Advertisement

ತೊಟ್ಟಿಮನೆಯ ಬಾವಿ ಈಗ ಬತ್ತುವುದಿಲ್ಲ; ಮಳೆಕೊಯ್ಲಿನಿಂದ ಪರಿಹಾರ

09:16 PM Aug 19, 2019 | Sriram |

ಉಡುಪಿ: ಇದು ಆಧುನಿಕ ರೀತಿಯ ತಾರಸಿ ಮನೆಯೂ ಹೌದು, ಸಾಂಪ್ರದಾಯಿಕವಾದ ತೊಟ್ಟಿ ಮನೆಯೂ ಹೌದು. ಕಾಂಕ್ರೀಟ್‌ ಮನೆಯ ಮೇಲಂತಸ್ತಿನಲ್ಲಿ ಸಿಮೆಂಟನ್ನು ಬಳಕೆ ಮಾಡದೆ ತೊಟ್ಟಿ ಮನೆ ನಿರ್ಮಿಸಲಾಗಿದೆ. ಇಡೀ ಮನೆಯ ನೀರು ಬಾವಿ ಮತ್ತು ಇಂಗುಗುಂಡಿ ಸೇರುತ್ತಿದೆ.

Advertisement

ಪರಿಣಾಮವಾಗಿ ಈ ಮನೆಯ ಬಾವಿಯಲ್ಲಿ ಈಗ ಕಡುಬೇಸಗೆಯಲ್ಲಿಯೂ ನೀರಿಗೆ ಕೊರತೆ ಇಲ್ಲ.ವೈದ್ಯರಾಗಿರುವ ಉಡುಪಿ ಕುಕ್ಕಿಕಟ್ಟೆಯ ಡಾ| ರಾಘವೇಂದ್ರ ಉಡುಪ ಅವರ ಮನೆ ಬಾವಿಯಲ್ಲಿ ಎಪ್ರಿಲ್‌ ಮುಗಿಯು ವಾಗಲೇ ನೀರು ಬತ್ತಿ ಹೋಗುತ್ತಿತ್ತು. ಜಲತಜ್ಞ ಶ್ರೀಪಡ್ರೆಯವರಿಂದ ಪ್ರೇರಿತ ಗೊಂಡ ರಾಘವೇಂದ್ರ ಅವರು ನಾಲ್ಕು ವರ್ಷಗಳ ಹಿಂದೆ ತಮ್ಮ ಮನೆಯಂಗಳದ ಎಲ್ಲ ನೀರನ್ನು ಬಾವಿ ಪಕ್ಕದಲ್ಲಿ ನಿರ್ಮಿಸಿದ ಇಂಗುಗುಂಡಿಗೆ ಬಿಡಲು ಆರಂಭಿಸಿದರು.

ಪರಿಣಾಮವಾಗಿ ಕಳೆದ 2 ವರ್ಷ ಗಳಿಂದ ಮಳೆ ಬರುವ ವರೆಗೂ ಬಾವಿಯಲ್ಲಿ ಯಥೇಚ್ಚ ನೀರು ದೊರೆಯಿತು. ಕಳೆದ ವರ್ಷ ಮೇಲಂತಸ್ತಿನಲ್ಲಿರುವ ತೊಟ್ಟಿಮನೆಯ ನೀರನ್ನು ನೇರವಾಗಿ ಬಾವಿಗೆ ಬಿಡುವ ಯೋಜನೆ ಕಾರ್ಯಗತಗೊಳಿಸಿದರು. ಮೊದಲ ಮಳೆಯ ನೀರನ್ನು ಹೊರಗೆ ಬಿಟ್ಟು ಅನಂತರದ ಮಳೆಯ ನೀರನ್ನು ನೇರವಾಗಿ ಬಾವಿಗೆ ಬಿಡುತ್ತಾರೆ. ಶುದ್ಧೀಕರಣಕ್ಕಾಗಗಿ ಜಾಲಿ ಅಳವಡಿಸಿದ್ದಾರೆ. ಅತ್ತ ಮನೆಯಂಗಳ ಪರಿಸರಕ್ಕೆ ಬಿದ್ದ ನೀರು ಇಂಗು ಗುಂಡಿಗೆ ಹೋಗುತ್ತಿದೆ. ಈ ಬಾರಿ ಇಷ್ಟು ಮಳೆಯಾದರೂ ಇಂಗುಗುಂಡಿ ತುಂಬಿಲ್ಲ. ಅದು ಭೂಮಿಯ ಒಡಲಾಳಕ್ಕೆ ನೀರು ಇಳಿಸುತ್ತಲೇ ಇದೆ.

ಸುವ್ಯವಸ್ಥಿತ ಇಂಗುಗುಂಡಿ
ಒಟ್ಟು ಸುಮಾರು 150 ಅಡಿ ಉದ್ದದ ಪೈಪ್‌ಗ್ಳನ್ನು ಬಳಸಲಾಗಿದೆ. 70,000 ರೂ.ಗಳಷ್ಟು ಖರ್ಚು ಮಾಡಿದ್ದಾರೆ. ಇಂಗುಗುಂಡಿಗೆ ಸಿಮೆಂಟ್‌ ರಿಂಗ್‌ ಹಾಕಿ ವ್ಯವಸ್ಥಿತವಾಗಿ ಮಾಡಿದ್ದಾರೆ. ಇಂಗು ಗುಂಡಿ 6 ಅಡಿ ಆಳ, 3 ಅಡಿ ವ್ಯಾಸವಿದೆ. ಗುಂಡಿಯ ಮೇಲ್ಭಾಗವನ್ನು ಮುಚ್ಚಿ ಸಣ್ಣ ಜಾಲಿ ಸಹಿತವಾದ ತೂತನ್ನು ಮಾತ್ರ ಇಟ್ಟು ಅದರ ಮೂಲಕ ನೀರು ಗುಂಡಿಯೊಳಗೆ ಹರಿಯಲು ಅವಕಾಶ ಮಾಡಲಾಗಿದೆ. ಪಕ್ಕದಲ್ಲಿರುವ ಬಾವಿ ಸುಮಾರು 60 ಅಡಿ ಆಳವಿದೆ. ಹಳೆಯ ಕಾಲದ ತೊಟ್ಟಿಮನೆ ಬೇಕೆಂಬ ಇಚ್ಛೆ ಡಾ| ರಾಘವೇಂದ್ರ ಮತ್ತು ದೀಪಾ ದಂಪತಿಯದ್ದಾಗಿತ್ತು, ಮಾತ್ರವಲ್ಲದೆ ಮಳೆನೀರು ಕೊಯ್ಲು ಕೂಡ ಮಾಡಬೇಕೆಂಬ ಬಯಕೆ ಅವರಲ್ಲಿತ್ತು. ಇಷ್ಟಪಟ್ಟಂಥ ಮನೆ ಮತ್ತು ಮಳೆಕೊಯ್ಲು ಎರಡೂ ಸಾಕಾರಗೊಂಡಿದೆ.

“ಈ ಹಿಂದಿನ ವರ್ಷಗಳಲ್ಲಿ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದೆವು. ಕಳೆದ ವರ್ಷ ನಮ್ಮ ಮನೆಯಲ್ಲಿ ಬೇಸಗೆಯಲ್ಲಿ ಹತ್ತಾರು ಮಂದಿ ನೆಂಟರು ಬಂದು ಹೋಗುತ್ತಿದ್ದರು. ಆದರೂ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ಇದಕ್ಕೆ ಮಳೆಕೊಯ್ಲು ಕಾರಣವಾಯ್ತು’ ಎನ್ನುತ್ತಾರೆ ದೀಪಾ.

Advertisement

ಯಥೇತ್ಛ ಶುದ್ಧನೀರು
ಮಳೆ ಕೊಯ್ಲು 2 ವರ್ಷಗಳಿಂದ ಫ‌ಲಿತಾಂಶ ನೀಡುತ್ತಿದೆ. ಟ್ಯಾಂಕರ್‌ ನೀರಿಗೆ ಖರ್ಚು ಮಾಡುವ ಅಗತ್ಯವಿಲ್ಲ. ಶುದ್ಧ ನೀರು ಮನೆಯಲ್ಲೇ ಯಥೇತ್ಛವಾಗಿ ದೊರೆಯುತ್ತಿದೆ. ಈ ಕುರಿತು ಹಲವು ಮಂದಿ ಗೆಳೆಯರಿಗೆ ತಿಳಿಸಿದ್ದೇನೆ. ಕೆಲವರು ಆಸಕ್ತಿಯಿಂದ ಅವರ ಮನೆಯಲ್ಲಿಯೂ ಅಳವಡಿಸಿಕೊಂಡಿದ್ದಾರೆ. ನೀರಿನ ಕೊರತೆ ನೀಗಿಸಲು ಮಳೆಕೊಯ್ಲು ಪರಿಹಾರ ಎಂಬುದು ಮನದಟ್ಟಾಗಿದೆ.
-ಡಾ| ರಾಘವೇಂದ್ರ ಉಡುಪ,

ನೀವೂ ಅಳವಡಿಸಿ, ವಾಟ್ಸಪ್‌ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

Advertisement

Udayavani is now on Telegram. Click here to join our channel and stay updated with the latest news.

Next