Advertisement

ಮಳೆ ಅನಾಹುತ, ಮನೆ ಕಳೆದುಕೊಂಡವರಿಗೆ ಸಿಗಲಿ ಪರಿಹಾರ

02:16 AM Oct 14, 2021 | Team Udayavani |

ಕಳೆದೊಂದು ವಾರದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಲೇ ಇದ್ದು, ಅನಾಹುತಗಳೂ ಸಂಭವಿಸುತ್ತಿವೆ. ಮನೆ ಗೋಡೆ ಕುಸಿದು, ವಿದ್ಯುತ್‌ ಪ್ರವಹಿಸಿ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಸುರಿಯುತ್ತಿರುವ ಮಳೆಯಂತೂ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ.

Advertisement

ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಮನೆ, ಕಟ್ಟಡ ಕುಸಿಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಳೆಗಾಲದಲ್ಲೇ 6 ಮನೆಗಳು ಕುಸಿತ ಕಂಡಿವೆ. ಬಿಬಿಎಂಪಿ ಇಷ್ಟೆಲ್ಲ  ಕೆಲಸ ಮಾಡುತ್ತಿರುವ ನಡುವೆಯೂ ಬೆಂಗಳೂರಿನ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ವಾಲಿದ್ದು, ಇದನ್ನು ಬುಧವಾರ ತೆರವು ಮಾಡಲಾಗಿದೆ. ಜತೆಗೆ ಪಕ್ಕದಲ್ಲಿದ್ದ ಮನೆಯನ್ನೂ ಬೀಳಿಸಲಾಗಿದೆ. ಇವುಗಳಲ್ಲಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಆಗದಂಥ ಸ್ಥಿತಿ ಜನರಿಗಾಗಿದೆ. ಅಂದರೆ ಮನೆ ಬಳಕೆ ವಸ್ತುಗಳಾದ ಟಿವಿ, ಫ್ರಿಡ್ಜ್, ವಾಷಿಂಗ್‌ ಮೆಷಿನ್‌, ಬೆಳ್ಳಿ, ಬಂಗಾರ, ಬಟ್ಟೆ ಬರೆ ಇತ್ಯಾದಿ ವಸ್ತುಗಳನ್ನೂ ತೆಗೆದುಕೊಳ್ಳಲಾಗಿಲ್ಲ. ಈ ಮನೆಯ ಮಾಲಕರು ಮತ್ತು ಬಾಡಿಗೆದಾರರು ಮನೆಯ ಜತೆಗೆ ವಸ್ತುಗಳನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಬಿಬಿಎಂಪಿ ಸಮೀಕ್ಷೆ ನಡೆಸಿರುವ ಪ್ರಕಾರ, 175 ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಎಲ್ಲ ಮನೆಗಳ ಮಾಲಕರಿಗೂ ಬಿಬಿಎಂಪಿ ಕಡೆಯಿಂದ ನೋಟಿಸ್‌ ನೀಡಲಾಗಿದೆ. ವಿಶೇಷವೆಂದರೆ, ಬುಧವಾರ ನೆಲಸಮ ಮಾಡಲಾಗಿರುವ ಕಟ್ಟಡವೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಎಂದೇ ಗುರುತಿಸಲಾಗಿತ್ತು.

ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ

ಇದೆಲ್ಲ ಸರಿ, ಶಿಥಿಲಾವಸ್ಥೆಯಲ್ಲಿವೆ ಎಂಬ ಕಾರಣಕ್ಕಾಗಿ ಬಿಬಿಎಂಪಿ ನೋಟಿಸ್‌ ಕೊಟ್ಟು ತೆರವಿಗೆ ಸೂಚನೆ ನೀಡಿದೆ. ಈ ಮನೆಗಳನ್ನು ತೆರವು ಮಾಡಲಾಗುತ್ತದೆ. ಆದರೆ ಇದರಲ್ಲಿ ವಾಸವಿದ್ದವರ ಕಥೆ ಮಾತ್ರ ಶೋಚನೀಯ ಎಂಬಂತೆ ಆಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ಆರು ಮನೆಗಳು ಬಿದ್ದಿದ್ದು, ಇದರಲ್ಲಿದ್ದವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮಾಲಕರ ಜತೆಗೆ ಈ ಮನೆಗಳಲ್ಲಿ ಇದ್ದ ಬಾಡಿಗೆದಾರರೂ ಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅಥವಾ ಬಿಬಿಎಂಪಿ ಮನೆ ಕಳೆದುಕೊಂಡವರಿಗೆ ಕೊಂಚವಾದರೂ ಪರಿಹಾರ ನೀಡುವ ಕೆಲಸ ಮಾಡಬೇಕು. ಬಾಡಿಗೆದಾರರಿಗೂ ಒಂದಷ್ಟು ಪರಿಹಾರ ಸಿಗುವಂತೆ ಆಗಬೇಕು. ಸೂರು ಮತ್ತು ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಕಳೆದುಕೊಂಡವರು, ಹೊಸದಾಗಿಯೇ ಬದುಕು ಶುರು ಮಾಡಬೇಕಾಗುತ್ತದೆ. ಅಂದರೆ ಸಣ್ಣ ಪುಟ್ಟ ವಸ್ತುಗಳಿಂದ ಹಿಡಿದು, ಎಲ್ಲವನ್ನೂ ಖರೀದಿ ಮಾಡಬೇಕಾಗುತ್ತದೆ. ಮೊದಲೇ ಮನೆ ಕಳೆದುಕೊಂಡವರಿಗೆ ಮನೆಗೆ ಬೇಕಾದ ಎಲ್ಲ ವಸ್ತುಗಳು ಮತ್ತು ಮನೆಯನ್ನು ಪುನರ್‌ನಿರ್ಮಾಣ ಮಾಡುವ ಒತ್ತಡ ಎದುರಾಗುತ್ತದೆ. ಇಂಥವರನ್ನು ಮನಸ್ಸಿನಲ್ಲಿ ಇರಿಸಿಕೊಂಡು ಪರಿಹಾರ ನೀಡುವಂತಾದರೆ ಕೊಂಚವಾದರೂ ಸಹಾಯವಾದಂತೆ ಆಗುತ್ತದೆ. ಇದರ ಜತೆಗೆ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ತ್ವರಿತಗತಿಯಲ್ಲಿ ಪತ್ತೆ ಮಾಡಿ, ಪುನರ್ವಸತಿಗೆ ಅವಕಾಶ ಮಾಡಿಕೊಡಬೇಕು.

Advertisement

ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ, ಇಡೀ ರಾಜ್ಯಕ್ಕೇ ಅನ್ವಯಿಸುತ್ತದೆ. ಎಲ್ಲೇ ಆಗಲಿ ಮನೆ ಕಳೆದುಕೊಂಡವರಿಗೆ ಸೂರು ಕಟ್ಟಿಸಿಕೊಡುವ ಕೆಲಸವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next