ಬ್ಯಾಡಗಿ: ಗುರುವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಸುಮಾರು 2 ಗಂಟೆಗೂ ಹೆಚ್ಚು ಹೊತ್ತು ಸುರಿದ ಭಾರಿ ಮಳೆಗೆ ಪಟ್ಟಣದ ಸಮುದಾಯ ತಾಲೂಕು ಆಸ್ಪತ್ರೆ ಅಕ್ಷರಶಃ ಜಲಾವೃತಗೊಂಡು ರೋಗಿಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು.
ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದ ತಾಲೂಕಾಸ್ಪತ್ರೆ ಒಂದೆರಡು ಗಂಟೆ ಸುರಿದ ಮಳೆಗೆ ಚಿಕಿತ್ಸಾ ಕೋಠಡಿ, ಸ್ಟೋರ್ ರೂಂ ಸೇರಿದಂತೆ ಎಲ್ಲ ಕೊಠಡಿಗಳಲ್ಲೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಎಂತಹ ಮಳೆ ಸುರಿದರೂ ಸುಸಜ್ಜಿತ ಕಟ್ಟಡ ಹೊಂದಿರುವ ತಾಲೂಕಾಸ್ಪತ್ರೆ ಒಳಗೆ ಇಲ್ಲಿಯವರೆಗೂ ನೀರು ನುಗ್ಗಿರಲಿಲ್ಲ. ಆದರೆ, ರಟ್ಟಿಹಳ್ಳಿ ರಸ್ತೆಯಲ್ಲಿರುವ ಮುಖ್ಯ ಸಿಡಿಯನ್ನು ಹೊಸದಾಗಿ ನಿರ್ಮಿಸುವ ನಿಟ್ಟಿನಲ್ಲಿ ದೊಡ್ಡ ಕಾಲುವೆಗೆ ಅಡ್ದಲಾಗಿ ಮಣ್ಣು ಹಾಕಿದ್ದ ಪರಿಣಾಮ ಆಸ್ಪತ್ರೆಯೊಳಗೆ ನೀರು ನುಗ್ಗುವಂತಾಗಿದೆ.
ಚರಂಡಿ ನೀರಿನೊಂದಿಗೆ ಸೇರಿಕೊಂಡ ಮಳೆ ನೀರು ಆಸ್ಪತ್ರೆಯ ಆಪರೇಷನ್ ಥಿಯೇಟರ್, ಡೆಲವರಿ ವಾರ್ಡ್, ಸಾಮಾನ್ಯ ರೋಗಿಗಳ ಕೋಣೆ, ಗರ್ಭಿಣಿಯರ ವಾರ್ಡ್, ಎಕ್ಸ್‌ರೆ ಕೇಂದ್ರ, ಲ್ಯಾಬ್. ಚೀಟಿ ಮಾಡುವ ಕೇಂದ್ರ ಸೇರಿದಂತೆ ಬೆಲೆ ಬಾಳುವ ವೈದ್ಯಕೀಯ ಪರಿಕರಗಳೂ ನೀರಲ್ಲಿ ನಿಲ್ಲುವಂತಾಯಿತು.
ಏಕಾ ಏಕಿ ನುಗ್ಗಿದ ನೀರಿನಿಂದ ಗರ್ಭಿಣಿಯರು ಸೇರಿದಂತೆ ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಮತ್ತು ಬೆಲೆ ಬಾಳುವ ಯಂತ್ರೋಪಕರಣಗಳನ್ನು ರಕ್ಷಿಸಿಕೊಳ್ಳುವುದೇ ಸಿಬ್ಬಂದಿ ಪಾಲಿಗೆ ದೊಡ್ಡ ಸಲಾಲಾಗಿ ಪರಿಣಮಿಸಿತ್ತು. ಆಸ್ಪತ್ರೆಯ ಒಟ್ಟು 30 ಸಿಬ್ಬಂದಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಹೊರಗುತ್ತಿಗೆ ಕಾರ್ಮಿಕರು ಗುರುವಾರ ರಾತ್ರಿಇಡೀ 3 ಗಂಟೆ ವರೆಗೆ ನೀರು ಹೊರ ಹಾಕುವಲ್ಲಿ ಶ್ರಮಿಸಿದರು.