Advertisement

ಹೂಡದಳ್ಳಿ ಕೆರೆ ಒಡ್ಡು ಒಡೆದು ವರ್ಷವಾಯ್ತು

09:12 PM Aug 04, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಕಳೆದ ವರ್ಷ ಆಗಸ್ಟ್‌ ಕೊನೆ ವಾರದಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಹೂಡದಳ್ಳಿ ಗ್ರಾಮದ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ಒಡೆದು ಒಂದು ವರ್ಷವಾದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

Advertisement

ತಾಲೂಕಿನ ಹೂಡದಳ್ಳಿ ಗ್ರಾಮದ ಹತ್ತಿರದಲ್ಲಿ ಸಣ್ಣದಾದ ನಾಲಾ ಇದ್ದು, ಮಳೆಗಾಲದಲ್ಲಿ ಪಸ್ತಪುರ, ಮೋಘಾ, ಹೂವಿನಬಾವಿ, ರುಸ್ತಂಪುರ ಗ್ರಾಮಗಳ ಬೆಟ್ಟ-ಗುಡ್ಡಗಳಿಂದ ಹರಿದು ಬರುವ ಮಳೆ ನೀರನ್ನು ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಸದುಪಯೋಗ ಮಾಡಿಕೊಳ್ಳಲಿ ಎಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲರು ತಮ್ಮ ಹುಟ್ಟೂರಿನಲ್ಲಿ 1969 ನವೆಂಬರ್‌ 22ರಲ್ಲಿ ಸಣ್ಣ ನೀರಾವರಿ ಕೆರೆ ಮಂಜೂರಿಗೊಳಿಸಿ, ಮೂರು ಸಾವಿರ ಹೆಕ್ಟೇರ್‌ ಜಮೀನಿಗೆ ನೀರಿನ ಸೌಲಭ್ಯ ಒದಗಿಸಿದ್ದರು. ಆದರೆ ಕಳೆದ ವರ್ಷ 2020 ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕೆರೆ ತುಂಬಿದ್ದರಿಂದ ಸೆಪ್ಟೆಂಬರ್‌ 15ರಂದು ಒಡ್ಡು ಒಡೆದು ಹೋಗಿ, ಕೆರೆ ಕೆಳಭಾಗದಲ್ಲಿರುವ ಅನೇಕ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಮಾಡಿತ್ತು.

ಈ ವೇಳೆ ಸಂಸದ ಹಾಗೂ ಈಗಿನ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ| ಅವಿನಾಶ ಜಾಧವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಸರ್ಕಾರದಿಂದ ಯಾವುದೇ ಅನುದಾನ ಮಂಜೂರಿ ಆಗದೇ ಇರುವುದರಿಂದ ದುರಸ್ತಿ ಕಾರ್ಯ ಆರಂಭವಾಗಲೇ ಇಲ್ಲ. ದೋಟಿಕೋಳ ಗ್ರಾಮದ ಮೇಲ್ಭಾಗದಲ್ಲಿ ಇರುವ ಸಣ್ಣ ನೀರಾವರಿ ಕೆರೆಗೂ ಹೆಚ್ಚಿನ ನೀರು ಹರಿದು ಬಂದಿದ್ದರಿಂದ ಒಡ್ಡಿನಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ರಾತ್ರೋರಾತ್ರಿ ಗ್ರಾಮಸ್ಥರು ಎಚ್ಚರಗೊಂಡು ಅಧಿ ಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರಿಂದ ಜೆಸಿಬಿ ಯಂತ್ರದ ಮೂಲಕ ಕೋಡಿಯಿಂದ ನೀರು ಹರಿ ಬಿಟ್ಟು ಕೆರೆ ರಕ್ಷಣೆ ಮಾಡಲಾಗಿತ್ತು. ಆದರೆ ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳದೇ ಇದ್ದುದರಿಂದ ಕೋಡಿ ಮೂಲಕ ನೀರು ಹರಿದು ಬಿಡಲಾಗುತ್ತಿದೆ.

ಇದರಿಂದಾಗಿ ಮಳೆಯಾಶ್ರಿತ ರೈತರು ಹಿಂಗಾರು ಬೆಳೆಗಳಿಗೆ ನೀರು ಪಡೆಯಲು ತೊಂದರೆ ಆಗುತ್ತಿದೆ. ಅಲ್ಲದೇ ಬೇಸಿಗೆ ದಿನಗಳಲ್ಲಿ ದನಕರುಗಳಿಗೆ, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.

ನಮ್ಮ ಸ್ವಂತ ಊರು ಹೂಡದಳ್ಳಿಯಲ್ಲಿ ಸಣ್ಣ ನೀರಾವರಿ ಕೆರೆ ಒಡೆದು ಹೋಗಿದೆ. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ನಾಗಾಇದಲಾಯಿ ಕೆರೆಗೆ ಭೇಟಿ ನೀಡಿ ಅನುದಾನ ನೀಡಿದ್ದಾರೆ. ಆದರೆ ಹೂಡದಳ್ಳಿ ಕೆರೆ ದುರಸ್ತಿಗೆ ಯಾವುದೇ ಅನುದಾನ ಬಂದಿಲ್ಲ. ಇದಕ್ಕೆ ಶಾಸಕ ಡಾ| ಅವಿನಾಶ ಜಾಧವ ಬೇವಾಬ್ದಾರಿತನ ಕಾರಣವಾಗಿದೆ. ಕಳೆದ ಮಾರ್ಚ್‌ 14ರಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವಗೆ ತಿಳಿಸಲಾಗಿತ್ತು. ಅವರು ಗಮನ ಹರಿಸಿಲ್ಲ.
-ಕೈಲಾಶನಾಥ ಪಾಟೀಲ, ಮಾಜಿ ಶಾಸಕ

Advertisement

ತಾಲೂಕಿನಲ್ಲಿ ಒಡೆದು ಹೋಗಿರುವ ಸಣ್ಣ ನೀರಾವರಿ ಕೆರೆಗಳನ್ನು ದುರಸ್ತಿ ಮಾಡುವಂತೆ ಅನೇಕ ಸಲ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದು ಮನವಿ ನೀಡಲಾಗಿದೆ. ಆದರೆ ಶಾಸಕರು ಈ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ. ದುರಸ್ತಿ ಕಾರ್ಯ ಕೈಗೊಳ್ಳಲು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ.
-ಸಂಜೀವನ್‌ ಯಾಕಾಪುರ, ಜೆಡಿಎಸ್‌ ಮುಖಂಡ

ತಾಲೂಕಿನಲ್ಲಿ ಕಳೆದ ವರ್ಷ ಧಾರಾಕಾರ ಮಳೆ ಆಗಿದ್ದರಿಂದ ಕೆರೆ ಒಡ್ಡು ಒಡೆದಿದೆ. ಆದರೆ ಸರ್ಕಾರದಿಂದ ಇನ್ನುವರೆಗೂ ಅನುದಾನ ಬಂದಿಲ್ಲ. ಅನುದಾನ ಬಂದ ನಂತರ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗುವುದು. ಶಾಸಕ ಡಾ| ಅವಿನಾಶ ಜಾಧವ ಅನುದಾನ ಮಂಜೂರಿಗೊಳಿಸುವ ಭರವಸೆ ನೀಡಿದ್ದಾರೆ.
-ಶಿವಶರಣಪ್ಪ ಕೇಶ್ವಾರ, ಎಇಇ ಸಣ್ಣ ನೀರಾವರಿ ಇಲಾಖೆ

-ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next