Advertisement

ಗೃಹ ಸಚಿವರ ಕ್ಷೇತ್ರದಲ್ಲಿ ಮಳೆ ನೀರಿನ ಮೇಲಾಟ

01:37 PM Mar 26, 2018 | Team Udayavani |

ಬೆಂಗಳೂರು: ಕ್ಷೇತ್ರ ಪುನರ್ವಿಂಗಣೆ ವೇಳೆ ಜಯನಗರ, ಶಾಂತಿನಗರ ಮತ್ತು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರಗಳ ಕೆಲವು ಭಾಗಗಳನ್ನು ಸೇರಿಸಿ ರಚಿಸಲಾದ ಬಿಟಿಎಂ ವಿಧಾನಸಭಾ ಕ್ಷೇತ್ರ ಎಂದರೆ ನೆನಪಾಗುವುದು ವಿಪರೀತ ವಾಹನ ದಟ್ಟಣೆ, ಮಳೆ ಬಂದಾಗ ಮುಳುಗುವ ಕೋರಮಂಗಲದ ಕೆಲ ಭಾಗ.

Advertisement

ಬೆಂಗಳೂರು ನಿರ್ಮಾಣಕ್ಕಾಗಿ ದೇಹತ್ಯಾಗ ಮಾಡಿದ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಸ್ಮಾರಕ ಮತ್ತು ದೇವಸ್ಥಾನ, ಬೆಂಗಳೂರಿಗೆ ಮಾಲ್‌ ಸಂಸ್ಕೃತಿ ಪರಿಚಯಿಸಿದ ಫೋರಂ ಮಾಲ್‌ ಮತ್ತು ರಹೇಜಾ ಆರ್ಕೇಡ್‌, ಪ್ರತಿಷ್ಠಿತ ಕೆಎಂಎಫ್ ಸಂಸ್ಥೆ, ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ, ಮಡಿ ವಾಳ ಮಾರುಕಟ್ಟೆ ಮುಂತಾದ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಪ್ರತಿಷ್ಠಿತರು ಮತ್ತು ಮಧ್ಯಮ ವರ್ಗದವರಿದ್ದಾರೆ. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿನ ಕೊಳೆಗೇರಿಗಳ ಸ್ಥಿತಿ ಸುಧಾರಿ ಸಿದ್ದು, ಬಹುತೇಕರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಆದರೂ ಸಮಸ್ಯೆಗಳಿಗೆ ಕೊರತೆ ಇಲ್ಲ.

ಲಕ್ಕಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ ವಾರ್ಡ್‌ಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಅತಿ ದೊಡ್ಡ ಸಮಸ್ಯೆ ಸಂಚಾರ ವ್ಯವಸ್ಥೆಯದ್ದು. ರಸ್ತೆ ಸಾರಿಗೆ ಹೊರತುಪಡಿಸಿ ಬೇರೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಮೇಲಾಗಿ ಪ್ರತಿಷ್ಠಿತರು ಹೆಚ್ಚಾಗಿರುವುದರಿಂದ ವಾಹನಗಳ ಸಂಖ್ಯೆಯೂ ಹೆಚ್ಚು. ಆಡುಗೋಡಿ, ಕೋರಮಂಗಲ, ಮಡಿವಾಳಗಳಲ್ಲಿ ಉತ್ತಮ ರಸ್ತೆಗಳಿವೆಯಾದರೂ ವಿಪರೀತ ವಾಹನದಟ್ಟ ಣೆಯಿದೆ. ಕಿರಿದಾದ ರಸ್ತೆಗಳು ವಾಹನ
ಸಂಚಾರವನ್ನು ಇನ್ನಷ್ಟು ಜಟಿಲಗೊಳಿಸುತ್ತವೆ.  ಕ್ಷೇತ್ರದಲ್ಲಿ ನೀರಿನ ಪೂರೈಕೆ ಉತ್ತಮವಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಘಟಕಗಳಿದ್ದು, ನಿರ್ವಹಣೆಯೂ ಉತ್ತಮ ವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಇಲ್ಲ. ಬಹುತೇಕ ಉದ್ಯಾನಗಳಲ್ಲಿ ನಡಿಗೆ ಪಥ, ಮಕ್ಕಳಿಗೆ ಆಟದ ಸಲಕರಣೆಗಳು, ಜಿಮ್‌ ಸೌಲಭ್ಯವಿದ್ದು, ಉದ್ಯಾನಗಳ ಉತ್ತಮ ನಿರ್ವಹಣೆ ಕ್ಷೇತ್ರದ ಹೈಲೈಟ್‌. 

ಕೋರಮಂಗಲ ಕೆರೆ ಮುಚ್ಚಿ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ನಿರ್ಮಿಸಿದ ನಂತರ ಮಳೆ ನೀರು ಮನೆಗಳಿಗೆ ನುಗ್ಗುವುದು ಕೋರಮಂಗಲದ ಬಹುದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ನೀರು ಹಾದು ಹೋಗುವ ರಾಜ ಕಾಲುವೆ ಸೇರಿದಂತೆ ಬಹುತೇಕ ಚರಂಡಿಗಳನ್ನು ಸ್ವತ್ಛಗೊಳಿಸಿ ಅವುಗಳಿಗೆ ಮತ್ತೆ ಕಸ ಸುರಿಯದಂತೆ ಸಂರಕ್ಷಿಸಲಾಗುತ್ತಿದೆ. ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಸಚಿವರಾದರೂ ಬೆಂಗಳೂರಿ ನಲ್ಲಿದ್ದಾಗ ಪ್ರತಿ ನಿತ್ಯ ಬೆಳಗ್ಗೆ 8.30ರಿಂದ 10 ಗಂಟೆವರೆಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನೇರವಾಗಿ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶವಿದೆ.

ಕ್ಷೇತ್ರದ ಬೆಸ್ಟ್‌ ಏನು?
ರಸ್ತೆ, ಫ‌ುಟ್‌ಪಾತ್‌, ಪಾರ್ಕ್‌, ಒಳಚರಂಡಿ ಅಭಿವೃದ್ಧಿಯಾಗಿದೆ. ಕೋರಮಂಗಲದ ಸ್ಯಾನಿಟರಿ ಸಮಸ್ಯೆ ಸರಿಪಡಿಸಲಾಗಿದೆ. ರಾಜೇಂದ್ರ ನಗರ, ಬೋವಿ ಕಾಲೋನಿಯಲ್ಲಿ ಕೊಳಗೇರಿ ನಿವಾಸಿಗಳಿಗೆ ಮನೆ ಕಟ್ಟಿಕೊಡಲಾಗಿದೆ. ನಗರದ ಇತರೆ ಭಾಗಗಳಿಗೆ ಹೋಲಿಸಿದರೆ ಕುಡಿಯುವ ನೀರು ಪೂರೈಕೆ ಉತ್ತಮ ಎನ್ನಬಹುದು. ತ್ಯಾಜ್ಯ ವಿಲೇವಾರಿಯಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ತಕ್ಷಣ ಸ್ಪಂದನೆ ಸಿಗುವುದು ಕ್ಷೇತ್ರದ ವಿಶೇಷ. ಬಹುತೇಕ ಎಲ್ಲ ಉದ್ಯಾನಗಳಲ್ಲೂ ಮಕ್ಕಳ ಆಟದ ಸಲಕರಣೆಗಳಿವೆ

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ಮಳೆ ಬಂದಾಗ ಮನೆಗೆ ನುಗ್ಗುವ ನೀರು ಮತ್ತು ಸಂಚಾರದ್ದೇ ಇಲ್ಲಿ ದೊಡ್ಡ ಸಮಸ್ಯೆ. ಕೋರಮಂಗಲ ಕೆರೆ ಮುಚ್ಚಿ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ನಿರ್ಮಾಣವಾದ ಬಳಿಕ ಕೋರಮಂಗಲ, ಎಸ್‌.ಟಿ. ಬೆಡ್‌, ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ಸೇರಿದಂತೆ ಸುತ್ತಲಿನ ಪ್ರದೇಶಗಳು ಜಲಾವೃತ್ತಗೊಳ್ಳುತ್ತಿವೆ. ಡೈರಿ ಸರ್ಕಲ್‌, ಆಡುಗೋಡಿ ಸಿಗ್ನಲ್‌, ಫೋರಂ ಮಾಲ್‌, ಸೇಂಟ್‌ ಜಾನ್ಸ್‌ ಆಸ್ಪತ್ರೆ ಸುತ್ತಮುತ್ತ, ಸೋನಿ ವರ್ಲ್ಡ್, ಸಿಲ್ಕ್ಬೋರ್ಡ್‌ ಜಂಕ್ಷನ್‌ಗಳಲ್ಲಿ ಸಂಚಾರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಲೇ ಇಲ್ಲ.

ಶಾಸಕರು ಏನಂತಾರೆ?
ಕ್ಷೇತ್ರದಲ್ಲಿ ಸಂಚಾರದ್ದೇ ಅತಿ ದೊಡ್ಡ ಸಮಸ್ಯೆ. ಪ್ರಸ್ತುತ ಈಜೀಪುರ- ಹೊಸೂರು ರಸ್ತೆವರೆಗೆ ಫ್ಲೈಓವರ್‌ ನಿರ್ಮಾಣ ಆರಂಭವಾಗಿದೆ. ಮಡಿವಾಳ ಅಂಡರ್‌ ಪಾಸ್‌ ನಿಂದ ಆಡುಗೋಡಿವರೆಗೆ ರಸ್ತೆ ನಿರ್ಮಾಣಕ್ಕೆ 204 ಕೋಟಿ ವೆಚ್ಚ ದಲ್ಲಿ ಟೆಂಡರ್‌ ಕರೆಯಲಾಗಿದ್ದು, ಕಾಮಗಾರಿ ಮುಗಿದರೆ ಸಮಸ್ಯೆ ಬಗೆಹರಿಯುತ್ತದೆ.
ರಾಮಲಿಂಗಾರೆಡ್ಡಿ

ಪೈಪೋಟಿ ಇಲ್ಲ 
ಕಾಂಗ್ರೆಸ್‌ನಿಂದ ಈ ಬಾರಿ ಕೂಡ ರಾಮಲಿಂಗಾರೆಡ್ಡಿ ಅವರೇ ಕಣಕ್ಕಿಳಿಯುವುದು ಖಚಿತ. ಜೆಡಿಎಸ್‌ನಿಂದ ಈಗಾಗಲೇ ಬಿಬಿಎಂಪಿ ಸದಸ್ಯ ದೇವದಾಸ್‌ ಹೆಸರು ಅಂತಿಮಗೊಳಿ ಸಲಾ ಗಿದೆ. ಬಿಜೆಪಿಯಿಂದ ಜಯ ದೇವ, ವಿವೇಕ್‌ ಸುಬ್ಟಾರೆಡ್ಡಿ ಮತ್ತು ಲಲ್ಲೇಶ್‌ ರೆಡ್ಡಿ ಮಧ್ಯೆ ತೀವ್ರ ಪೈಪೋಟಿಯಿದ್ದು, ಇವರ ಬೆಂಬಲಿಗರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಅವರಿಗೆ ಪೈಪೋಟಿಯೇ ಇಲ್ಲ ಎನ್ನುವಂತಾಗಿ¨

ಮೊದಲೆಲ್ಲಾ ಮಳೆ ಬಂದಾಗ ಎಸ್‌.ಟಿ.ಬೆಡ್‌ ಪ್ರದೇಶ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಈಗ ಸಮಸ್ಯೆ ಇಲ್ಲ. ಚರಂಡಿ ದುರಸ್ತಿ ಸೇರಿದಂತೆ ಮಳೆ ನೀರು ಸರಾಗವಾಗಿ ಹರಿದು ಹೋಗು ವಂತೆ ಮಾಡಲು ಕಾಮಗಾರಿ ನಡೆಯುತ್ತಿದೆ.
ನವಾಜ್‌ 

ಶಾಸಕರು ಪ್ರತಿ ದಿನ ಬೆಳಗ್ಗೆ 7.30ರಿಂದ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಈ ವೇಳೆ ಅವರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆ ಹೇಳಿ ಕೊಳ್ಳಲು ಅವಕಾಶವಿದೆ. ಜನ ಸಾಮಾನ್ಯರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ತಿಮ್ಮೇಗೌಡ

ಶ್ರೀನಿವಾಗಿಲು ಬಳಿ ಮಿಲಿಟರಿ ಮತ್ತು ಸ್ಥಳೀಯ ಆಡಳಿತದ ಮಧ್ಯೆ ರಸ್ತೆ ವಿವಾದ ಅನೇಕ ವರ್ಷಗಳಿಂದ ಇದೆ. ರಾಮಲಿಂಗಾರೆಡ್ಡಿ ಅವರು ಗೃಹ ಸಚಿವರಾದ ನಂತರ ಈ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿವೆ.
ಸುರೇಶ್‌ 

ಮಡಿವಾಳದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಅದನ್ನು ಹಂಚಿಕೆ ಮಾಡದ ಕಾರಣ ನಾವಿನ್ನೂ ರಸ್ತೆ ಬದಿಯಲ್ಲೇ ತರಕಾರಿ ವ್ಯಾಪಾರ ಮಾಡಬೇಕಾಗಿದೆ. ನಮಗೆ ಮಂಜೂರಾಗಿರುವ ಅಂಗಡಿ ಹಸ್ತಾಂತರಿಸಿದರೆ ಅಷ್ಟೇ ಸಾಕು.
ಮೀನಾಕ್ಷಿ ಕಾವೇರಪ  

ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next