Advertisement

ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ

11:31 AM Aug 10, 2019 | Team Udayavani |

ದೇವನಹಳ್ಳಿ: ಬಯಲು ಸೀಮೆಯಲ್ಲಿ ನೀರಿನ ಅಭಾವ ಹೆಚ್ಚಿದೆ. ಮಳೆಯ ನೀರನ್ನು ಸಂರಕ್ಷಿಸುವ ಅಗತ್ಯವಿದ್ದು, ಪ್ರತಿಯೊಬ್ಬರು ಮಳೆ ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.

Advertisement

ನಗರದ ಗಿರಿಯಮ್ಮ ವೃತ್ತದಲ್ಲಿರುವ ಬಿ.ಆರ್‌. ಅಂಬೇಡ್ಕರ್‌ಭವನದ ಹತ್ತಿರದಿಂದ ಹಳೆ ಬಸ್‌ ನಿಲ್ದಾಣ ಸೇರಿದಂತೆ ನಗರದ ರಾಜ ಬೀದಿಗಳಲ್ಲಿ ಜಿಲ್ಲಾಡಳಿತ ಹಾಗೂ ಬೆಂಗಳೂರು ಕೇಂದ್ರೀಯ ವಿವಿಯ ಎನ್‌ಎಸ್‌ಎಸ್‌ ಘಟಕದಿಂದ ‘ಜಲಶಕ್ತಿ ಅಭಿಯಾನ’ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಳೆ ಕೊಯ್ಲು ಕಡ್ಡಾಯ: ನೀರಿನ ಸಮಸ್ಯೆ ನೀಗಿಸಲು ಪ್ರತಿಯೊಂದು ಕೈಗಾರಿಕೆ ಕಟ್ಟಡ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಜಲಶಕ್ತಿ ಹಾಗೂ ಜಲಾಮೃತ ಯೋಜನೆಯಡಿ ಜಿಲ್ಲೆಯಾದ್ಯಂತ ಚೆಕ್‌ಡ್ಯಾಂ ನಿರ್ಮಾಣ, ಕೆರೆ-ಕಲ್ಯಾಣಿಗಳ ಅಭಿವೃದ್ಧಿ, ಕೃಷಿಹೊಂಡ ನಿರ್ಮಾಣ ಹಾಗೂ ಗಿಡ ನೆಟ್ಟು ಜಲ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅಧಿಕಾರಿಗಳು ಮೊದಲು ತಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಅಧಿಕಾರಿಗಳು ಶೀಘ್ರ ಮಳೆ ಕೊಯ್ಲು ಪದ್ಧತಿ ಅಳವಡಿಸಿರುವ ಫೋಟೋ ಸಮೇತವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

22ಕ್ಕೂ ಹೆಚ್ಚು ಕೆರೆ ಸ್ವಚ್ಛತೆ: ರಾಷ್ಟ್ರೀಯ ಸೇವಾದಳ ಸಹಾಯಕ ಸಂಯೋಜಕ ಡಾ.ಗೋವಿಂದ ಗೌಡ ಮಾತನಾಡಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಅಂತರ್ಜಲ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಜಲಾಮೃತ ಯೋಜನೆಯಡಿ 22 ಕ್ಕೂ ಹೆಚ್ಚು ಕೆರೆ ದತ್ತು ಪಡೆದು, ಹೂಳು ಹಾಗೂ ಕಲ್ಯಾಣಿ ಗಳ ಸ್ವಚ್ಛತೆ ಕಾರ್ಯಕ್ರಮ ಹಾಗೂ 3600 ಹೆಚ್ಚು ಗಿಡಗಳನ್ನು ನೆಡಲಾಗಿದೆ. ಬೆಂಗಳೂರು ಕೇಂದ್ರೀಯ ವಿವಿಯಿಂದ 3 ಚೆಕ್‌ಡ್ಯಾಂಗಳ ನಿರ್ಮಾಣ, ನಗರಗಳಲ್ಲಿ 1000 ಅಡಿ ಮೇಲ್ಪ ಟ್ಟು ಛಾವಣಿ ಮನೆಗಳಲ್ಲಿ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಬೇಕು ಎಂದು ಮಾಹಿತಿ ನೀಡಿದರು.

ನೀರಿನ ಮಹತ್ವದ ತಿಳಿಸುವ ಜಾಗೃತಿ: ನಗರದ ವಿವಿಧ ಕಾಲೇಜುಗಳಿಂದ 800 ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ‘ಜಲಶಕ್ತಿ ಹಾಗೂ ಜಲಾಮೃತ’ ಮಹತ್ವ ಸಾರಿದರು. ಜತೆಗೆ ಜಲಮೂಲ ನಿರ್ಮಿಸಿ- ಗಿಡ ಮರ ರಕ್ಷಿಸಿ ಎಂಬ ಘೋಷ ವಾಕ್ಯಗಳನ್ನು ಕೂಗಿದರು. ಜೀವಜಲ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿ ಗಳು ಪಾಲ್ಗೊಂಡರು.

Advertisement

ಜಿಪಂ ಉಪಕಾರ್ಯದರ್ಶಿ ಕೆ.ಕರಿಯಪ್ಪ, ಪ್ರಭಾರ‌ ತಹಶೀಲ್ದಾರ್‌ ಬಾಲಕೃಷ್ಣ, ತಾಪಂ ಇಒ ಮುರುಡಯ್ಯ, ಜಿಪಂ ಉಪವಿಭಾಗದ ಅಭಿಯಂತರ ಮಂಜುನಾಥ್‌, ನೀರಿನ ಯೋಜನಾಧಿಕಾರಿ ಸೋಮಶೇಖರ್‌, ಎಸ್‌ಐ ಸಿದ್ಧರಾಜು, ತಾಪಂ ಮಾಜಿ ಅಧ್ಯಕ್ಷ ಬಿ.ಕೆ ಶಿವಪ್ಪ, ಎನ್‌ಎಸ್‌ಎಸ್‌ ಘಟಕದ ಸಜ್ಜದ್‌ ಪಾಷ, ರವಿಚಂದ್ರನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next