Advertisement

ಜಪ್ಪಿನಮೊಗರು ತೋಡು; ಮನೆಗಳಿಗೆ ನೀರು ನುಗ್ಗಲು ಮುಖ್ಯ ಕಾರಣ

11:02 AM Jun 01, 2018 | |

ಮಹಾನಗರ: ನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಜಪ್ಪಿನಮೊಗರು ಸುತ್ತಮುತ್ತಲಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ನಷ್ಟ-ಹಾನಿಯಾಗಿದೆ. ಆದರೆ, ಈ ಭಾಗದ ಪ್ರದೇಶಗಳು ಜಲಾವೃತಗೊಳ್ಳಲು ಪ್ರಮುಖ ಕಾರಣ ಇಲ್ಲಿನ ರಾಜಕಾಲುವೆಯ ದುರವಸ್ಥೆ.

Advertisement

ಮಂಗಳೂರು ದಕ್ಷಿಣ ಭಾಗದ ಪ್ರದೇಶಗಳಿಂದ ಹರಿಯುವ ಬಹುತೇಕ ಚರಂಡಿ ನೀರು ಜಪ್ಪಿನಮೊಗರು ಕಾಲುವೆಗೆ ಸೇರಿ ನೇತ್ರಾವತಿ ನದಿಯನ್ನು ಸೇರುತ್ತದೆ. ಹಾಗಾಗಿ ನಮ್ಮ ತಂಡವು ಗುರುವಾರ ಈ ಕಾಲುವೆ ಉದ್ದಕ್ಕೂ ಸಂಚರಿಸಿ ವಸ್ತುಸ್ಥಿತಿಯನ್ನು ಪಟ್ಟಿ ಮಾಡಿತು.

ಹೂಳು ತೆಗೆದಿಲ್ಲ
ನಗರದ ನಾನಾ ಭಾಗಗಳಿಂದ ಬರುವ ಮಳೆ ನೀರು ಪಂಪ್‌ವೆಲ್‌ ಪರಿಸರದಲ್ಲಿ ಇರುವ ಈ ಕಾಲುವೆಗೆ ಸೇರುತ್ತದೆ. ಇಲ್ಲಿಂದ ಪ್ರಾರಂಭಗೊಂಡ ರಾಜಕಾಲುವೆಯು ಎಕ್ಕೂರು, ಜಪ್ಪಿನಮೊಗರು, ಹೊಯಿಗೆ ರಾಶಿ ಮೂಲಕ ಸಾಗಿ ನೇತ್ರಾವತಿ ನದಿ ಸೇರುತ್ತದೆ. ಸಮಸ್ಯೆ ಇರುವುದೇ ಈ ರಾಜಕಾಲುವೆಯಲ್ಲಿ ಮಳೆಗಾಲ ಪ್ರಾರಂಭಕ್ಕೂ ಮುನ್ನ ಕಾಲುವೆಗಳ ಹೂಳೆತ್ತುವ ಕೆಲಸ ಮಾಡಬೇಕು. ಆದರೆ ಇಲ್ಲಿ 1 ವರ್ಷದಿಂದ ಕಾಮಗಾರಿ ನಡೆಸಿಲ್ಲ. ಆದ ಕಾರಣ ನೀರು ಉಕ್ಕಿ ಹರಿದು ಸುತ್ತಮುತ್ತಲಿನ ಮನೆಗಳಿಗೆ ನುಗ್ಗಿದೆ ಎನ್ನುತ್ತಾರೆ ಸ್ಥಳೀಯರು.

ಈ ರಾಜಕಾಲುವೆಯ ತುಂಬ ಬಟ್ಟೆ, ಪ್ಲಾಸ್ಟಿಕ್‌, ಮರದ ಎಲೆ, ಕಾಗದ ಸೇರಿದಂತೆ ಕಸ ಕಡ್ಡಿಗಳು ತುಂಬಿಕೊಂಡಿವೆ. ಇದೇ ನೀರು ಹರಿಯಲು ಅಡ್ಡಿಯಾಗಿರುವುದು. ಪಂಪ್‌ವೆಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಜಪ್ಪಿನಮೊಗರು ತಲುಪುವ ಸ್ಥಳದಲ್ಲಿ ನಿರ್ಮಿಸಿದ ಚಿಕ್ಕ ಸೇತುವೆ ಕಾಮಗಾರಿಯೂ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ. ಏಕೆಂದರೆ ಈ ಸೇತುವೆ ನಿರ್ಮಿಸುವಾಗ ನೀರು ಹರಿಯಲು ಅನುಕೂಲವಾಗಲು ಸ್ವಲ್ಪ ದೂರದವರೆಗೆ ಕಾಂಕ್ರಿಟ್‌ ಹಾಕಲಾಗಿದೆ. ಇದರಿಂದ ನೀರು ಇಂಗದೇ ಮೇಲಕ್ಕೆ ಹರಿಯುತ್ತಿದೆ.

ಅಪಾಯ ಕಟ್ಟಿಟ್ಟ ಬುತ್ತಿ
ಜಪ್ಪಿನಮೊಗರು ಬಳಿಯ ಯುನಿಟಿ ಗ್ಯಾರೇಜ್‌ ಪಕ್ಕದ ರಸ್ತೆ ಬಳಿ ಇರುವ ರಾಜಕಾಲುವೆಗೆ ಹಾಕಲಾದ ತಡೆಗೋಡೆ ಕುಸಿದಿದೆ. ಕೆಲವು ತಿಂಗಳ ಹಿಂದೆಯೇ ಈ ಸಮಸ್ಯೆ ಎದುರಾಗಿತ್ತು. ಪರ್ಯಾಯವಾಗಿ ಮರಳು ತುಂಬಿದ ಗೋಣಿಯನ್ನು ತಡೆಗೋಡೆಯಾಗಿ ಬಳಸಲಾಗಿತ್ತು. ಮಂಗಳವಾರ ಸುರಿದ ಭಾರೀ ಮಳೆ ನೀರಿನ ರಭಸಕ್ಕೆ ಮರಳು ಚೀಲಗಳೆಲ್ಲಾ ಕುಸಿದಿದೆ. ವಿಚಿತ್ರವೆಂದರೆ ಶಾಶ್ವತ ಕಾಮಗಾರಿ ನಡೆಸುವ ಬದಲು ಮತ್ತೆ ಮರಳು ತುಂಬಿದ ಗೋಣಿಯನ್ನು ಹಾಕಲಾಗುತ್ತಿದೆ. 

Advertisement

ಸುಮಾರು 3 ಕಿ.ಮೀ. ರಾಜಕಾಲುವೆ
ಶಿವಬಾಗ್‌, ಮರೋಳಿ, ಕುದ್ಕೋರಿ ಗುಡ್ಡ ಪ್ರದೇಶ ಮಳೆ ನೀರು ತೋಡಿನ ಮೂಲಕ ಪಂಪ್‌ವೆಲ್‌ ಸರ್ಕಲ್‌ ಬಳಿ ಕಾಲುವೆಗೆ ಸೇರಿ ಎಕ್ಕೂರು, ಜಪ್ಪಿನಮೊಗರು, ಹೊಗೆ ರಾಶಿ ಮೂಲಕ ನದಿ ಸೇರುತ್ತದೆ. ಪಂಪ್‌ವೆಲ್‌ನಿಂದ 3 ಕಿ. ಮೀ. ಉದ್ದವಿದ್ದು, ಈಪರಿಸರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮನೆಗಳಿವೆ.

ಒಂದೇ ಬದಿ ತಡೆಗೋಡೆ 
ಈ ಬಾರಿಯ ಮಳೆಯಿಂದಾಗಿ ಹೊಗೆರಾಶಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಆಸ್ತಿಪಾಸ್ತಿಗಳಿಗೆ ಹೆಚ್ಚಿನ ಹಾನಿ ಮಾಡಿದೆ.
ಇದಕ್ಕೆ ಮತ್ತೂಂದು ಕಾರಣ ರಾಜಕಾಲುವೆಗೆ ಒಂದೇ ಬದಿಯಲ್ಲಿ ನಿರ್ಮಿಸಿದ ತಡೆಗೋಡೆ. ತಡೆಗೋಡೆಯಿಲ್ಲದ ಮತ್ತೊಂದು ಬದಿಯಲ್ಲಿ ಸುಮಾರು 4 ಅಡಿಗಳಷ್ಟು ಎತ್ತರಕ್ಕೆ ಮಣ್ಣಿದೆ. ನೀರಿನ ರಭಸಕ್ಕೆ ಮಣ್ಣು ಈಗಾಗಲೇ ಕುಸಿಯುವಂತಿದೆ.

ಮತ್ತಷ್ಟು ಎತ್ತರಿಸಿ
ಮಳೆಗೆ ರಾಜಕಾಲುವೆ ನೀರು ನಮ್ಮ ಮನೆಯೊಳಗೆ ಬಂದಿದ್ದು, ಮೂರು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ತಂಗಿದ್ದೆವು. ರಾಜಕಾಲುವೆಯನ್ನು ಈ ಬಾರಿ ಹೂಳೆತ್ತದಿರುವುದೇ ಸಮಸ್ಯೆಗೆ ಕಾರಣ. ನಾವು ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ. ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಬಾವಿ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು ಕುಡಿಯಲು ಯೋಗ್ಯವಾಗಿಲ್ಲ .
ರೇವತಿ, ಸ್ಥಳೀಯರು

ಮತ್ತಷ್ಟು ಎತ್ತರಿಸಿ
ಒಂದು ಬದಿ ಇರುವ ತಡೆಗೋಡೆ ಸುಮಾರು 8 ಅಡಿ ಇದೆ. ಮಂಗಳವಾರ ಬಂದ ಮಳೆಗೆ ರಾಜ ಕಾಲುವೆ ನೀರು ಉಕ್ಕಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಕೂಡಲೇ ಎರಡೂ ಬದಿಗಳಲ್ಲಿ 12 ಅಡಿಗೂ ಎತ್ತರದ ತಡೆಗೋಡೆ ನಿರ್ಮಿಸಿ.
– ಆ್ಯಂಟನೀಸ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next