಗಿದ್ದರು. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ನಗರ ಮಂಗಳವಾರ ವಸ್ತುಶಃ ವರುಣನ ಅವಕೃಪೆಗೆ ತುತ್ತಾಗಿ ಇಡೀ ನಗರ ಜನ ಜೀವನ ಶೋಚನೀಯ ಸ್ಥಿತಿ ತಲುಪಿತ್ತು.

ತೋಡುಗಳು ತೆರೆದಿಟ್ಟ ನೈಜ ದರ್ಶನ
ನಗರದಲ್ಲಿ ಚರಂಡಿಯದ್ದೇ ದೊಡ್ಡ ಸಮಸ್ಯೆ. ಇದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಚರ್ಚೆ, ಗಲಾಟೆ, ಪ್ರತಿಭಟನೆ ನಡೆದರೂ ಕೂಡ ಚರಂಡಿ ಸಮಸ್ಯೆ ಇತ್ಯರ್ಥವಾಗಲೇ ಇಲ್ಲ. ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣದಿಂದ ತೋಡಿನ ನೀರು ರೋಡ್‌ನ‌ಲ್ಲಿಯೇ ಹರಿಯುವಂತಹ ಪರಿಸ್ಥಿತಿ ಇದೆ. ಇದರ ನೈಜ ದರ್ಶನ ಹಾಗೂ ಅನುಭವವನ್ನು ಮಂಗಳವಾರದ ಮಳೆಯು ನಗರವಾಸಿಗಳಿಗೆ ನೀಡಿದೆ. ಬೆಳಗ್ಗಿನಿಂದ ಸುರಿದ ಮಳೆಗೆ ಮಂಗಳೂರಿನ ತೋಡುಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ, ನಗರದ ಬೀದಿ- ಓಣಿಗಳಲ್ಲಿಯೇ ಮಳೆ ನೀರು ಹರಿದು, ಮನೆ- ಅಂಗಡಿಗಳೆಲ್ಲವೂ ಜಲಾವೃತ ವಾದಂತಾಗಿದೆ. ಬಹುತೇಕ ಎಲ್ಲ ಕಡೆಗಳಿಂದ ನಗರವಾಸಿಗಳು ಮನೆಗೆ ನೀರು ನುಗ್ಗುತ್ತಿದೆ ಹಾಗೂ ಅದಕ್ಕೆ ಮುಖ್ಯ ಕಾರಣ ಮಳೆ ನೀರು ಹರಿಯಬೇಕಾದ ತೋಡುಗಳು ಸ್ವಚ್ಛಗೊಳ್ಳದೆ ಬ್ಲಾಕ್‌ ಆಗಿರುವುದು ಎಂಬ ಕಾರಣ ನೀಡುತ್ತಿದ್ದರು.

ಎಲ್ಲೆಲ್ಲೂ ಢವ-ಢವ !
ನಿರಂತರ ವರ್ಷಧಾರೆಯ ಪರಿಣಾಮ ಮನೆ- ಅಂಗಡಿಗಳಿಗೆ ನೀರು ನುಗ್ಗಿ ನಗರದ ಬಹುತೇಕ ಭಾಗದಲ್ಲಿ ಆತಂಕದ ಪರಿಸ್ಥಿತಿಯೇ ನಿರ್ಮಾಣವಾಯಿತು. ಎಲ್ಲೆಲ್ಲೂ ನೀರೇ ಕಾಣಿಸಿಕೊಂಡ ಕಾರಣದಿಂದ ಆತಂಕವೇ ಮಡುಗಟ್ಟಿತ್ತು. ಬೆಳಗ್ಗೆ ಸುರಿದ ಮಳೆ ಕಡಿಮೆಯಾಗುವ ಬದಲು ಇನ್ನಷ್ಟು ಅಧಿಕಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಘಳಿಗೆ- ಘಳಿಗೆಗೆ ಆತಂಕ ಹೆಚ್ಚುವಂತಾಯಿತು. ಮಧ್ಯಾಹ್ನದ ಅನಂತರವೂ ಮಳೆ ಬಿರುಸುಗೊಂಡ ಕಾರಣದಿಂದ ನಗರದ ಬಹುತೇಕ ಜನರಲ್ಲಿ ಢವ ಢವ ಹೆಚ್ಚಳವಾಗುವಂತಾಯಿತು.

Advertisement

ತಗ್ಗು ಪ್ರದೇಶ ಮುಳುಗಡೆ 
ನಗರ ವ್ಯಾಪ್ತಿಯ ಬಹುತೇಕ ತಗ್ಗು ಪ್ರದೇಶಗಳು ಮಳೆ ನೀರು ತುಂಬಿ ಸಮಸ್ಯೆ ಎದುರಿಸುವಂತಾಯಿತು. ಕುದ್ರೋಳಿ, ಅಳಕೆ, ಬಿಜೈ, ಕೊಟ್ಟಾರ, ಪಾಂಡೇಶ್ವರ ಸಹಿತ ಎಲ್ಲ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸಮಸ್ಯೆ ಸೃಷ್ಟಿಯಾಯಿತು.

ಸಂಚಾರ-ಸಾರಿಗೆ ಸ್ತಬ್ಧ 
ಸದಾ ವಾಹನಗಳಿಂದ ನಿತ್ಯ ಗಿಜಿಗುಡುತ್ತಿದ್ದ ನಗರದಲ್ಲಿ ಭಾರೀ ಮಳೆಯ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳಲ್ಲಿ ನಿಲ್ಲಿಸಿದ್ದ ಕಾರು, ಬೈಕು ಸಹಿತ ಹಲವು ವಾಹನಗಳು ನೀರನಲ್ಲಿ ತೇಲಾಡುವಂತಾಯಿತು. ಕೆಲವರು ವಾಹನ ಬಿಟ್ಟು ನಡೆದುಕೊಂಡು ಹೋದರು. ಮಳೆಯ ಕಾರಣದಿಂದ ನಗರದ ಬಹುತೇಕ ಭಾಗದಲ್ಲಿ ಸಂಚಾರ ದಟ್ಟಣೆ ಕಾಣಿಸಿತು. ಜ್ಯೋತಿ, ಸ್ಟೇಟ್‌ಬ್ಯಾಂಕ್‌, ಪಿವಿಎಸ್‌, ಹಂಪನಕಟ್ಟ ಸೇರಿದಂತೆ ಮುಖ್ಯಭಾಗದಲ್ಲೂ ಬ್ಲಾಕ್‌ ಎದುರಾಯಿತು. ಉಳಿದಂತೆ ಪಡೀಲು, ಕೊಟ್ಟಾರ ಸಹಿ ತ ಕೆಲವೆಡೆಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next