ಅಫಜಲಪುರ: ಹಿಂದಿನ ವರ್ಷವೂ ಉತ್ತಮ ಮಳೆಯಾಗಿರಲಿಲ್ಲ, ಅದೇ ರೀತಿ ಈ ವರ್ಷವೂ ಮುಂಗಾರು ಮಳೆ ವಾಡಿಕೆಯಷ್ಟು ಬಂದಿಲ್ಲ. ಹೀಗಾಗಿ ಬೆಳೆಗಳು ಬಾಡುವ ಹಂತ ತಲುಪಿವೆ. ಮಳೆ ಕೊರತೆ ಕಾಡುತ್ತಿರುವುದರಿಂದ ರೈತರಲ್ಲಿ ಚಿಂತೆ ಮನೆ ಮಾಡಿದೆ.
ತಾಲೂಕಿನಾದ್ಯಂತ ವಾರ್ಷಿಕ ಸಾಲಿನಲ್ಲಿ ವಾಡಿಕೆ ಮಳೆ 667.3 ಮಿಮೀ ಮಳೆ ಆಗಬೇಕಿತ್ತು. ಜನವರಿಯಿಂದ ಆಗಸ್ಟ್ 31ರ ವರೆಗೆ ಮುಂಗಾರು ಹಂಗಾಮಿನ ಮಳೆ 391.3 ಮಿಮೀ ಆಗಬೇಕಿತ್ತು. ಆದರೆ ಇಲ್ಲಿಯವರೆಗೆ ಕೇವಲ 257.4 ಮಿಮೀ ಮಳೆಯಾಗಿದೆ. ವಾಡಿಕೆಯಲ್ಲಿ ಇನ್ನೂ 84.6 ಮಿಮೀ ಮಳೆ ಕೊರತೆಯಾಗಿದೆ. ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ರೈತರಲ್ಲಿ ಆತಂಕ ಹೆಚ್ಚಿದೆ.ಕಳೆದ ವರ್ಷವೂ ಮಳೆ ಬಾರದೆ ಬೆಳೆ ಬಾಡಿದ್ದವು. ಕುಡಿಯಲು ನೀರು ಸಿಕ್ಕಿರಲಿಲ್ಲ. ದನ-ಕರುಗಳಿಗೆ ಮೇವು ಸಿಕ್ಕಿರಲಿಲ್ಲ. ರೈತರು ತಮ್ಮ ದನ-ಕರುಗಳನ್ನು ದುಗ್ಗಾಣಿ ಕಾಸಿಗೆ ಮಾರಿ ತಾವು ಹೇಗೋ ಹೊಟ್ಟೆ ತುಂಬಿಸಿಕೊಂಡಿದ್ದರು. ಈ ಬಾರಿಯೂ ಅದೇ ರೀತಿ ವಾತಾವರಣ ಸೃಷ್ಟಿಯಾಗಿದೆ.
ಕಳೆ ತೆಗೆಯಲು ದುಬಾರಿ ಕೂಲಿ: ಮಳೆ ಬಾರದಿದ್ದರೂ ಸಾಲ ಪಡೆದು ರೈತರು ಬಿತ್ತನೆ ಮಾಡಿದ್ದಾರೆ. ಬೆಳೆಗಿಂತ ಕಳೆಯೇ ಹೆಚ್ಚು ಬೆಳೆದಿದೆ. ಇದರಿಂದ ಕಳೆ ತೆಗೆಸುವುದು ಸವಾಲಿನ ಕೆಲಸವಾಗಿದೆ. ದಿನಕ್ಕೆ ಗಂಡಾಳಿಗೆ 300 ರೂ., ಹೆಣ್ಣಾಳಿಗೆ 150 ರೂ. ಕೂಲಿ ನೀಡಬೇಕು. ಬಿತ್ತನೆ ಸಮಯದಲ್ಲಿ ಸಾಲ ಮಾಡಿ ಕೈ ಸುಟ್ಟುಕೊಂಡಿರುವ ರೈತರಿಗೆ ಕಳೆ ತೆಗೆಸುವ ಕೆಲಸ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೀರಿಲ್ಲದ್ದಕ್ಕೆ ಸ್ಪಿಂಕ್ಲರ್ ಬಳಕೆ: ಅಂತರ್ಜಲ ಮಟ್ಟ ಕುಸಿತವಾಗಿದ್ದು, ಲಭ್ಯ ನೀರನ್ನು ಬಳಸಿಕೊಂಡು ಬೆಳೆ ಉಳಿಸುವ ಸಲುವಾಗಿ ರೈತರು ಹನಿ ನೀರಾವರಿ, ಸ್ಪಿಂಕ್ಲರ್ ಬಳಕೆ ಮಾಡಿ, ಬೆಳೆಗಳಿಗೆ ನೀರು ಉಣಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಭೀಮಾ ನದಿ ದಡದಲ್ಲಿ ಪ್ರವಾಹದಿಂದ ಬೆಳೆಗೆ ಹಾನಿಯಾದರೆ, ಹೆಚ್ಚಿನ ಭಾಗದಲ್ಲಿ ಮಳೆ ಬಾರದೇ ಬೆಳೆ ಬಾಡುತ್ತಿವೆ. ಕುಡಿಯುಲು ನೀರು ಸಿಗುತ್ತಿಲ್ಲ. ಇದರಿಂದ ಮುಂದಿನ ಬೇಸಿಗೆ ನೆನೆದು ಭಯ ಹುಟ್ಟಿದೆ. ಇನ್ನುಳಿದ ಮಳೆಗಳು ಬಂದು ಕೆರೆ, ಕುಂಟೆಗಳಲ್ಲಿ ನೀರು ನಿಂತು ಅಂತರ್ಜಲ ಮಟ್ಟ ಹೆಚ್ಚಳವಾಗಬೇಕು. ಬಿತ್ತಿದ ಬೆಳೆ ಫಸಲು ಬಂದು ರೈತರ ಸಾಲ ತೀರಬೇಕು. ಹೀಗಾದರೆ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎನ್ನುತ್ತಾರೆ ರೈತರು.
•ಮಲ್ಲಿಕಾರ್ಜುನ ಹಿರೇಮಠ