Advertisement

ಮಳೆಬಿಲ್ಲು : ಕರಗದೆ ಉಳಿದ ಬಣ್ಣ

11:04 PM Dec 26, 2020 | mahesh |

ಇದು ಹೊಸ ಅಂಕಣ. ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ಆ್ಯಪ್‌. ನಮ್ಮ ಫೇಸ್‌ಬುಕ್‌ ವಾಲ್‌ಗ‌ಳಲ್ಲಿ ಹರಿದಾಡುತ್ತವೆ. ಕೆಲವು ನಮ್ಮ ಸ್ನೇಹಿತರು ನೋಡಿ ಕಳುಹಿಸಿದ್ದು, ಇನ್ನು ಹಲವು ನೋಡದೇ ಫಾರ್ವರ್ಡ್‌ ಮಾಡಿದ್ದು. ಅಂಥವುಗಳನ್ನು ಹೆಕ್ಕಿ ಕೊಡುವ ಪ್ರಯತ್ನ ಇದು. ನೀವೂ ನಿಮಗೆ ಖುಷಿಕೊಟ್ಟ ಮೆಸೇಜ್‌ಗಳ ಕುರಿತು ನಮ್ಮೊಂದಿಗೆ ಹಂಚಿಕೊಳ್ಳಿ. 76187 74529 (ಈ ಸಂಖ್ಯೆ ವಾಟ್ಸ್‌ಆ್ಯಪ್‌ ಗೆ ಮಾತ್ರ) ಈ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.

Advertisement

ಕನಸನ್ನು ಸಾಕಾರಗೊಳಿಸೋಣ
ಬದುಕಿನ ಏರಿಳಿತದ ಅಲೆಗಳಲ್ಲಿ, ಈಜಿ ದಡ ಸೇರುವುದಕ್ಕಿಂತ, ಕೈಕಾಲು ಸೋತು ಅಲೆಯೇ ತಂದು ದಡಕ್ಕೆ ಬಿಸಾಡುವ ಸಂಭವನೀಯತೆಯೇ ಹೆಚ್ಚು. ಇಂದಿನ ಯಶಸ್ಸು ಎಂದೋ ಕೈಚೆಲ್ಲಿ ಕುಳಿತದರ ಪರಿಣಾಮವೇ! ಪ್ರಕೃತಿಯೂ ಕಲಿಸುತ್ತದೆ, ಕಲಿಯುವುದಕ್ಕೆ ನಾವು ಸಿದ್ಧರಾಗಿರಬೇಕು. ಬದುಕಿನುದ್ದಕ್ಕೂ ತನ್ನದೇ ಆದ ಪ್ರಕಾಶದಿಂದ ಬೆಳಗುತ್ತಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಚೈತನ್ಯದ ಚಿಲುಮೆಗಳು. ನಾಳಿನ ಕನಸುಗಳನ್ನು ನಮ್ಮದೇ ರೆಕ್ಕೆಯಲ್ಲಿ ಕಟ್ಟಿಕೊಂಡು ಎಷ್ಟು ಎತ್ತರಕ್ಕೆ ಸಾಧ್ಯವೋ ಅಷ್ಟು ಎತ್ತರಕ್ಕೆ ಹಾರಬೇಕು. ನಮ್ಮ ಕನಸನ್ನು ಸಾಕಾರಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಿ ಸಾಧಿಸಬೇಕು. ಮನವೇ ಮಂದಿರ. ಆ ಮನಸ್ಸಿನಲ್ಲಿ ಎಂದೂ ಆರದ ಉತ್ಸಾಹಭರಿತ ಕನಸಿನ ಜ್ಯೋತಿಯನ್ನು ನಾವೇ ಬೆಳಗಿಕೊಳ್ಳಬೇಕು. ಫೇಸ್‌ಬುಕ್‌ ವಾಲ್‌ನಲ್ಲಿ ಕಂಡ ಈ ಸಂದೇಶ ಎಂಥವರನ್ನು ಸಾಧನೆಯ ತುಡಿತದತ್ತ ಸೆಳೆಯುವುದರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
 - ಅನು, ಮಲ್ಪೆ

ಪ್ರಾಮಾಣಿಕತೆಗೆ ಸಹಕಾರ ಇದ್ದೇ ಇರುತ್ತದೆ
ನಮ್ಮಿಂದ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ. ಮನಸ್ಸು ಹಿಂಜರಿಯುತ್ತದೆ ಅಷ್ಟೆ. ಧೈರ್ಯದಿಂದ ಮುನ್ನಡೆದು ಗೆದ್ದರೆ, ಇನ್ನೊಬ್ಬರಿಗೆ ಯಶಸ್ಸಿನ ಪಾಠ ಹೇಳಬಹುದು, ಸೋತರೆ ನಾವೇ ಪಾಠ ಕಲಿಯಬಹುದು. ಸಮಯ, ಅಧಿಕಾರ, ಹಣ ಹಾಗೂ ಶರೀರ ನಮಗೆ ಜೀವನದ ಎಲ್ಲ ಸಮಯಗಳಲ್ಲೂ ಸಹಕರಿಸುವುದಿಲ್ಲ. ಆದರೆ ಪ್ರಾಮಾಣಿಕತೆ, ಒಳ್ಳೆಯ ನಡತೆ, ಒಳ್ಳೆಯ ತಿಳಿವಳಿಕೆ, ಒಳ್ಳೆಯ ಮನಸ್ಸುಗಳು ನಮಗೆ ಯಾವಾಗಲೂ ಸಹಕರಿಸುತ್ತವೆ. ನಿರಂತರ ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ತಕ್ಕ ಪ್ರತಿಫ‌ಲ ಸಿಗುತ್ತದೆ ಎಂಬ ಒಳಾರ್ಥವನ್ನು ಹೇಳುವ ಈ ಸಂದೇಶ ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತವರಿಗೆ ಮತ್ತು ಸೋಲುಂಡವರಿಗೆ ಸಾಧಿಸುವ ಛಲ ಹಾಗೂ ಉತ್ಸಾಹ ತುಂಬುತ್ತದೆ.
– ದರ್ಶನ್‌, ಮಂಗಳೂರು

ಬೇರೆಯವರನ್ನು ದೂರಿದರೆ ಪ್ರಯೋಜನವಿಲ್ಲ
ನೀವೆಷ್ಟೇ ಬಲಶಾಲಿ ಆಗಿರಬಹುದು, ವಿರೋಧಿಗಳು ಮೊದಲು ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸಿ, ಅವರ ಎಣಿಕೆಗೆ ತಕ್ಕಂತೆ ನಿಮ್ಮನ್ನು ಬಗ್ಗಿಸಿ, ನಿಮ್ಮಬದುಕನ್ನು ಅವರೇ ನಿರ್ಧರಿಸಿ ಬಿಡುತ್ತಾರೆ. “ನೀನು ಇಷ್ಟಕ್ಕೇ ಲಾಯಕ್ಕು, ಮತ್ತೆ ನಿನ್ನಿಂದೇನೂ ಪ್ರಯೋಜನವಿಲ್ಲ’ ಎನ್ನುವ ಮೊದಲ ಕಡಿವಾಣದೊಂದಿಗೆ ಬಂಧನ ಪ್ರಾರಂಭ. ಅದನ್ನು ತಾರ್ಕಿಕವಾಗಿ ಯೋಚಿಸದೇ ನಂಬಿಕೊಂಡರೆ ನಾವು ನಮ್ಮನ್ನು, ನಮ್ಮತನವನ್ನು ಕಳೆದುಕೊಂಡಂತೆ. “ಆಗಲ್ಲ ಸರಿ, ಇನ್ನೇನಾಗುತ್ತೆ ನನ್ನಿಂದ’ ಎನ್ನುವ ನಿರಾಶವಾದ ಎಂದಿಗೂ ಸರಿ ಅಲ್ಲ. ಭರವಸೆಯನ್ನು ಯಾವತ್ತೂ ಕಳೆದುಕೊಳ್ಳಬಾರದು. ದಾರಿ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು. ಕೆಲವರು ಬಿಟ್ಟಿ ಮನೋರಂಜನೆಗೆ ಎಂದು ಮೊದಲು ಮನಸ್ಸಿಗೆ, ಬಳಿಕ ದೇಹಕ್ಕೆ ಬಿಡಿಸಿಕೊಳ್ಳಲಾಗದ ಸರಪಳಿಯನ್ನು ಕಟ್ಟಿಕೊಳ್ಳುತ್ತಾರೆ. ಬದುಕು ನಮ್ಮದಾದ ಮೇಲೆ, ಅದರ ಬವಣೆಗಳ ಹೊಣೆಯೂ ನಮ್ಮದೇ! ಅದಕ್ಕೂ ಬೇರೆಯವರನ್ನು ದೂರಿದರೆ…… ನಮ್ಮ ಅಸ್ತಿತ್ವವನ್ನು ನಾವೇ ಸಂಶಯಿಸಿದಂತೆ!
– ಸಂಪತ್‌, ಕಾಪು

ಸಂಬಂಧಗಳಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ
ಇವತ್ತು ಶರೀರದಲ್ಲಿ ಉಸಿರು ಇದೆ, ಆದರೆ ಜನರಲ್ಲಿ ಪರಸ್ಪರ ಮುಖ ನೋಡಲೂ ಸಮಯವಿಲ್ಲ. ಆದರೆ ಶರೀರದಿಂದ ಉಸಿರು ಹೋದ ಅನಂತರ ಉಸಿರಿರದ ದೇಹಕ್ಕೆ ಹೊದಿಸಲಾದ ಬಟ್ಟೆಯನ್ನು ಸರಿಸಿ ಮುಖ ನೋಡಲು ಮುಗಿ ಬೀಳುವ ಜನರೇ ಅಧಿಕ. ನೆನಪಿಡಿ ಉಸಿರು ಹೋದ ಅನಂತರ ಮುಖ ನೋಡುವುದಕ್ಕಿಂತ ಜೀವಂತವಿರುವಾಗ ಪರಸ್ಪರ ಮುಖ ನೋಡಿ ಒಂದಿಷ್ಟು ಮಾತನಾಡಿ, ನಗುವುದೇ ಉತ್ತಮ. ವಾಟ್ಸ್‌ಆ್ಯಪ್‌ ಮೂಲಕ ಬಂದ ಈ ಸಂದೇಶ ಆಸ್ತಿ, ಅಂತಸ್ತು, ಐಶ್ವರ್ಯ ಎಂಬ ಕ್ಷಣಿಕ ಸುಖಕ್ಕೆ ಮಾರು ಹೋಗಿ ಕಷ್ಟದಲ್ಲಿ ಸಂಬಂಧಗಳನ್ನು ಗಾಳಿಗೆ ತೂರುವವರಿಗೆ ನೀತಿ ಪಾಠವಾಗಿದ್ದು, ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ಮೂರು ದಿನಗಳ ಬಾಳಲ್ಲಿ ನೂರೆಂಟು ಸಮಸ್ಯೆಗಳನ್ನು ಸೃಷ್ಟಿಸಿಕೊಂಡು, ಅಹಂನಿಂದ ತಮ್ಮವರನ್ನು ಕಳೆದುಕೊಳ್ಳುವವರಿಗೆ ಈ ಸಂದೇಶ ಸಂಬಂಧಗಳ ಮಹತ್ವನ್ನು ಸಾರಿ ಹೇಳುತ್ತದೆ.
– ರೇಖಾ, ಪುತ್ತೂರು

Advertisement

ನಿರ್ಮಲ ಮನಸ್ಸು ಸಜ್ಜನಿಕೆಯ ಕನ್ನಡಿ
ಇರುವೆಗಳು ಗೋಡೆಯ ಮೇಲೆ ಒಡಾಡುವಾಗ ಎಷ್ಟೇ ಅವಸರವಿದ್ದರೂ ಪರಸ್ಪರ ಒಂದೊನ್ನೊಂದು ಭೇಟಿಯಾಗಿ ಮುಂದೆ ಹೋಗುವಂತೆ, ನಮ್ಮ ದೈನಂದಿನ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ ಬಂದಾಗ, ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಮುಂದೆ ಸಾಗಿದಾಗ ನಮ್ಮ ದಿನನಿತ್ಯದ ಕೆಲಸ ಸುಗಮವಾಗಿ ಸಾಗುತ್ತದೆ. ವಾಟ್ಸ್‌ಆ್ಯಪ್‌ ಮೂಲಕ ಬಂದ ಈ ಸಂದೇಶ ಸಜ್ಜನಿಕೆಯ ಗುಣವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.
-ಪ್ರದ್ವೀತ್‌, ಧರ್ಮಸ್ಥಳ

ತಾಳಿದವನು ಬಾಳಿಯಾನು
ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ, ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತರುತ್ತದೆ. ನಂಬಿಕೆ, ತಾಳ್ಮೆ, ಸಹನೆ ನಿಮ್ಮಲ್ಲಿ ಇದ್ದರೆ, ಅದರ ಫ‌ಲ ಮುಂದೊಂದು ದಿನ ನಿಮ್ಮ ಬದುಕಿನಲ್ಲಿ ಸಿಹಿಯನ್ನು ತರುತ್ತದೆ. ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಮತ್ತಷ್ಟು ದುಃಖವನ್ನು ಹೊತ್ತು ತರುತ್ತದೆ. ವಾಟ್ಸ್‌ಆ್ಯಪ್‌ ಮೂಲಕ ಬಂದ ಈ ಸಂದೇಶ ತಾಳಿಯಾನು ಬಾಳಿಯಾನು ಎಂಬ ಸಾರವನ್ನು ಹೇಳುತ್ತಿದ್ದು, ನಮ್ಮ ಬಾಳಲ್ಲಿ ತಾಳ್ಮೆ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ.
– ಸುನೀಲ್‌, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next