Advertisement

ಮೋಡ ಬಿತ್ತನೆ ಕಾರ್ಯದಿಂದ ಶೇ.20ರಷ್ಟು ಹೆಚ್ಚಾದ ಮಳೆ

11:21 AM Oct 10, 2017 | |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಮೋಡ ಬಿತ್ತನೆಯ ಜವಾಬ್ದಾರಿ ವಹಿಸಿಕೊಂಡಿದ್ದ ಅಮೆರಿಕದ “ವೆದರ್‌ ಮಾಡಿಫಿಕೇಷನ್‌ ಇಂಟರ್‌ನ್ಯಾಷನಲ್‌’ ಸಂಸ್ಥೆಯ ಅಧ್ಯಕ್ಷ ನೀಲ್ ಬ್ರಾಕಿನ್‌ ಸೋಮವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಅವರನ್ನು ಭೇಟಿ ಮಾಡಿ ಮೋಡ ಬಿತ್ತನೆಯ ಫ‌ಲಿತಾಂಶಗಳ ಬಗ್ಗೆ ವಿವರಣೆ ನೀಡಿದರು.

Advertisement

ಮೋಡ ಬಿತ್ತನೆ ಪ್ರಾರಂಭವಾದಾಗ ರಾಜ್ಯದಲ್ಲಿ ಶೇ.57 ಪ್ರಮಾಣದಷ್ಟು ಮಳೆ ಕೊರತೆ ಇತ್ತು. ಮೋಡ ಬಿತ್ತನೆಯಿಂದ ವಾತಾವರಣ ಮತ್ತು ಹವಾಮಾನ ಬದಲಾವಣೆ ಉಂಟಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಶೇ.10ರಿಂದ 20ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ನೀಲ್‌ ಬ್ರಾಕಿನ್‌ ಸಚಿವರಿಗೆ ಮಾಹಿತಿ ನೀಡಿದರು. ಈ ವೇಳೆ ಕರ್ನಾಟಕ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಹೆಚ್‌.ಪಿ. ಪ್ರಕಾಶ್‌ ಮತ್ತು ಮುಖ್ಯ ಇಂಜಿನಿಯರ್‌ ಪ್ರಕಾಶ್‌ ಕುಮಾರ್‌ ಹಾಜರಿದ್ದರು. 

ಸಚಿವರ ಪ್ರಶಂಸೆ: ಮೋಡ ಬಿತ್ತನೆಯ ಪ್ರಯತ್ನಗಳಿಗೆ ಸಿಕ್ಕಿರುವ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ಮೋಡ ಬಿತ್ತನೆಗೂ ಮೊದಲು 2 ತಾಸು ಮತ್ತು ಮೋಡ ಬಿತ್ತನೆಯ ನಂತರ 2 ತಾಸು ನಿಖರವಾದ ಮಳೆಯ ಪ್ರಮಾಣವನ್ನು ಅಳತೆ ಮಾಡಲಾಗಿದೆ. ರಾಜ್ಯದ ಮೂರು ಕಡೆಗಳಲ್ಲಿ ಸ್ಥಾಪಿಸಲಾಗಿರುವ ರಡಾರ್‌ಗಳ ಮೂಲಕ ಅಂಕಿ ಅಂಶಗಳನ್ನು ಮತ್ತು ಮೋಡಗಳ ಸಾಂದ್ರತೆಯನ್ನು ನಿಖರವಾಗಿ ಪತ್ತೆಹಚ್ಚಿ, ಅವುಗಳ ಮೇಲೆ ಬಿತ್ತನೆ ಮಾಡಿದ್ದರಿಂದ ಮಳೆ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ಮೋಡ ಬಿತ್ತನೆಯ 24 ಗಂಟೆಗಳ ನಂತರವೂ ನೈಸರ್ಗಿಕವಾದ ಯಾವುದೇ ಕಾರಣ ಇಲ್ಲದೇ ಮಳೆ ಆಗಿರುವ ದಾಖಲೆ ಇದೆ. ಇತ್ತಿಚಿನ ದಿನಗಳಲ್ಲಿ ರಾತ್ರಿ ವೇಳೆ ಮಳೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿತ್ತನೆಗೆ ಯೋಗ್ಯವಾಗಿರುವ ಮೋಡಗಳ ಲಭ್ಯತೆ ರಾತ್ರಿಯೂ ಇರುವುದರಿಂದ ರಾತ್ರಿ ಹೊತ್ತು ಮೋಡ ಬಿತ್ತನೆಗೆ ತಾಂತ್ರಿಕ ಪ್ರಯೋಗ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next