ಮಂಗಳೂರು/ಉಡುಪಿ: ದ.ಕ., ಉಡುಪಿ ಜಿಲ್ಲೆಯಾದ್ಯಂತ ಶನಿವಾರವೂ ಉತ್ತಮ ಮಳೆ ಬಂದಿದೆ. ಸುಳ್ಯದ ಕೆಲವೆಡೆ ವಿದ್ಯುತ್ ತಂತಿ ನೆಲಕ್ಕುರುಳಿದರೆ, ಮಂಗಳೂರಿನ ಬಲ್ಮಠದಲ್ಲಿ ಕಾಂಪೌಂಡ್ ಕುಸಿದಿದೆ. ಮಂಗಳೂರು, ಉಡುಪಿಯಲ್ಲಿ ಬೆಳಗ್ಗಿನಿಂದಲೇ ಜಿಟಿಜಿಟಿ ಮಳೆ ಬಂದಿದೆ. ನಿರಂತರವಾಗಿ ಸುರಿದ ಮಳೆಗೆ ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಕಾಲೇಜಿನ ಕಾಂಪೌಂಡ್ ಕುಸಿದು ಬಿದ್ದು, ಕೆಲಹೊತ್ತು ಸಂಚಾರಕ್ಕೆ ತೊಡಕಾಯಿತು. ಕಾಂಪೌಂಡ್ ಪಕ್ಕದಲ್ಲೇ ಇದ್ದ ಮರ ಕೂಡ ಬೀಳುವ ಹಂತದಲ್ಲಿದ್ದರಿಂದ ಮರವನ್ನು ಕಡಿದು, ತೆರವುಗೊಳಿಸಲಾಯಿತು. ನಗರದ ವಿವಿಧೆಡೆ ರಸ್ತೆಗಳಲ್ಲಿನ ಹೊಂಡಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಸಮಸ್ಯೆಯಾಯಿತು.
ರಸ್ತೆಗೆ ಬಿದ್ದ ಮರ: ಸುಳ್ಯದಲ್ಲಿ ಗ್ರಾಮಾಂತರ ಭಾಗಗಳಲ್ಲಿ ಬೆಳಗ್ಗಿನಿಂದಲೇ ಮಳೆಯಾದರೆ, ನಗರದಲ್ಲಿ ಮಧ್ಯಾಹ್ನದ ಬಳಿಕ ಬಿರುಸು ಪಡೆದಿದೆ. ಕೆಲವೆಡೆ ಮರ ಬಿದ್ದು ವಿದ್ಯುತ್ ಲೈನ್ ತುಂಡಾಗಿದೆ. ಸೋಣಂಗೇರಿಯಲ್ಲಿ ರಸ್ತೆಗೆ ಮರಬಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಅನಂತರ ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ದೊಡ್ಡೇರಿಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು, ವಿದ್ಯುತ್ ಇಲ್ಲದಾಗಿದೆ.
ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ, ವಿಟ್ಲ, ಮಡಂತ್ಯಾರು, ಪುತ್ತೂರು, ಪುಂಜಾಲಕಟ್ಟೆಯಲ್ಲಿ ವರ್ಷಧಾರೆಯಾಗಿದೆ. ಕಿನ್ನಿಗೋಳಿ, ಕಟೀಲಿನಲ್ಲಿ ಸಾಧಾರಣ ಮಳೆಯಾ ಗಿದೆ. ಬಜಪೆ, ಉಳ್ಳಾಲ, ಮೂಲ್ಕಿ, ಹಳೆಯಂಗಡಿ, ಮುಕ್ಕ ಪರಿಸರದಲ್ಲಿಯೂ ಉತ್ತಮ ಮಳೆಯಾಗಿದೆ.
ರಾ.ಹೆ. ಸಮಸ್ಯೆ: ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಕಾಮಗಾರಿ ಅರ್ಧಂಬರ್ಧ ನಡೆದ ಕಾರಣ ನೀರು ನಿಂತು ಸಮಸ್ಯೆ
ಯಾಗುತ್ತಿದೆ. ಕುಂದಾಪುರ -ಕಾರವಾರದ ನಡುವೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅರೆಬರೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ನೀರು ನಿಂತು ಕೃತಕ ನೆರೆ ನಿರ್ಮಾಣವಾಗಿತ್ತು. ಕೊಡ್ಲಾಡಿ ಗ್ರಾಮದ ಬಾಂಡ್ಯದಲ್ಲಿ ಚಂದ್ರಾವತಿ ಅವರ ಮನೆಯ ಮೇಲೆ ಮರ ಬಿದ್ದು ಸುಮಾರು 30,000 ರೂ. ಹಾನಿ ಉಂಟಾಗಿದೆ.
ಉಡುಪಿ, ಮಣಿಪಾಲ, ಮೂಡುಬೆಳ್ಳೆ, ಕಾರ್ಕಳ, ಬ್ರಹ್ಮಾವರ, ಕೋಟ, ಪಡುಬಿದ್ರಿ, ಶಿರ್ವ, ಕಾಪು ಮೊದಲಾದೆಡೆ ಉತ್ತಮ ಮಳೆಯಾಗಿದೆ. ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಕೊಲ್ಲೂರು, ಬೈಂದೂರು, ನಾವುಂದ, ಮರವಂತೆ, ಗಂಗೊಳ್ಳಿ, ಪಡುಕೋಣೆ, ನಾಡ,ಹೆಮ್ಮಾಡಿ, ಕುಂದಾಪುರ, ಕೋಟೇಶ್ವರ,ಸಿದ್ದಾಪುರ, ಹಳ್ಳಿಹೊಳೆ, ಬೆಳ್ವೆ, ಹೊಸಂಗಡಿ, ತೆಕ್ಕಟ್ಟೆ, ಕುಂಭಾಶಿಯಲ್ಲಿ ನಿರಂತರ ಮಳೆಯಾಗಿದೆ.