Advertisement
ತಡೆಗೋಡೆಯಿಲ್ಲಹೀಗಂತ ತಮ್ಮ ಪರಿಸ್ಥಿತಿಯನ್ನು ವಿವರಿಸುತ್ತಾರೆ ವೂಂಚರಬೆಟ್ಟು ವಾರ್ಡಿನ ವಡೇರಹೋಬಳಿ, ಕೋಣಿ ಪರಿಸರದ ಜನ. ಬಸ್ರೂರು ಕ್ರಾಸ್ ರಸ್ತೆಯಿಂದ ಕೋಣಿವರೆಗೂ ಇದೇ ಅವಸ್ಥೆ. ಇಲ್ಲಿ ಹರಿಯುವ ತೋಡಿನ ಎರಡೂ ಬದಿ ಮನೆಗಳಿವೆ. ಅಲ್ಲೆಲ್ಲ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಮನೆಯಿಂದ ನೀರಿಗೆ ಆಟವಾಡಲು ಹೋಗದಂತೆ ಅವರನ್ನು ಕಾಯುವುದೇ ದೊಡ್ಡ ಕೆಲಸ. ಮನೆ ಮಂದಿ ಕೆಲಸದಲ್ಲಿ ಮುಳುಗಿದ್ದಾಗ ಮಕ್ಕಳು ನೀರಲ್ಲಿ ಮುಳುಗಲು ಓಡುತ್ತವೆ!. ಇದಕ್ಕೆಲ್ಲ ಪರಿಹಾರ ಕೊಡಿ, ತಡೆಗೋಡೆ ಕಟ್ಟಿಸಿ ಎಂದು ಈ ಊರ ಜನ ಆಗಾಗ ಕೇಳಿದ್ದಾರೆ. ಜನಪ್ರತಿನಿಧಿಗಳಿಗೆ ಇವರ ಬೇಡಿಕೆ ತಲುಪಿದೆ. ಆದರೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಕಾರಣ ಕೇಳಿದರೆ ಅನುದಾನ ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ದೊರೆಯುತ್ತದೆ.
ಗುಲ್ವಾಡಿ ಅಣೆಕಟ್ಟಿನಿಂದಾಗಿ ಇಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ. ಆಚೆ ಬದಿ ಆನೆಗುಡ್ಡೆಯ ನೀರು ಕೂಡ ಹರಿದು ಬರುತ್ತದೆ. ಭಾರೀ ಪ್ರಮಾಣದಲ್ಲಿ ಮಳೆ ಬಂದಾಗ ಮನೆಯಂಗಳ ಮಾತ್ರವಲ್ಲ ಮನೆಯ ಒಳಗೂ ನೀರು ಬರುವ ಆತಂಕವಿದೆ. ಬೆಳೆದ ಬೆಳೆ ಕೈಗೆ ಸಿಕ್ಕು ಬೆಲೆ ದಕ್ಕುವ ಮುನ್ನವೇ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕ ಇದೆ. ಬೇರೆ ಬೇರೆ ಕಡೆ ತಡೆಗೋಡೆ ರಚನೆ ಆಗಿದೆ. ಆದರೆ ಈ ಭಾಗದಲ್ಲಿ ಇರುವ ಒಂದಷ್ಟು ಮನೆಗಳ ಮಂದಿಗೆ ಇರುವ ಆತಂಕವಾರಿಸುವ ಕೆಲಸ ಇನ್ನೂ ಕೈಗೂಡಿಲ್ಲ. ಹಾಗಂತ ಈ ಸಮಸ್ಯೆ ಸುಧಾರಣೆಗೆ ಯತ್ನಿಸಿಲ್ಲವಾ ಎಂದರೆ ನಕಾರಾತ್ಮಕ ಉತ್ತರ ಅಲ್ಲ ಪ್ರಯತ್ನ ನಡೆದಿದೆ ಎಂಬ ಉತ್ತರವೇ ದೊರೆಯುತ್ತದೆ. ಈ ವಾರ್ಡ್ ಸದಸ್ಯೆ ಆಗಿರುವ ಗುಣರತ್ನಾ ಅವರು ಮಲೆನಾಡು ಪ್ರದೇಶಾಭಿವೃದ್ಧಿ ನಿಧಿಯಿಂದ ಇಲ್ಲಿ ತಡೆಗೋಡೆ ಕಟ್ಟಲು ಅನುದಾನ ಕೇಳಿದ್ದಾರೆ. ಪುರಸಭಾ ನಿಧಿ ಸಾಕಾಗುವುದಿಲ್ಲ. ಮಲೆನಾಡು ಪ್ರದೇಶಾಭಿವೃದ್ಧಿ ನಿಧಿಯಿಂದ ಸಿಕ್ಕಿಲ್ಲ ಎನ್ನುವ ತೊಳಲಾಟ ಅವರದ್ದು. ಈ ಹಿಂದೆ ಎಡಿಬಿ ಮೂಲಕ ಅನೇಕ ತೋಡುಗಳಿಗೆ ತಡೆಗೋಡೆ ರಚಿಸುವ ಕಾಮಗಾರಿ ನಡೆದಿದೆ. ಆದರೆ ವಡೇರಹೋಬಳಿಯ ಈ ಪ್ರದೇಶದ ಒಂದಷ್ಟು ಬದಿಯ ಕಾಮಗಾರಿ ಸೇರ್ಪಡೆ ಬಾಕಿಯಾಗಿದೆ. ಈ ಭಾಗಕ್ಕೆ ಪ್ರತ್ಯೇಕ ಒಳಚರಂಡಿ ಬೇಡಿಕೆ ಕೂಡ ಈಡೇರಿದಂತಿಲ್ಲ.
Related Articles
ಅನೇಕ ಕಡೆ ಚರಂಡಿ ಇಲ್ಲ. ಚರಂಡಿ ಇದ್ದ ಕಡೆ ಚಪ್ಪಡಿ ಹಾಕಿಲ್ಲ. ಚಪ್ಪಡಿ ಹಾಕಿದರೆ ತ್ಯಾಜ್ಯ ಜಲ ಹರಿಯುವ ವಾಸನೆಯನ್ನಾದರೂ ತಡೆಯಬಹುದು. ಮುಖ್ಯ ರಸ್ತೆಯಿಂದ ರಾಜ್ಯ ರಸ್ತೆ ಬದಿ ಕೂಡ ಚರಂಡಿ ವ್ಯವಸ್ಥೆಯಿಲ್ಲ. ವೂಂಚರಬೆಟ್ಟು ತಿರುವಿನಲ್ಲಿ ಇಂಟರ್ ಲಾಕ್ ಹಾಕಲಾಗಿದೆ. ಆದರೆ ಅದೆಲ್ಲ ಕಳಪೆ ಕಾಮಗಾರಿಯಂತೆ ಎಂದೋ ಎದ್ದೆದ್ದು ಹೋಗಿದೆ.
Advertisement
ಅನುದಾನ ಇಲ್ಲಇಂತಹ ಕಾಮಗಾರಿಗೆ ಪುರಸಭೆ ಅನುದಾನ ಸಾಲದು. ಮಲೆನಾಡು ಪರಿಹಾರ ನಿಧಿಯಲ್ಲಿ ಅನುದಾನ ನೀಡುವಂತೆ ಶಾಸಕರಿಗೆ ಮನವಿ ನೀಡಲಾಗಿದೆ. ನನ್ನ ಅವಧಿ ಮುಗಿದರೂ ಕಾಮಗಾರಿ ಮಾಡಿಸಬೇಕೆಂಬ ಛಲ ಇದೆ.
– ಗುಣರತ್ನಾ, ಪುರಸಭೆ ಸದಸ್ಯರು ತಡೆಗೋಡೆಗೆ ಬೇಡಿಕೆ ಇದೆ
ಮಳೆ ಬಂದಾಗ ನಮ್ಮ ಅವಸ್ಥೆ ಹೇಳತೀರದು. ಯಾವಾಗ ನೀರುಕ್ಕಿ ಹರಿಯುವುದೋ ಎಂಬ ಆತಂಕದಲ್ಲಿರುತ್ತೇವೆ. ತಡೆಗೋಡೆ ಮಾಡಿಕೊಡಿ ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.
– ಗಿರಿಜಾ, ವಡೇರಹೋಬಳಿ ನಿವಾಸಿ ಚರಂಡಿಯೇ ಇಲ್ಲ
ಚರಂಡಿ ಇದ್ದಲ್ಲಿ ಚಪ್ಪಡಿ ಹಾಕಿ ಮುಚ್ಚಿಲ್ಲ. ವೂಂಚರಬೆಟ್ಟು ಪರಿಸರದಲ್ಲಿ ಚರಂಡಿಯೇ ಇಲ್ಲ. ನೀರು ಹರಿಯಲು ವ್ಯವಸ್ಥೆಯಿಲ್ಲ. ಹಾಗಾಗಿ ಮಳೆಗಾಲದಲ್ಲಿ ಸದಾ ತೊಂದರೆಯಾಗುತ್ತಿದೆ.
– ಗೋಪಾಲ ಯಾನೆ ವಸಂತ, ವೂಂಚರಬೆಟ್ಟು ನಿವಾಸಿ