ಬೆಂಗಳೂರು: ಕಳೆದ ಮೂರ್‍ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮುಂದಿನ ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಮುನ್ಸೂಚನೆ ಇದೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಮೇಲೆ ಆವರಿಸಿರುವ ಬರದ ಛಾಯೆಯನ್ನು ತಾತ್ಕಾಲಿಕವಾಗಿ ತೆರೆಮರೆಗೆ ಸರಿಯುವಂತೆ ಮಾಡಿರಬಹುದು. ಆದರೆ ಒಟ್ಟಾರೆ ಮುಂಗಾರು ಹಂಗಾಮು ರಾಜ್ಯದ ಪಾಲಿಗೆ ಈ ವರೆಗೆ ನಿರಾಶಾದಾಯಕವಾಗಿಯೇ ಇದೆ.
ಜೂನ್ 1ರಿಂದ ಆಗಸ್ಟ್ 20ರ ವರೆಗೆ ರಾಜ್ಯದಲ್ಲಿ 622 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಬಿದ್ದ ಮಳೆ 463 ಮಿ.ಮೀ. ಅಂದರೆ ಶೇ. 26ರಷ್ಟು ಮಳೆ ಕೊರತೆ ಇದೆ. ಅದರಲ್ಲೂ ಜಲಾಶಯಗಳಿಗೆ ನೀರು ಹರಿಸುವ ಮಲೆನಾಡಿನಲ್ಲಿ ಶೇ. 34 ಮಳೆ ಕೊರತೆ ಇರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಕಳೆದ 20 ದಿನಗಳಲ್ಲಿ ಮುಂಗಾರು ಮಾರುತಗಳು ಚುರುಕುಗೊಂಡು ಉತ್ತಮ ಮಳೆ ಯಾಗಿದ್ದರೂ ಅದರ ಹಂಚಿಕೆ ಸೀಮಿತವಾಗಿದೆ. ಬೆಂಗಳೂರು ಸಹಿತ ದಕ್ಷಿಣ ಒಳನಾಡಿನ 11 ಜಿಲ್ಲೆ ಗಳಲ್ಲಿ ಮಾತ್ರ ವಾಡಿಕೆಯ ಶೇ. 73 ಮಳೆಯಾಗಿದ್ದು, ಉಳಿದಂತೆ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಯಲ್ಲಿ ಕ್ರಮವಾಗಿ ಶೇ. 29, ಶೇ. 44 ಹಾಗೂ ಶೇ. 47ರಷ್ಟು ಮಳೆ ಕೊರತೆ ಇದೆ. ಆಗಸ್ಟ್ ಅನಂತರ ಸಾಮಾನ್ಯವಾಗಿ ಮಳೆ ಇಳಿಮುಖವಾಗುತ್ತದೆ.
ಜೂನ್ – ಸೆಪ್ಟಂಬರ್‌ವರೆಗೆ ಮುಂಗಾರು ಇದ್ದರೂ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಅವಧಿ ಜುಲೈ. ಆ ತಿಂಗಳಲ್ಲಿ ವಾಡಿಕೆ ಮಳೆ 280 ಮಿ.ಮೀ. ಆದರೆ ಬಿದ್ದದ್ದು 173 ಮಿ.ಮೀ. (ಶೇ. 38ರಷ್ಟು ಕೊರತೆ). ಈ ಪೈಕಿ ಉತ್ತರ ಮತ್ತು ದಕ್ಷಿಣ ಒಳ ನಾಡಿನಲ್ಲಿ ಕ್ರಮವಾಗಿ ಶೇ. 50 ಮತ್ತು ಶೇ. 52ರಷ್ಟು ಮಳೆ ಅಭಾವ ಇದೆ. ಇದೇ ಅವಧಿಯಲ್ಲಿ ಅತೀ ಹೆಚ್ಚು ಬಿತ್ತನೆ ಆಗುತ್ತದೆ. ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
ಇಂದಿನಿಂದ ರಾಜ್ಯದಲ್ಲಿ ಮೋಡ ಬಿತ್ತನೆ
ಸರಕಾರದ ಬಹು ಚರ್ಚಿತ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಸೋಮವಾರ ಇದಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ.
35 ಕೋ.ರೂ. ವೆಚ್ಚದ ಮೋಡ ಬಿತ್ತನೆಗೆ ಈಗಾಗಲೇ ಬೆಂಗಳೂರು, ಗದಗ ಹಾಗೂ ಸುರಪುರದಲ್ಲಿ ಅತ್ಯಾಧುನಿಕ ರಾಡಾರ್‌ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು 2 ವಿಶೇಷ ವಿಮಾನಗಳ ಮೂಲಕ ಮೋಡ ಬಿತ್ತನೆ ನಡೆಯಲಿದೆ. ಮೊದಲಿಗೆ ಸೋಮವಾರ (ಆ. 21) ಬೆಂಗಳೂರಿನಲ್ಲಿ ಮೋಡ ಬಿತ್ತನೆ ಆರಂಭವಾಗಲಿದ್ದು, ಅನಂತರ ಗದಗ ಮತ್ತು ಸುರಪುರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ.