ಬಸ್ರೂರು: ಬಸ್ರೂರು ಬಸ್ ನಿಲ್ದಾಣದ ಸಮೀಪದ ಗುಂಡಿಗೋಳಿ- ಮೇರ್ಡಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಚರಂಡಿ ನೀರು ಹರಿದು ಹೋಗುತ್ತಿದ್ದು ಸಾರ್ವಜನಿಕರು ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಇದೆ.
ಈ ರಸ್ತೆಯ ಆರಂಭದಲ್ಲಿ 100 ಮೀ. ನಷ್ಟು ಉದ್ದಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಇದರಿಂದ ಜೋರಾಗಿ ಮಳೆ ಬಂದರೆ ರಾಜ್ಯ ಹೆದ್ದಾರಿಗೂ ಗುಂಡಿಗೋಳಿ ರಸ್ತೆಗೂ ಸಂಪರ್ಕವೇ ಕಡಿದು ಹೋಗುತ್ತದೆ.
ಸ್ಥಳೀಯಾಡಳಿತ ಇಲ್ಲಿ ಚರಂಡಿಯನ್ನು ಸರಿಪಡಿಸಿ ಮಳೆ ಜೋರಾಗಿ ಬಂದಾಗ ನೀರು ಹರಿದು ಹೋಗುವಂತೆ ಮಾಡಿ ರಾಜ್ಯ ಹೆದ್ದಾರಿಗೂ ಗುಂಡಿಗೋಳಿ ರಸ್ತೆಗೂ ಮಧ್ಯೆಯಿರುವ ಆಳವಾದ ಜಾಗವನ್ನು ಸಮತಟ್ಟು ಮಾಡಬೇಕಾಗಿದೆ.
ರಸ್ತೆಯೆಲ್ಲ ಕೆಸರುಮಯ
ಆರಂಭದಲ್ಲಿ ಸ್ವಲ್ಪ ದೂರ ಮಾತ್ರ ಕಾಂಕ್ರೀಟ್ ಹಾಕಲಾಗಿದ್ದು, ಉಳಿದೆಡೆಯಲ್ಲಿ ರಸ್ತೆಗೆ ಹಾಕಲಾಗಿರುವ ಜಲ್ಲಿಕಲ್ಲು ಗಳೂ ಅಸಮರ್ಪಕ ಕಾಮಗಾರಿಯ ಫಲವಾಗಿ ಎದ್ದು ಬಂದಿವೆೆ. ಇದರಿಂದಾಗಿ ರಸ್ತೆಯೆಲ್ಲ ಕೆಸರುಮಯವಾಗಿ ಸಂಚಾರ ದುಸ್ತರವಾಗಿದೆ.
ಈ ಅವ್ಯವಸ್ಥೆಯ ವಿರುದ್ಧ ಜನರು ಈ ಹಿಂದೆ ಪ್ರತಿಭಟನೆಯನ್ನೂ ಮಾಡಿದ್ದರು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೆಯೇ ಕಾದು ನೋಡಬೇಕಿದೆ.