Advertisement
ಉಪವನಗಳಲ್ಲಿ ಮತ್ತು ರಸ್ತೆಯ ಪಕ್ಕಗಳಲ್ಲಿ ಹಳದಿಯ ಹೊದ್ದಲಿನಂತಹ ಕುಸುಮ ದಳಗಳು ಚೆಲ್ಲಿರುವುದನ್ನು ಗಮನಿಸಿರಬಹುದು ನೀವು. ಇದು ಪೀತಾಂಬರ ಹೂವು, ಹಳದಿ-ಪೀಲಾ ಗುಲ್ಮೊಹರು. ದಕ್ಷಿಣ ಕರ್ನಾಟಕದೆಡೆ ಬೆಟ್ಟದ ಹುಳಿ ಎಂದರೆ, ಸಂಕೇಶ್ವರ ಹೂವಿನ ಅನುಸರಣೆಯಲ್ಲಿ ಹಳದಿ ಸಂಕೇಶ್ವರವೆಂದೂ ಉತ್ತರ ಕರ್ನಾಟಕದೆಡೆ ಗುರುತಿಸುವರು. ತನ್ನ ಕಾಯಿಯ ಕಡು ಕೆಂಪು ತಾಮ್ರ ವರ್ಣ-ವಿಶೇಷತೆಗೆ ಕಾರ್ಪಪಾಡ್ ಮರವೆಂದೂ ಕರೆದಿದ್ದಾರೆ. ಹೂವು ಬಿರಿದರೆ ಚೆಲುವು ಬೀರುವ, ಕಾಯಿ ಕಟ್ಟಿದರೆ ಕೊಸರಿ ನಿಲ್ಲುವ ಮರಕ್ಕೆ ಮಳೆ ಸೇಚನವಾದರೆ ಅರಳಿನಂತೆ ಹೂ ಉದುರಿಸುವುದೇ ಕೆಲಸ. ಕಂದು ಬಣ್ಣದ ಕಡ್ಡಿಗೆ ದಟ್ಟವಾದ ಹೂವುಗಳು ಹೂಗೊಂಚಲಿನ ವಿಶೇಷತೆ.
Related Articles
Advertisement
ಬಿಸಿಲೇರಿದಂತೆ ಮುದುಡಿ, ದಳಗಳು ಒಡೆದು ಅಂದಗೆಡುತ್ತವಾದರೂ ಅದು ಪಸರಿಸುವ ಕಂಪು ಅಗಾಧ. ಪುರಾಣದ ಪ್ರಕಾರ ಸಮುದ್ರದಿಂದ ಉದಿಸಿದ ಪಾರಿಜಾತ ಮಳೆಗಾಲದಲ್ಲಿ ಪರಿಸರವನ್ನು ಸುಮನೋಹರಗೊಳಿಸುತ್ತವೆ. ಹಳದಿ ಪೀತಾಂಬರಿ, ಬಿಳಿ ದಳಗಳ ಕೆಂಪು ತೊಟ್ಟಿನ ಪಾರಿಜಾತದ ಜತೆಗೆ ನಿರೀಕ್ಷಿಸಬಹುದಾದ ಇನ್ನೊಂದು ಹೂವು ನೀರುಕಾಯಿ ಹೂವು ಅಥವಾ ಆಫ್ರಿಕನ್ ಟ್ಯೂಲಿಪ್.
ಆಫ್ರಿಕನ್ ಟ್ಯೂಲಿಪ್ ನೆರಳ ಅರಸಿ ನೆಡುವ ಮರಗಳ ಪೈಕಿಯದು. ಕೇಸರಿ ಕಡುಕೆಂಪು ಗೊಂಚಲ ಹೂವುಗಳು ಮರದಲ್ಲಿದ್ದರೆ ಇರುವ ಸೊಗಸು ನೆಲಕ್ಕೆ ಬಿದ್ದರೂ ಅಷ್ಟೇ ತೂಕದವು. ಅಡಿಕೆಯ ಗಾತ್ರದ ದುಂಡನೆಯ ತುತ್ತೂರಿಯ ರೀತಿಯ ಹೂವುಗಳ ಒಳಗಿಂದ ಇಣುಕುವ ಶಲಾಕಾಗ್ರಗಳು ದಳದೊಂದಿಗೆ ಮಿಳಿತವಾಗಿ ಗಿಳಿಯ ಕೊಕ್ಕಿನಂತಿರುವ ತೊಟ್ಟಿಗೆ ಅಂಟಿಕೊಂಡಿರುತ್ತವೆ. ಹೂ ಉದುರಿದರೆ, ಕಪ್ಪನೆಯ ಹೆದ್ದಾರಿಗೆ ರಂಗೋಲಿಯಿಟ್ಟಂತೆ ಭಾಸವಾಗುವ ಸುಮಪಾತಳಿಗಳು. ವಿದೇಶದಿಂದ ಭಾರತವನ್ನು ತಲುಪಿದ ಈ ಮರ ಮತ್ತು ಅದರ ಹೂವುಗಳು ಪ್ರತೀ ಓಣಿಯ ಹಂದರವನ್ನು ಚಂದಗಾಣಿಸುತ್ತವೆ. ಕಾಲಿಟ್ಟರೆ ಜಾರುವ ಲೋಳೆಯನ್ನು ಉತ್ಪತ್ತಿಮಾಡುವ ಹೂಗೊಂಚಲುಗಳನ್ನು ಆಗಾಗ್ಗೆ ಸರಿಸುವ ಆವಶ್ಯಕತೆಯೂ ಇದೆ.
ಮಳೆಗಾಲದ ಚಂಚಲತೆಯನ್ನು ಕೋಲ್ಮಿಂಚಿನ ಕೋರೈಸುವ ಬೆಳಕಿನಿಂದ ಅಳೆಯುವ ಸಮಯದಲ್ಲಿ ಸುಕೋಮಲ ಹೂವುಗಳು ಸದ್ದಿಲ್ಲದೇ ಉದುರುವವು. ಮಳೆಯ ಹರಿವಿಗೆ ತೇಲುತ್ತಾ ಸಾಲುಗೂಡುವವು. ಹರಿವಿನ ವೇಗಕ್ಕೆ ಸಿಕ್ಕಿ, ಹರಡಿ, ನೆಲದಮೇಲೆಲ್ಲಾ ಹೂಗಳ ಸಾಲುಗೆರೆಗಳನ್ನು ನೋಡಲು ಕಣ್ಣಿಗೆ ಸೊಗಸು. ಗುರುತ್ವದ ಕಾರಣಕ್ಕಾದರೂ ಆಗಲಿ ಇಳೆಯನ್ನು ಅಲಂಕರಿಸಲು ತಾಮುಂದೆ ಎಂದು ಸುಮವೃಷ್ಟಿ ಹೊರಟಿದೆ. ಅವುಗಳ ಅಂದದೊಂದಿಗೆ ಆಘ್ರಾಣಿಸೋಣ, ಈ ಮಳೆಗಾಲವೆಂಬ ಮೋಡಿಯ ಕಾಲ ಮುಗಿಯುವ ಮೊದಲು!
-ವಿಶ್ವನಾಥ ಭಟ್
ಧಾರವಾಡ