Advertisement

ಮಳೆ ಸಂಬಂಧಿ ಅವಘಡ: ನಾಲ್ವರು ಸಾವು

11:02 PM Jun 01, 2019 | Lakshmi GovindaRaj |

ಕಾಳಗಿ/ಬೆಂಗಳೂರು: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗುಡುಗು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ.

Advertisement

ರಾತ್ರಿ ಮಲಗಿದ್ದಾಗ ಹೈದರಸಾಬ ಭಂಟನಳ್ಳಿ ಎಂಬುವರ ಮನೆಯ ಮೇಲ್ಛಾವಣಿ ಕುಸಿದು ಬಿತ್ತು. ಆಗ ಅಬಿದಾಬಿ ಅಬ್ದುಲ್‌ ನಬಿ ಮುಜಾವರ (60), ಶಫಿಕ್‌ ನಬಿಲಾಲ ಭಂಟನಳ್ಳಿ (10), ಅಲಿಧೀಯಾ ಮಹ್ಮದ ರಫಿಕ್‌ ಮುಸ್ತಫಾ (12) ಎಂಬುವರು ಮೃತಪಟ್ಟಿದ್ದಾರೆ.

ಬಾಲಕಿ ತಸ್ಲಿಂ ಗಿಡ್ಡೆ, ಬಾಲಕ ಮಾಶುಮ್‌ ಭಂಟನಳ್ಳಿ ಹಾಗೂ ಹೈದರಸಾಬ ಭಂಟನಳ್ಳಿ ಎಂಬುವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಾಳಗಿ ಪಿಎಸ್‌ಐ ಅನಿತಾ ಯಾರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಜಾನ್‌ ಹಬ್ಬದ ಪ್ರಯುಕ್ತ ಮಂಗಲಗಿ ಹೈದರ್‌ಸಾಬ ಭಂಟನಳ್ಳಿ ಅವರ ಮನೆಗೆ ಇಫ್ತಿಯಾರ್‌ ಕೂಟದ ಊಟಕ್ಕಾಗಿ ಸಂಬಂಧಿಗಳು ಆಗಮಿಸಿದ್ದರು. ಶುಕ್ರವಾರ ರಾತ್ರಿ 9ಕ್ಕೆ ಊಟ ಮುಗಿಸಿಕೊಂಡು ನಿದ್ರೆಗೆ ಜಾರಿದ್ದರು. ಶನಿವಾರ ಬೆಳಗಿನ ಜಾವ 3.45ರ ಸುಮಾರಿಗೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಡ್ಯದಲ್ಲಿ 6 ಸೆಂ.ಮೀ.ಮಳೆ
ಬೆಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಯಿತು. ಮಂಡ್ಯದಲ್ಲಿ ರಾಜ್ಯದಲ್ಲಿಯೇ ಅಧಿಕ, 6 ಸೆಂ.ಮೀ.ಮಳೆ ಸುರಿಯಿತು.

Advertisement

ಇದೇ ವೇಳೆ, ಉತ್ತರ ಕರ್ನಾಟಕದಲ್ಲಿ ತಾಪಮಾನ ಹೆಚ್ಚಾಗಿತ್ತು. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚೇನೂ ಬದಲಾವಣೆ ಕಂಡು ಬರಲಿಲ್ಲ.

ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next