ಸಿಂಧನೂರು: ನಗರ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡರೆ ಇನ್ನೂ ಕೆಲವೆಡೆ ಹೊಲಗಳಿಗೆ ನೀರು ನುಗ್ಗಿ ಜೋಳ, ಭತ್ತ, ಹತ್ತಿ ಬೆಳೆಗಳು ನಷ್ಟವಾಗಿವೆ.
ತಾಲೂಕಿನ ಬನ್ನಿಗನೂರು, ರಾಗಲಪರ್ವಿ, ಧುಮತಿ, ಆಯನೂರು, ಗೋನವಾರ, ಹೆಡಗಿನಾಳ, ಒಳಬಳ್ಳಾರಿ, ಗಿಣಿವಾರ, ಬಾದರ್ಲಿ, ಹರಟೆನೂರು, ಹೊಸಳ್ಳಿ ಇಜೆ, ಅಮರಾಪುರ ಸೇರಿದಂತೆ ಹಲವೆಡೆಗಳಲ್ಲಿ ಹಳ್ಳದ ನೀರು ಹೊಲಗಳಿಗೆ ನುಗ್ಗಿದ್ದು, ಭತ್ತ, ಹತ್ತಿ, ಜೋಳ ಸೇರಿದಂತೆ ಇತರೆ ಕೆಲ ಬೆಳೆಗಳು ಹಾಳಾಗಿವೆ.
40ನೇ ಉಪಕಾಲುವೆ ನೀರು ಹೆಚ್ಚಾಗಿ ವಾರ್ಡ್ ನಂ. 17ರ ವೆಂಕಟೇಶ್ವರ ಕಾಲೋನಿಯಲ್ಲಿ ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೊಮ್ಮೆ ಇಂತಹ ಸಮಸ್ಯೆ ಉಂಟಾಗುತ್ತಿದೆ. ವಾರ್ಡ್‌ನಲ್ಲಿ ಹರಿದ ನೀರು ಮುಂದುವರಿದು ಗಂಗಾವತಿ ಮುಖ್ಯರಸ್ತೆಗೆ ಹೋಗಿ ಅಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರ ನಿರ್ಲಕ್ಷ್ಯದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ವಾರ್ಡ್ ನಿವಾಸಿಗಳಾದ ನಿರುಪಾದೆಪ್ಪ ವಕೀಲ, ನನ್ನುಸಾಬ್ ಮೇಸ್ತ್ರಿ ಆರೋಪಿಸಿದ್ದಾರೆ.
ಮಳೆಯಿಂದಾಗಿ ಹಾಳಾದ ಬೆಳೆ ಪ್ರದೇಶಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದೇಶಿಸಲಾಗಿದೆ. ಅಲ್ಲಲ್ಲಿ ಹೊಲಗಳಿಗೆ ನೀರು ನುಗ್ಗಿ ಅಲ್ಪ ಸ್ವಲ್ಪ ಬೆಳೆಗಳು ಹಾಳಾದನ್ನು ಬಿಟ್ಟರೇ ಯಾವುದೇ ರೀತಿಯ ಅನಾಹುತಗಳು ನಡೆದಿಲ್ಲ ಎಂದು ತಹಶೀಲ್ದಾರ ಸಂತೋಷಕುಮಾರ ತಿಳಿಸಿದ್ದಾರೆ.