Advertisement
ಬೆಳಗಾವಿ: ಸತತ ಎರಡು ವರ್ಷ ಬಿದ್ದ ಮಳೆ, ನಂತರ ಬಂದ ಪ್ರವಾಹ ಕೃಷ್ಣಾ ಕೊಳ್ಳದಲ್ಲಿ ಬರುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಜಲಾಶಯಗಳ ನೀರಿನ ದಾಹ ದೂರ ಮಾಡಿದೆ. ಈ ಎರಡೂ ರಾಜ್ಯಗಳ ಜಲಾಶಯ ವ್ಯಾಪ್ತಿಯಲ್ಲಿ ಈ ವರ್ಷ ನೀರಿನ ಸಮಸ್ಯೆ ಕಾಣಲಿಲ್ಲ. ಆದರೆ ಜಲಾಶಯಗಳಿಗೆ ಬರುವ ಹೆಚ್ಚಿನ ಪ್ರಮಾಣದ ನೀರು ಸಹಜವಾಗಿಯೇ ಆತಂಕ ಉಂಟು ಮಾಡುತ್ತಲೇ ಇದೆ.
Related Articles
Advertisement
123 ಟಿಎಂಸಿ ಸಾಮರ್ಥ್ಯದ ಆಲಮಟ್ಟಿಯಲ್ಲಿ ಈಗ 23 ಟಿಎಂಸಿ ನೀರಿದ್ದರೆ ಒಟ್ಟು 33.3 ಟಿಎಂಸಿ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 20.82 ಟಿಎಂಸಿ ನೀರು ಸಂಗ್ರಹವಿದೆ. ಇನ್ನೊಂದು ಕಡೆ ಕಳೆದ ಎರಡು ವರ್ಷ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಸಾಕಷ್ಟು ಹಾನಿ ಉಂಟು ಮಾಡಿರುವ ಹಿಡಕಲ್ ಜಲಾಶಯದಲ್ಲಿ ಈಗ 4.904 ಟಿಎಂಸಿ (ಒಟ್ಟು ಸಾಮರ್ಥ್ಯ 51 ಟಿಎಂಸಿ) ಹಾಗೂ ಮಲಪ್ರಭಾ ಜಲಾಶಯದಲ್ಲಿ 9.826 ಟಿಎಂಸಿ (ಒಟ್ಟು ಸಾಮರ್ಥ್ಯ 37 ಟಿಎಂಸಿ) ನೀರು ಸಂಗ್ರಹವಿದೆ. ಈಗಿನ ಪರಿಸ್ಥಿತಿಯಲ್ಲಿ ಈ ವರ್ಷ ನೀರಿನ ಕೊರತೆ ಬೀಳುವದಿಲ್ಲ. ಆದರೆ ಜಲಾಶಯಗಳ ನೀರಿನ ಮಟ್ಟ ಏರುತ್ತಿದ್ದಂತೆ ನದಿ ತೀರದ ನೂರಾರು ಗ್ರಾಮಗಳಲ್ಲಿ ಪ್ರವಾಹದ ಭೀತಿ, ಸ್ಥಳಾಂತರದ ಆತಂಕ ಶುರುವಾಗುತ್ತದೆ. ಇದಕ್ಕೆ ಸರ್ಕಾರ ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವದು ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿದೆ.
ಪ್ರತಿವರ್ಷ ಕರ್ನಾಟಕಕ್ಕೆ ಹೆಚ್ಚು ಹಾನಿ ಉಂಟುಮಾಡುವ ಮಹಾರಾಷ್ಟ್ರದ ಕೊಯ್ನಾ, ರಾಧಾನಗರಿ, ವಾರಣಾ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ಈಗ ಶೇ.30ರಷ್ಟು ನೀರಿನ ಸಂಗ್ರಹವಿದೆ. ಅಲ್ಲಿನ ಜಲಾಶಯಗಳು ಶೇ.80ರಷ್ಟು ಭರ್ತಿಯಾದ ನಂತರವಷ್ಟೇ ಅಲ್ಲಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಬಗ್ಗೆ ನಾವು ಜಾಗೃತಿ ವಹಿಸಿದ್ದೇವೆ ಎಂಬುದು ನೀರಾವರಿ ನಿಗಮದ ಅಧಿಕಾರಿಗಳ ಹೇಳಿಕೆ.
ಸತತ ಎರಡು ವರ್ಷ ಉಂಟಾದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಂದು ನಮ್ಮಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ನಷ್ಟವಾಗಿತ್ತು. ಆದರೆ ನೀರು ಬಿಡುಗಡೆ ವಿಷಯದಲ್ಲಿ ಮಹಾರಾಷ್ಟ್ರದ ಜತೆ ಮೊದಲೇ ಸಂಪರ್ಕ ಹೊಂದಿದ್ದರಿಂದ ಭಾರೀ ಅನಾಹುತಗಳಾಗುವದನ್ನು ತಪ್ಪಿಸಲಾಗಿತ್ತು ಎನ್ನುತ್ತಾರೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರಿಂಗ್ ಅರವಿಂದ ಕಣಗಿಲ್.