Advertisement

ಮನೆ ಬಳಕೆಗೆ ಮಳೆ ನೀರು –ಸರಳ ಮಾರ್ಗ

01:04 AM Jul 26, 2019 | sudhir |

ಉಡುಪಿ: ಜಲ ಸಾಕ್ಷರತೆ ಕುರಿತು ಎಲ್ಲೆಡೆ ಜಾಗೃತಿ ಹೆಚ್ಚಾಗುತ್ತಿದೆ. ಉದಯವಾಣಿ ಅಭಿಯಾನ ಆರಂಭಿಸಿದ ಬಳಿಕ ಹಲವಾರು ಮಂದಿ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಇನ್ನು ಕೆಲವರು ಅದನ್ನು ಈಗಾಗಲೇ ಜಾರಿಗೊಳಿಸಿದ್ದಾರೆ. ಅಂಥವರಲ್ಲಿ ಉಡುಪಿ ಕಲ್ಸಂಕ ಸಮೀಪದ ಭಾರತ್‌ ಪ್ರಸ್‌ನ ತೋನ್ಸೆ ದೇವದಾಸ ಪೈ ಅವರೂ ಒಬ್ಬರು.

Advertisement

ನೀರು ಜೀವಾಮೃತ ಎಂಬುದನ್ನು ಕಂಡುಕೊಂಡ ಪೈ ಅವರು ಮೊದಲು ತನ್ನ ಮನೆಯಲ್ಲಿಯೇ ಮಳೆ ಕೊಯ್ಲು ಅಳವಡಿಸಲು ನಿರ್ಧರಿಸಿ ಈಗ ಇತರರಿಗೆ ಮಾದರಿಯಾಗಿದ್ದಾರೆ.

ಪೈಯವರು ಮನೆಯ ಮಾಡಿನ ಮೇಲೆ ಬಿದ್ದ ನೀರನ್ನು ಎರಡು ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ.

ಪ್ರಸ್‌ ಮಹಡಿ ಮೇಲಿನಿಂದ ಬರುವ ಮಳೆ ನೀರನ್ನು ಸಂಗ್ರಹಿಸಲು 11 ಅಡಿ ಆಳದ ರಿಂಗ್‌ ತಯಾರಿಸಿದ್ದಾರೆ. ಅದರಲ್ಲಿ ಇದ್ದಿಲು, ಹೊಯಿಗೆ, ಜಲ್ಲಿ ತುಂಬಿದ್ದು ಇದರಲ್ಲಿ ನೀರು ಇಂಗಿ ಪಕ್ಕದ ಬಾವಿಗಳಿಗೆ ಇದರ ಪ್ರಯೋಜನ ದೊರಕುವಂತೆ ಮಾಡಿದ್ದಾರೆ. ಇದು ಅಂತರ್ಜಲ ಹೆಚ್ಚಿಸಲು ಮಾಡಿದ ವಿಧಾನ.

ಮನೆಯ ಮಾಡಿನ ಮೇಲೆ ಬಿದ್ದ ನೀರನ್ನು ಒಂದು ಡ್ರಮ್‌ನಲ್ಲಿ ಹಿಡಿದಿಟ್ಟು ಬಳಸುವ ಸರಳ ತಂತ್ರಜ್ಞಾನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಇದರಲ್ಲಿ ಐದು ಇಂಚು ದಪ್ಪದಲ್ಲಿ ಹೆಂಚಿನ ತುಂಡು, ಅನಂತರ ಹೊಯಿಗೆ, ಅನಂತರ ಸೊಳ್ಳೆ ಪರದೆ (ಮೆಶ್‌), ಅದರ ಮೇಲೆ ಐದು ಇಂಚು ಇದ್ದಿಲನ್ನು ಮತ್ತು ಜಲ್ಲಿಯನ್ನು ಹಾಕಿದ್ದಾರೆ. ಈ ಐದು ಪದರಗಳ ಮೂಲಕ ಸೋಸಿದ ನೀರನ್ನು ಪಂಪಿಂಗ್‌ ಮಾಡಿ ಬಚ್ಚಲು ಮನೆ, ಶೌಚಾಲಯ, ವಾಶಿಂಗ್‌ ಮೆಶಿನ್‌, ಪಾತ್ರೆ ತೊಳೆಯುವ ಕೆಲಸಗಳಿಗೆ ಬಳಸುತ್ತಾರೆ.

Advertisement

ಸುಮಾರು ಒಂದೂವರೆ ತಿಂಗಳ ಹಿಂದೆ ಮಳೆ ಶುರುವಾಗುವ ಮೊದಲು ದೇವದಾಸ ಪೈಯವರ ಪುತ್ರ ಟಿ.ಗಣೇಶ್‌ ಪೈ ಈ ಎರಡನ್ನೂ ಅಳವಡಿಸಿದ್ದಾರೆ.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ

ಇಂಗುಗುಂಡಿಗೆ ಪೈಪ್‌ಲೈನ್‌ ಸೇರಿ ಸುಮಾರು 48,000 ರೂ. ಖರ್ಚಾದರೆ, ನೇರ ಮಳೆ ನೀರಿನ ಸಂಗ್ರಹ ಬಳಕೆಗೆ ಕೇವಲ 2,500 ರೂ. ಖರ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next