Advertisement

ಬಹುತೇಕ ಶಾಲಾ-ಕಾಲೇಜುಗಳಲ್ಲಿ ವ್ಯರ್ಥವಾಗುತ್ತಿದೆ ಮಳೆ ನೀರು !

01:10 AM Jun 12, 2019 | mahesh |

ಮಹಾನಗರ: ನಗರದಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎಷ್ಟೊಂದು ಗಂಭೀರ ಸ್ವರೂಪ ಪಡೆದಿತ್ತು ಅಂದರೆ, ಕೆಲವೆಡೆ ಶಾಲಾ-ಕಾಲೇಜು ಪುನರಾರಂಭಗೊಳ್ಳುವುದನ್ನೇ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಸ್ತವ ಅಂದರೆ, ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೂ ಬಹುತೇಕ ಕಡೆಗಳಲ್ಲಿ ಜಲ ಸಂರಕ್ಷಣೆ ಅಥವಾ ನೀರಿನ ಉಳಿತಾಯಕ್ಕೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ.

Advertisement

ದೊಡ್ಡ ಮಟ್ಟದ ಕ್ಯಾಂಪಸ್‌ಗಳನ್ನು ಹೊಂದಿರುವ ಶಾಲೆ ಅಥವಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಮಳೆಕೊಯ್ಲು ಅಳವಡಿಸಿಕೊಂಡಿದ್ದರೆ ಬೇಸಗೆ ಕಾಲದಲ್ಲಿ ಉದ್ಭವಿಸುವ ನೀರಿನ ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ. ಜತೆಗೆ, ಬೇಸಗೆಯಲ್ಲಿ ಬತ್ತಿ ಹೋಗುವ ಬೋರ್‌ವೆಲ್‌ ಅಥವಾ ಬಾವಿಗಳನ್ನು ಜಲ ಮರುಪೂರಣ ಮಾಡಿಕೊಂಡರೆ ಇಡೀ ಕ್ಯಾಂಪಸ್‌ನ ಉಪಯೋಗಕ್ಕೆ ಬೇಕಾಗುವಷ್ಟು ನೀರು ಲಭಿಸುವುದರಲ್ಲಿ ಅನುಮಾನವೇ ಇಲ್ಲ.

ಶಾಲಾ-ಕಾಲೇಜುಗಳಲ್ಲಿಯೂ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸುವುದಕ್ಕೆ ಹೆಚ್ಚಿನ ಆಸಕ್ತಿ-ಬದ್ಧತೆ ತೋರಿಸಬೇಕು ಎನ್ನುವುದು ಸುದಿನ ಕಾಳಜಿ. ನಗರದಲ್ಲಿರುವ ಕೆಲವಷ್ಟೇ ಶಾಲಾ-ಕಾಲೇಜುಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಮಳೆಕೊಯ್ಲು ಮಾಡಿರುವ ಶಾಲಾ-ಕಾಲೇಜುಗಳಲ್ಲಿ ನೀರಿನ ಸಮಸ್ಯೆ ಈವರೆಗೆ ಎದುರಾಗಿಲ್ಲ. ಬಹುತೇಕ ಶಾಲಾ ಕಾಲೇಜುಗಳು ಬೋರ್‌ವೆಲ್‌, ಬಾವಿಗಳನ್ನು ಅವಲಂಬಿಸಿದ್ದು, ಬೇಸಗೆ ವೇಳೆ ಅವುಗಳಲ್ಲಿ ನೀರು ಆವಿಯಾಗಿ ರೇಷನಿಂಗ್‌ ನಿಯಮದಂತೆ ಬರುವ ಪಾಲಿಕೆ ನೀರಿಗಾಗಿ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷವೂ ನೀರಿನ ಸಮಸ್ಯೆಯನ್ನು ಎದುರಿಸುವ ಹಲವು ವಿದ್ಯಾಸಂಸ್ಥೆಗಳಿವೆ. ಆದರೆ ಈ ಸಮಸ್ಯೆಗೆ ಪರ್ಯಾಯ, ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ವಿದ್ಯಾಸಂಸ್ಥೆಗಳು ಯೋಜನೆ ರೂಪಿಸುತ್ತಿಲ್ಲ.

ಪಾಠಕ್ಕೆ ಸೀಮಿತವಾದ ಮಳೆಕೊಯ್ಲು

ನೀರಿನ ಮಿತ ಬಳಕೆ, ಸಂರಕ್ಷಣೆ, ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಪಾಠ ಮಾಡಲಾಗುತ್ತದೆ. ಶೋಚನೀಯ ಸಂಗತಿ ಅಂದರೆ, ಪರಿಸರ, ಗಿಡ-ಮರ, ಜಲ ರಕ್ಷಣೆ ಬಗ್ಗೆ ಪಾಠಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಮಳೆಕೊಯ್ಲು, ಇಂಗು ಗುಂಡಿ ಪ್ರಾಯೋ ಗಿಕವಾಗಿ ಶಾಲೆಗಳಲ್ಲಿ ಅಳವಡಿಸಿ ಕೊಂಡು ಮಕ್ಕಳಲ್ಲಿ ಆ ಬಗ್ಗೆ ಹೆಚ್ಚು ಜ್ಞಾನವನ್ನು ತುಂಬುವುದಕ್ಕೆ ಅವಕಾಶವಿದೆ. ಅದ ರೊಂದಿಗೆ ವಿದ್ಯಾಸಂಸ್ಥೆಗಳಲ್ಲಿ ಮಳೆ ಕೊಯ್ಲು ಅಳವಡಿಸಿದರೆ, ಅಲ್ಲಿನ ನೀರಿನ ಸಮ ಸ್ಯೆಗೂ ಪರಿಹಾರ ಲಭಿಸಲಿದೆ. ಆದರೆ ಬಹುತೇಕ ವಿದ್ಯಾಸಂಸ್ಥೆಗಳು ಈ ಬಗ್ಗೆ ಚಿಂತಿಸುತ್ತಿಲ್ಲ.

Advertisement

ಮಾದರಿ ವಿದ್ಯಾಸಂಸ್ಥೆಗಳು
ಮಳೆಕೊಯ್ಲು ಅಳವಡಿಸಿರುವ ಸಂಸ್ಥೆಗಳ ಇಡೀ ಕ್ಯಾಂಪಸ್‌ನ ಉಪಯೋಗಕ್ಕೆ ಬೇಕಾಗಿರುವ ನೀರು ಇದರಿಂದ ಲಭ್ಯವಾಗುತ್ತಿದೆ. ಬೇಸಗೆ ಕಾಲದಲ್ಲಿಯೂ ಯಾವುದೇ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. ಅಷ್ಟೇಅಲ್ಲ, ಅಕ್ಕ-ಪಕ್ಕದಲ್ಲಿ ನೀರಿಲ್ಲದ ಕಟ್ಟಡಗಳ ಬಳಕೆಗೂ ಇಂಥಹ ಕಾಲೇಜುಗಳಿಂದ ನೀರು ಪೂರೈಕೆಯಾದ ನಿದರ್ಶನಗಳಿವೆ. ನಗರದ ಗಣಪತಿ ಹೈಸ್ಕೂಲ್‌ ಮತ್ತು ಕಾಲೇಜು, ಆ್ಯಗ್ನೆಸ್‌ ಕಾಲೇಜು, ಕಾರ್‌ಸ್ಟ್ರೀಟ್‌ ಹೈಸ್ಕೂಲ್‌, ಮಂಗಳೂರು ವಿಶ್ವವಿದ್ಯಾನಿಲಯ ಆವರಣ ಸಹಿತ ನಗರದ ಬೆರಳೆಣಿಕೆಯಷ್ಟು ವಿದ್ಯಾ ಸಂಸ್ಥೆಗಳಲ್ಲಿ ಮಾತ್ರ ಈಗ ಮಳೆಕೊಯ್ಲು ವ್ಯವಸ್ಥೆಯಿದೆ.

ನಗರದ ಗಣಪತಿ ರಸ್ತೆಯ ಗಣಪತಿ ಹೈಸ್ಕೂಲ್‌, ಗಣಪತಿ ಕಾಲೇಜಿನ ಆವರಣದಲ್ಲಿ ಕೆಲವು ವರ್ಷಗಳ ಹಿಂದೆ ಅಳವಡಿಸಿ ಮಳೆಕೊಯ್ಲು ವ್ಯವಸ್ಥೆಯಿಂದ ಶಾಲೆಯ ದಿನ ಬಳಕೆಗೆ ನೀರು ಸಾಕಾಗುತ್ತಿದೆ. ಶಾಲೆಗೆ ಪಾಲಿಕೆಯ ನೀರಿನ ಸಂಪರ್ಕ ನೀಡಿಲ್ಲ. ಮಳೆಕೊಯ್ಲು ಅನುಷ್ಠಾನ ಮಾಡಿರುವುದರಿಂದ ಮಕ್ಕಳಲ್ಲಿ ಮಳೆ ನೀರು ಸಂರಕ್ಷಣೆಯ ಬಗ್ಗೆ ತಿಳಿ ಹೇಳಲು ಅವಕಾಶ ಸಿಗುತ್ತಿದೆ. ಮಳೆಕೊಯ್ಲು ಅನುಷ್ಠಾನಿಸಿದ ಬಳಿಕ ಈ ವರೆಗೆ ಶಾಲಾ ಆವರಣದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಅಲ್ಲದೆ ಈ ಬಾರಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಖಾಸಗಿ ಕಟ್ಟಡದ ಮಾಲಕರಿಗೂ ನಾವೇ ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ಗಣಪತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರಂಜಿತಾ ಎಂ. ಜೋಶಿ ಅವರು “ಸುದಿನ’ಕ್ಕೆ ತಿಳಿಸಿದ್ದಾರೆ.

ವಿದ್ಯಾ ಸಂಸ್ಥೆಗಳಿಗೆ ಸುದಿನ ಮನವಿ
ಮಂಗಳೂರಿನಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ ಎಂಬುದಾಗಿ ಹೇಳಿ ಸುದಿನಕ್ಕೆ ಪ್ರತಿದಿನವೂ ಯಶೋಗಾಥೆಗಳ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಅದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಖುದ್ದು ಕಚೇರಿಗೆ ಬಂದು ಸ್ಪಂದಿಸುತ್ತಿದ್ದಾರೆ. ನಗರದಲ್ಲಿ ನೀರು ಬಂದಿಲ್ಲ ಎಂದು ಬೇರೆಯವರನ್ನು ದೂರುವ ಬದಲು ಜಲ ಸಂರಕ್ಷಣೆಗೆ ನಮ್ಮ ಕೊಡುಗೆ-ಹೊಣೆಗಾರಿಕೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಪ್ರತಿಯೊಬ್ಬರು ಸ್ವಯಂ ಪ್ರಶ್ನಿಸಿಕೊಂಡು ಸೂಕ್ತ ಮಾರ್ಗೋಪಾಯಗಳತ್ತ ಮನಸ್ಸು ಮಾಡಿದರೆ ನಗರದಲ್ಲಿ ಒಂದೆರಡು ವರ್ಷದಲ್ಲಿ ಅಂತರ್ಜಲ ವೃದ್ಧಿಯಾಗಿ ಬಹುತೇಕ ಕಡೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುತ್ತದೆ. ನಗರದಲ್ಲಿ ವಿಶಾಲ ಕ್ಯಾಂಪಸ್‌ ಹೊಂದಿರುವ ಹಲವು ಶಾಲೆ-ಕಾಲೇಜುಗಳಿದ್ದು, ಅಲ್ಲಿ ಮಳೆಕೊಯ್ಲು ಅಳವಡಿಸಲು ವಿಪುಲ ಅವಕಾಶಗಳಿವೆ. ಈಗ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆಕೊಯ್ಲು ಅಳವಡಿಸುವತ್ತ ಸಂಬಂಧಪಟ್ಟ ಶಿಕ್ಷಣ ಸಂಸ್ಥೆ ಅಥವಾ ಇಲಾಖೆಯವರು ಮುಂದಾಗಬೇಕು ಎನ್ನುವುದು “ಸುದಿನ’ ಕಳಕಳಿ ಹಾಗೂ ಆಶಯವಾಗಿದೆ.

ವಿವಿ ಸಂಯೋಜಿತ ಕಾಲೇಜುಗಳಿಗೆ ಕುಲಪತಿ ನಿರ್ದೇಶನ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಮಳೆಕೊಯ್ಲು, ಇಂಗು-ಗುಂಡಿಗಳಂತಹ ಚಟುವಟಿಕೆಗಳತ್ತ ನಾವು ಮುಖ ಮಾಡಬೇಕಾಗಿದೆ. ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಹಲವು ವರ್ಷಗಳ ಹಿಂದೆಯೇ ಮಳೆಕೊಯ್ಲು ಮಾಡಲಾಗಿದೆ. ಆದರೆ, ಈಗ ದೊಡ್ಡ ಮಟ್ಟದಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಸುದಿನವು ಈ ನಿಟ್ಟಿನಲ್ಲಿ “ಮನೆ-ಮನೆಗೆ ಮಳೆಕೊಯ್ಲು’ ಅಭಿಯಾನ ಪ್ರಾರಂಭಿಸಿದ್ದು, ಇದು ಪ್ರತಿಯೊಬ್ಬರನ್ನು ಈ ದಿಕ್ಕಿನಲ್ಲಿ ಉತ್ತೇಜಿಸಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಸಂಯೋಜಿತ ಎಲ್ಲ ಕಾಲೇಜುಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಲು ಶೀಘ್ರವೇ ಸೂಚನೆ ನೀಡುವುದಾಗಿ ಮಂಗಳೂರು ವಿವಿಯ ನೂತನ ಕುಲಪತಿ ಡಾ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು “ಉದಯವಾಣಿ’ಗೆ ಸುದಿನಕ್ಕೆ ತಿಳಿಸಿದ್ದಾರೆ.

ಮಳೆ ಕೊಯ್ಲು ಯಶೋಗಾಥೆ
ಖರ್ಚಿಲ್ಲದೆ ನೀರು ಇಂಗಿಸುವ ಸರಳ ವಿಧಾನ
ಬಿಜೈ 6ನೇ ಅಡ್ಡ ರಸ್ತೆಯ ನಳಿನಿ ಅವರು ತಮ್ಮ ಮನೆಯಲ್ಲಿ ಯಾವುದೇ ಖರ್ಚಿಲ್ಲದೆ ಛಾವಣಿಗೆ ಬೀಳುವ ಮಳೆ ನೀರನ್ನು ಮನೆಯ ಅಂಗಳದಲ್ಲಿ ಇಂಗುವ ಸರಳ ವಿಧಾನವನ್ನು ಅನುಸರಿಸಿದ್ದಾರೆ.
“ಛಾವಣಿಯ ನೀರು ಪೈಪ್‌ನ ಮೂಲಕ ಹರಿದು ನೇರವಾಗಿ ತೆರೆದ ಬಾವಿಗೆ ಬೀಳುತ್ತಿದೆ. ಕಸ, ಕಡ್ಡಿ ತಡೆಯಲು ಪೈಪ್‌ನ ತುದಿಗೆ 2 ಕಾಲುಚೀಲ (ಒಂದರ ಒಳಗೆ ಇನ್ನೊಂದು) ಕಟ್ಟಿ ಸರಳಶೋಧಕ ಫಿಲ್ಟರ್‌ ಅಳವಡಿಸಲಾಗಿದೆ. ಅದನ್ನು ಆಗಿಂದಾಗ ತೆಗೆದು ಸ್ವತ್ಛಗೊಳಿಸಿದರೆ ಸಾಕು’ ಎಂದು ನಳಿನಿ ವಿವರಿಸಿದ್ದಾರೆ.

“ಮೊದಲ ಮಳೆಯ ಒಂದೆರಡು ದಿನಗಳ ಕಾಲ ನೀರನ್ನು ಹೊರಗೆ ಬಿಡು ತ್ತೇವೆ. ಅದರಲ್ಲಿ ಛಾವಣಿಯ ಕಸ, ಕಡ್ಡಿ ಇತ್ಯಾದಿ ಇರುತ್ತವೆ. ಅನಂತರದ ದಿನಗಳಲ್ಲಿ ನೇರವಾಗಿ ಬಾವಿಗೆ ಬಿಡುತ್ತೇವೆ. ಇದನ್ನು ಅಳವಡಿಸಿ ಸುಮಾರು 10 ವರ್ಷಗಳಾಗಿವೆ. ನಮಗೆ ನೀರಿನ ಸಮಸ್ಯೆ ಇಲ್ಲ. ಕುಡಿಯಲು ಮತ್ತು ಮಳೆಯೊಳಗಿನ ಬಳಕೆಗೆ ಪಾಲಿಕೆ ನೀರನ್ನು ಉಪಯೋಗಿಸುತ್ತೇವೆ. ಮನೆಯ ಕೈತೋಟಕ್ಕೆ ಮತ್ತು ಕೆಲವೊಮ್ಮೆ ಬಟ್ಟೆ ತೊಳೆಯಲು ಬಾವಿ ನೀರನ್ನು ಉಪಯೋಗಿಸುತ್ತೇವೆ. ಬೇಸಗೆಯ ಕೊನೆಯ ಎರಡು ತಿಂಗಳಲ್ಲಿ ಬಾವಿಯ ನೀರಿನ ಮಟ್ಟ ಸ್ವಲ್ಪ ಕಡಿಮೆ ಆಗುತ್ತಿದೆ ಅಷ್ಟೇ’ ಎಂದು ಅವರು ತಿಳಿಸಿದ್ದಾರೆ.

ಅಂತರ್ಜಲ ಹೆಚ್ಚಿಸಲು ಕೊಡುಗೆ
ಬಲ್ಲಾಳ್‌ ಬಾಗ್‌ನ ಶಿವರಾಮ ನಾಯಕ್‌ ಅವರ ಮಳೆಕೊಯ್ಲು ಪದ್ಧತಿ ತುಸು ಭಿನ್ನ; ಜತೆಗೆ ಅನುಕರಣೀಯವೂ. ಏಳೆಂಟು ವರ್ಷಗಳಿಂದ ತಮ್ಮ ಮನೆಯ ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಬಿಡುತ್ತಿದ್ದಾರೆ. ಆದರೆ, ಹೀಗೆ ಬಿಟ್ಟ ನೀರನ್ನು ಮನೆ ಬಳಕೆಗೆ ಉಪಯೋಗಿಸದೆ, ಹಾಗೆಯೇ ಬಿಟ್ಟು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದ್ದಾರೆ. ಈ ರೀತಿ ನೀರನ್ನು ಬಾವಿಗೆ ಬಿಡಲು ಶಿವರಾಮ ನಾಯಕ್‌ ಅವರಿಗೆ ಹೆಚ್ಚೆಂದರೆ 1 ಸಾವಿರ ರೂ. ಖರ್ಚಾಗಿರಬಹುದು ಎನ್ನುತ್ತಾರವರು. “ಮಗನ ಸಲಹೆಯೊಂದಿಗೆ ಗ್ರೌಂಡ್‌ ವಾಟರ್‌ ರೀಚಾರ್ಜ್‌ ಗಾಗಿ ನಾನು ಮಳೆ ನೀರನ್ನು ಹೀಗೆ ಸಂಗ್ರಹಿಸಿಡುತ್ತಿದ್ದೇನೆ. ನೀರು ಯಾರಿ ಗಾದರೂ ಉಪಯೋಗವಾದರೆ ಸಂತೋಷ ಮಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಪರಿಹಾರೋಪಾಯವಾಗಿ ಜನ ಮಳೆಕೊಯ್ಲು ಬಗ್ಗೆ ಹೆಚ್ಚು ಜಾಗೃತರಾಗಬೇಕು ಎನ್ನುತ್ತಾರೆ ಅವರು.

 ಶಾಲಾ ಕಾಲೇಜುಗಳಲ್ಲಿ ಮಳೆಕೊಯ್ಲು ಯೋಜನೆ
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪ್ರತಿ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಸುವ ಅಗತ್ಯವಿದೆ. ಜಿ.ಪಂ. ಕಟ್ಟಡದಲ್ಲಿ ಮಳೆ ಕೊಯ್ಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಲಾ – ಕಾಲೇಜು ಗಳಲ್ಲೂ ಕಡ್ಡಾಯವಾಗಿ ಮಳೆಕೊಯ್ಲು ಯೋಜನೆ ರೂಪಿಸ ಲಾಗುವುದು.
ಸೆಲ್ವಮಣಿ ಆರ್‌.,ಜಿ.ಪಂ. ಸಿಇಒ

 ಕಾಲೇಜುಗಳಲ್ಲಿಯೂ ಮಳೆಕೊಯ್ಲು
ಈ ಬಾರಿ ಬಹುತೇಕ ವಿದ್ಯಾ ಸಂಸ್ಥೆಗಳಿಗೆ ನೀರಿನ ಸಮಸ್ಯೆ ಎದುರಾಗಿರುವುದು ನಿಜ. ಇದಕ್ಕಾಗಿ ಮಳೆಕೊಯ್ಲು ಅಳವಡಿಕೆ ಒಂದು ಉತ್ತಮ ಮಾರ್ಗ. ಎಲ್ಲ ಕಾಲೇಜುಗಳಲ್ಲಿ ಮಳೆಕೊಯ್ಲು ಅಳವಡಿಕೆ ಮಾಡುವ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಕುಶಾಲರಾತಿ, ಪಿಯು ಡಿಡಿಪಿಐ

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್‌ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next