Advertisement

ಮಳೆಯ ನಷ್ಟ: ಸಿಕ್ಕಿದ ಲೆಕ್ಕ 7,500 ಕೋಟಿ ರೂ.

10:53 AM Aug 19, 2018 | Team Udayavani |

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸತತವಾಗಿ ಬೀಳುತ್ತಿರುವ ಮಳೆ ಭಾರೀ ಅನಾಹುತ ತಂದೊಡ್ಡುವುದರ ಜತೆಗೆ ಸಾವಿರಾರು ಕೋ. ರೂ. ನಷ್ಟಕ್ಕೂ ಕಾರಣವಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು 7,500 ಕೋ.ರೂ.ಗಳಿಗೂ ಹೆಚ್ಚು ಮೊತ್ತದ ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಈ ಮೊತ್ತ 12ರಿಂದ 15,000 ಕೋ.ರೂ. ತಲುಪುವ ಆತಂಕ ಕಾಣಿಸಿಕೊಂಡಿದೆ.

Advertisement

ಮಂಗಳೂರು ಹಾಗೂ ಬೆಂಗ ಳೂರು ನಡು ವಿನ ಪ್ರಮಖ  ಮಾರ್ಗಗಳಲ್ಲಿ ಸಂಚಾರ ಸ್ಥಗಿತದಿಂದಾಗಿ ವಾಣಿಜ್ಯ ವ್ಯವಹಾರಗಳಿಗೆ ಸಾಕಷ್ಟು ನಷ್ಟವಾಗಿದೆ. ಅದರಲ್ಲೂ ಮುಖ್ಯವಾಗಿ ರಫ್ತು ಉದ್ಯಮದ ಮೇಲೆ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಪೆಟ್ಟು ಬಿದ್ದಿದೆ. ಇದು ಕೂಡ ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. 

ಕಂದಾಯ ಇಲಾಖೆ ಮತ್ತು ಲೋಕೋ ಪಯೋಗಿ ಇಲಾಖೆ ಮೂಲಗಳ ಪ್ರಕಾರ ಮೇಲ್ನೋಟಕ್ಕೆ 7,500 ಕೋ.ರೂ. ನಷ್ಟ  ಅಂದಾಜು ಮಾಡಲಾಗಿದೆ. ಆದರೆ ಜಿಲ್ಲಾಧಿಕಾರಿಗಳಿಂದ ಇನ್ನಷ್ಟೇ ಸಮಗ್ರ ಮಾಹಿತಿ ಬರಬೇಕಾಗಿದೆ.ಈ ಬಾರಿ ಮಳೆಗೆ ಮೂಲ ಸೌಕರ್ಯದ ಜತೆಗೆ ವಾಣಿಜ್ಯ ಬೆಳೆಗಳು ಹಾನಿಗೊಳಗಾಗಿದ್ದು,ಇದರ ಮೌಲ್ಯ ಅಂದಾಜಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ.ಹೀಗಾಗಿ ನಷ್ಟದ ಪ್ರಮಾಣ 15,000ಕೋ.ರೂ.ದಾಟಿದರೂ ಅಚ್ಚರಿ ಇಲ್ಲ.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಹಾಗೂ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಬಹುತೇಕ ಪ್ರದೇಶಗಳು ಮಳೆಹಾನಿಗೊಳಗಾಗಿವೆ. ಇದಲ್ಲದೆ ನದಿಗಳು ಉಕ್ಕಿ ಹರಿದಿರುವುದರಿಂದ ಮೈಸೂರು, ಮಂಡ್ಯ ಸಹಿತ ಕೆಲವು ಜಿಲ್ಲೆಗಳಲ್ಲೂ  ಸಾಕಷ್ಟು ನಷ್ಟ ಸಂಭವಿಸಿವೆ. ಆದರೆ ನೀರು ಗದ್ದೆ ಮತ್ತು ರಸ್ತೆಗಳಲ್ಲಿ ಇನ್ನೂ ನಿಂತಿರುವುದರಿಂದ ಹಾನಿ ಪ್ರಮಾಣ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

1,500 ಮನೆಗಳಿಗೆ ಹಾನಿ
ಮಳೆಯಿಂದಾಗಿ ಏಳು ಜಿಲ್ಲೆಗಳಲ್ಲಿ ಒಂದೂವರೆ ಸಾವಿರದಷ್ಟು ಮನೆಗಳು ಹಾನಿಯಾಗಿದ್ದು, ನೂರಾರು ಮನೆಗಳು ಸಂಪೂರ್ಣ ಕುಸಿದಿವೆ. ಈ ಪೈಕಿ ಕೊಡಗು, ದ. ಕ. ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಕೊಡಗು ಜಿಲ್ಲೆಯಲ್ಲಿ 850ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಇದರ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.ಅದೇ ರೀತಿ ದ.ಕ.ದಲ್ಲಿ 252, ಉಡುಪಿಯಲ್ಲಿ 144,ಉ.ಕ.ದಲ್ಲಿ 26,ಶಿವಮೊಗ್ಗದಲ್ಲಿ 46, ಚಿಕ್ಕಮಗಳೂರಿನಲ್ಲಿ 40ಮತ್ತು ಹಾಸನ ಜಿಲ್ಲೆಯಲ್ಲಿ 33 ಮನೆಗಳು ಕುಸಿದಿವೆ ಎಂದು ಕಂದಾಯ ಇಲಾಖೆ ವರದಿ ಹೇಳಿದೆ.ಇದೇ ವೇಳೆ ಭಾರೀ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ಕಾಫಿ ಬೆಳೆ ಹಾನಿಯಾಗಿದೆ.

Advertisement

ರಸ್ತೆ ಹಾನಿ ಬಗ್ಗೆ ಮಾಹಿತಿ ಸಿಗುತ್ತಿಲ್ಲ
ಈ ಮಧ್ಯೆ ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವ ಬಗ್ಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ.ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ,ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಸ್ತೆಗಳಿದ್ದು,ಮಳೆನೀರು ಇನ್ನೂ ರಸ್ತೆಯಲ್ಲೇ ನಿಂತಿರುವುದರಿಂದ ಮತ್ತು ಅನೇಕ ಕಡೆ ಸಂಪರ್ಕ ಕಡಿತಗೊಂಡಿದೆ ಇದಲ್ಲದೆ ಸಾಕಷ್ಟು ಕಡೆ ಸೇತುವೆಗಳು ಮುರಿದು ಬಿದ್ದಿವೆ.ಅನೇಕ ಕಡೆಗಳಲ್ಲಿ ಮಳೆ ನೀರಿನ ರಭಸಕ್ಕೆ ಶಿಥಿಲಗೊಂಡಿವೆ.ಚರಂಡಿಗಳೂ ಹಾಳಾಗಿವೆ. ವಿದ್ಯುತ್‌ ಕಂಬಗಳು,ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ.ಇವುಗಳ ಬಗ್ಗೆಯೂ ಇನ್ನಷ್ಟೇ ಜಿಲ್ಲೆಗಳಿಂದ ಮಾಹಿತಿ ಬರಬೇಕಾಗಿದೆ.

– ಪ್ರದೀಪ್‌ಕುಮಾರ್‌ ಎಂ. 

Advertisement

Udayavani is now on Telegram. Click here to join our channel and stay updated with the latest news.

Next