ಗಜೇಂದ್ರಗಡ: ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀ ಕಾಲಕಾಲೇಶ್ವರನ ಸನ್ನಿಧಾನದಲ್ಲಿ ಯುಗಾದಿ ಪಾಡ್ಯದಂದು ನಡೆಯುವ ಮಳೆ-ಬೆಳೆಯ ಭವಿಷ್ಯವಾಣಿ ಕೇಳಲು ಭಕ್ತರು ಕಾತರರಾಗಿದ್ದಾರೆ.
ನವ ಸಂವತ್ಸರಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸಮೀಪದ ಶ್ರೀ ಕಾಲಕಾಲೇಶ್ವರ ಸನ್ನಿಧಾನದಲ್ಲಿ ಸುಣ್ಣ-ಸುರುಮಗಳ ಲೀಲೆ, ಮಳೆ ಮುನ್ಸೂಚನೆಯಂತಹ ಹಲವು ವಿಸ್ಮಯ, ವೈಶಿಷ್ಟ್ಯತೆಗಳನ್ನು ಕಾಣಲು ಅಪಾರ ಭಕ್ತ ಸಮೂಹ ಕಾತರರಾಗಿದ್ದಾರೆ. ಶ್ರೀ ಕಾಲಭೈರವನ ಸನ್ನಿಧಾನದಲ್ಲಿ ನಡೆಯುವ ಚಮತ್ಕಾರ ಎಂತಹವರನ್ನೂ ಬೆರಗುಗೊಳಿಸುತ್ತದೆ. ಹಾಗಾಗಿ, ವಿಸ್ಮಯಕಾರಿ ಘಟನೆ ವೀಕ್ಷಿಸಲು ಜನ ಸನ್ನದ್ಧರಾಗಿದ್ದಾರೆ.
ದೇವಸ್ಥಾನದ ಆವರಣದಲ್ಲಿನ ಪೊಟರೆಯೊಂದರಲ್ಲಿ ಯುಗಾದಿಯಂದು ಮಳೆಯ ಕುರುಹು ಲಭಿಸಲಿದೆ. ಪ್ರತಿ ವರ್ಷ ಚಂದ್ರಮಾನ ಯುಗಾದಿಯ ದಿನ ಸೂರ್ಯೋದಯದ ನಂತರ ದೇವಸ್ಥಾನದ ಅಂತರಗಂಗೆಯ ಸನಿಹ ವರ್ತೂಲಾಕಾರದಲ್ಲಿರುವ ಒಂದು ಪುಟ್ಟ ಸ್ಥಳದಲ್ಲಿ ತಂತಾನೆ ನೀರು ಹರಿದು ಬರುತ್ತದೆ. ಅದರ ಆಧಾರದ ಮೇಲೆ ಆ ವರ್ಷದ ಮಳೆಯ ಪ್ರಮಾಣ ಅಂದಾಜಿಸಲಾಗುತ್ತದೆ. ಇನ್ನೂ ಆ ಪುಟ್ಟ ಸ್ಥಳದಿಂದ ನೀರು ಹರಿದು ಬಂದರೆ ಉತ್ತಮ ಮಳೆಗಾಲ. ಇಲ್ಲದಿದ್ದಲ್ಲಿ ಬರಗಾಲ ಎಂಬ ನಂಬಿಕೆ ರೈತ ಸಮೂಹದ್ದಾಗಿದೆ. ಅಂದು ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೇವಸ್ಥಾನಕ್ಕೆ ತೆರಳಿ ವಿಸ್ಮಯದ ದರ್ಶನ ಪಡೆಯುವುದು ಸಂಪ್ರದಾಯ.
ದೇಗುಲದ ಅಂತರಗಂಗೆಯ ಮೇಲ್ಭಾಗದ ಅತ್ಯಂತ ರೋಮಾಂಚನಕಾರಿ ಹಾಗೂ ಯಾರೂ ಹತ್ತಲಾಗದಂತಹ ಸ್ಥಳದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸುಣ್ಣ-ಸುರುಮ ತಂತಾನೆ ಹಚ್ಚಿಕೊಳ್ಳತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಹೀಗಾಗಿ, ಯುಗಾದಿ ದಿನದ ಸಂಜೆ ದೇವಸ್ಥಾನದ ಒಂದೆಡೆ ಸುಣ್ಣ ಸುರುಮ ಇಟ್ಟು ಬರುತ್ತಾರೆ. ಬೆಳಗಾಗುವಷ್ಟರಲ್ಲಿ ಗುಡ್ಡದ ಪಡಿಯಲ್ಲಿ ಸುಣ್ಣ ಸುರುಮದ ಕುರುಹು ಕಾಣಿಸುತ್ತದೆ. ಸುಣ್ಣ ಸುರುಮ ಕಾಣಿಸುವ ಆಧಾರದ ಮೇಲೆ ವರ್ಷದ ಮಳೆ-ಬೆಳೆಯ ಅಂದಾಜನ್ನು ರೈತರು ಮಾಡುತ್ತಾರೆ.
ಸುಣ್ಣ ಬಹಳ ಲೇಪನವಾಗಿದ್ದರೆ ಎರೆ ಭೂಮಿಯಲ್ಲಿ ಉತ್ತಮ ಬೆಳೆ ಮತ್ತು ಸುರುಮ ಹೆಚ್ಚು ಹತ್ತಿದ್ದರೆ ಮಸಾರಿ ಭೂಮಿಯಲ್ಲಿ ಹೆಚ್ಚು ಬೆಳೆ ಬರುತ್ತದೆ ಎನ್ನುವುದು ಭಕ್ತರು ಹೇಳುವ ಮಾತು. ಹೀಗಾಗಿ, ಯುಗಾದಿ ಪಾಡ್ಯದಂದು ಶ್ರೀ ಕಳಕಮಲ್ಲನ ಕ್ಷೇತ್ರದಲ್ಲಿ ಮಳೆ-ಬೆಳೆಯ ಭವಿಷ್ಯ ಕೇಳಲು ಭಕ್ತಗಣ ಸನ್ನಿಧಾನಕ್ಕೆ ತೆರಳುತ್ತಾರೆ.