ಕೊಲ್ಹಾಪುರ/ಪಣಜಿ: ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ, ವಿದ್ಯುತ್ ಇನ್ನಿತರ ಮೂಲಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳಿಂದ 11,165 ಕುಟುಂಬಗಳ 50,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಕೊಲ್ಹಾಪುರದಲ್ಲಿ ಮುಸಲಧಾರೆ: ಮಹಾರಾಷ್ಟ್ರದ ಕೊಲ್ಹಾಪುರವು ಹಿಂದೆಂದೂ ಕಾಣದ ತೀವ್ರವಾದ ಮಳೆಗೆ ತುತ್ತಾಗಿದ್ದು, ಜಿಲ್ಲೆಯ ಹಲವಾರು ಪ್ರದೇಶ ಗಳು ಜಲಾವೃತವಾಗಿವೆ. ಸೇನೆಯ ಸಹಾಯದಿಂದ 10,000 ಜನರನ್ನು ಸ್ಥಳಾಂತರಿಸಲಾಗಿದೆ. 85,000 ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನಿಲುಗಡೆ ಯಾಗಿದೆ. ಹೆಚ್ಚುವರಿ ಸಹಾಯಕ್ಕಾಗಿ ಜಿಲ್ಲಾಡಳಿತ ನೌಕಾಪಡೆಯ ಮೊರೆ ಹೋಗಿದೆ. ದಕ್ಷಿಣ ಕೊಲ್ಹಾಪುರ-ಬೆಳಗಾವಿಯನ್ನು ಸಂಪರ್ಕಿಸುವ ಹೆದ್ದಾರಿ ಮುಳುಗಡೆ ಆಗಿದ್ದು, ಆ ಮೂಲಕ ಸಂಚಾರ ನಿರ್ಬಂಧಿಸಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ, ಪುಣೆ, ಸತಾರಾ, ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕೊಯ್ನಾ, ರಾಧಾನಗರಿ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿನ ಪ್ರವಾಹ ಹೆಚ್ಚಳಕ್ಕೆ ಕಾರಣವಾಗಿದೆ.
ತೊಯ್ದು ತೊಪ್ಪೆಯಾದ ಗೋವಾ: ಗೋವಾ-ಕರ್ನಾಟಕ ಗಡಿ ಪ್ರದೇಶದಲ್ಲಿನ ಹೆದ್ದಾರಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಜಲಾವೃತವಾಗಿದ್ದು, ಆ ಮೂಲಕ ಸಂಚರಿಸುತ್ತಿದ್ದ ಎಂಟು ಪ್ರಯಾಣಿಕರ ಬಸ್ಸುಗಳ ಸಂಚಾರ ಮಾರ್ಗಮಧ್ಯೆಯೇ ಸ್ಥಗಿತಗೊಂಡಿದ್ದವು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪ್ರಯಾಣಿಕರನ್ನು ರಕ್ಷಿಸುವಂತೆ ತ್ವರಿತ ಸೂಚನೆ ನೀಡಿದ ಬೆನ್ನಲ್ಲೇ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಯಿತು.
ಧಾರಾಕಾರ ಮಳೆಯಿಂದಾಗಿ ಜಲಾವೃತಗೊಂಡಿ ರುವ ಬಿಚೋಲಿಮ್ ತಾಲೂಕಿನ ಕೆಲ ಹಳ್ಳಿಗಳಿಂದ ಹಲವಾರು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿ ಸಲಾಗಿದೆ. ಮಳೆಯಿಂದಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿ ಮುಂದುವರಿದರೆ ರಜೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಉತ್ತರ ಗೋವಾದಲ್ಲಿರುವ ಅಂಜುನೆಮ್ ಅಣೆಕಟ್ಟು ಭರ್ತಿಯಾಗಿದ್ದು, ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಹರಿಯುವ ಮಹದಾಯಿ (ಮಾಂಡೋವಿ) ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ,ಸಟ್ಟಾರಿ ಜಿಲ್ಲೆಯ ಸೋನನ್ ಎಂಬ ಹಳ್ಳಿಯು ಜಲಾವೃತವಾಗಿದೆ. ಗೋವಾದಲ್ಲಿ ಬುಧವಾರವೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.